Advertisement

Government ಸರಕಾರಿ ಸಭೆಗಳಲ್ಲಿ ಇನ್ನು ಎಂಎಲ್‌ಸಿ ಸಹ-ಅಧ್ಯಕ್ಷ !

12:04 AM Oct 05, 2023 | Team Udayavani |

ಕಾರ್ಕಳ: ಸರಕಾರ ಆಯೋಜಿಸುವ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಿ ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸಿದ್ದರೆ ಇನ್ನು ಮುಂದೆ ವಿಧಾನಪರಿಷತ್‌ ಸದಸ್ಯರು ಸಹಅಧ್ಯಕ್ಷರಾಗಿರುತ್ತಾರೆ. ಈ ಸಂಬಂಧ ವಿಧಾನ ಪರಿಷತ್‌ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಸರಕಾರಿ ಕಾರ್ಯಕ್ರಮಗಳಲ್ಲಿ ಪದೇಪದೆ ಶಿಷ್ಟಾಚಾರದ ಉಲ್ಲಂಘನೆ ಆಗುತ್ತಿರುವುದನ್ನು ತಪ್ಪಿಸಲು ಸರಕಾರದ ಈ ಆದೇಶ ಮಹತ್ವದ್ದೆನಿಸಲಿದೆ.

Advertisement

ವಿಧಾನಪರಿಷತ್‌ನಲ್ಲಿ 11 ಮಂದಿ ನಾಮನಿರ್ದೇಶಿತರು ಸೇರಿ 75 ಸದಸ್ಯರಿದ್ದಾರೆ. ಶಿಕ್ಷಕರ, ಪದವೀ ಧರರ ಸಹಿತ ವಿವಿಧ ಕ್ಷೇತ್ರಗಳಿಂದ ನೇಮಕಗೊಂಡು ಮೇಲ್ಮನೆ ಸದಸ್ಯ ರಾಗಿರುತ್ತಾರೆ. ಸರಕಾರಿ ಕಾರ್ಯ ಕ್ರಮಗಳಲ್ಲಿ ಇಂತಹ ಸದಸ್ಯರನ್ನು ಆಹ್ವಾನಿಸುವ ವೇಳೆ ಶಿಷ್ಟಾಚಾರ ಉಲ್ಲಂಘನೆ, ಅವಗಣಿಸುವ ಘಟನೆಗಳು ಮರುಕಳಿಸುತ್ತಿವೆ ಎನ್ನುವ ದೂರುಗಳು ಬಂದ ಹಿನ್ನೆಲೆಯಲ್ಲಿ ಸರಕಾರವು ವಿಧಾನ ಪರಿಷತ್‌ ಸದಸ್ಯರಿಗೂ ಸೂಕ್ತ ಸ್ಥಾನಮಾನ ನೀಡಲು ನಿರ್ಧರಿಸಿದೆ.

ಸರಕಾರಿ ಕಾರ್ಯಕ್ರಮಗಳನ್ನು ಆಯೋಜಿಸುವ ವೇಳೆ ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸುವುದು ಇದು ವರೆಗೆ ನಡೆದು ಬಂದ ಶಿಷ್ಟಾಚಾರ. ಇನ್ನು ಮುಂದೆ ಅದರ ಕೆಳಗೆ ಸಹಅಧ್ಯಕ್ಷರಾಗಿ ವಿಧಾನಪರಿಷತ್‌ ಸದಸ್ಯರ ಹೆಸರಿ ರಲಿದೆ. ಇದುವರೆಗೆ ಅತಿಥಿಗಳ ಸಾಲಿನಲ್ಲಿ ವಿಧಾನ ಪರಿಷತ್‌ ಸದಸ್ಯರು ಎಂದು ನಮೂದಿಸಲಾಗುತ್ತಿತ್ತು. ಸೆ. 10 ಮತ್ತು 18ರಂದು ನಡೆದ ವಿಧಾನ ಪರಿಷತ್ತಿನ ಹಕ್ಕುಬಾಧ್ಯತ ಸಮಿತಿಯ ಸಭೆಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಶಾಸಕರನ್ನು ಆಹ್ವಾನಿಸುವಲ್ಲಿ ಯಾವುದೇ ಲೋಪವಾಗದಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಅವರ ಜಿಲ್ಲಾ ವ್ಯಾಪ್ತಿಗೆ ಬರುವ ಎಲ್ಲ ಇಲಾಖಾ ಧಿಕಾರಿಗಳೊಂದಿಗೆ ಸಭೆ ನಡೆಸಿ 15 ದಿನಗಳೊಳಗೆ ವರದಿಯನ್ನು ಸಮಿತಿಯ ಅವಗಾಹನೆಗೆ ಒದಗಿಸಬೇಕೆಂದೂ ನಿರ್ಣಯಿಸಲಾಗಿದೆ.

ವಿಧಾನ ಪರಿಷತ್‌ ಸದಸ್ಯ(ಶಾಸಕ)ರನ್ನು ಸರಕಾರಿ ಕಾರ್ಯ ಕ್ರಮಗಳಿಗೆ ಆಹ್ವಾನಿಸುವಲ್ಲಿ ಲೋಪಗಳಾಗುತ್ತಿರುವ ಬಗ್ಗೆ ಹಲವು ವರ್ಷಗಳಿಂದ ದೂರುಗಳಿದ್ದವು. ಹಕ್ಕುಬಾಧ್ಯತ ಸಭೆಯಲ್ಲಿ ಚರ್ಚೆ ನಡೆದಿತ್ತು. ಮುಂದಿನ ದಿನಗಳಲ್ಲಿ ಲೋಪವಾಗದಂತೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹಿರಿತನದ ಆಧಾರದಲ್ಲಿ ಆಯಾ ಪ್ರತಿನಿಧಿಸುವ ಕ್ಷೇತ್ರದಲ್ಲಿ ಸಹ ಅಧ್ಯಕ್ಷರನ್ನಾಗಿ ಪರಿಷತ್ತು ಸದಸ್ಯರನ್ನು ಆಹ್ವಾನಿಸಬೇಕಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ನೀಡಲಾಗಿದೆ.
– ಮೀನಾ ನಾಯಕ್‌, ಅಧೀನ ಕಾರ್ಯದರ್ಶಿ ಕರ್ನಾಟಕ ವಿಧಾನ ಪರಿಷತ್ತು. ವಿಧಾನ ಸೌಧ ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next