Advertisement

Mangaluru: ನಾರಾಯಣ ಗುರುಗಳು ವಿಶ್ವಗುರು: ಶಾಸಕ ಕಾಮತ್‌

01:07 PM Sep 01, 2023 | Team Udayavani |

ಮಂಗಳೂರು: ಆಧ್ಯಾತ್ಮಿಕ ಕ್ಷೇತ್ರದ ಪ್ರಭೆಯಾಗಿ ಕಂಗೊಳಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜ ಸುಧಾರಣೆಯ ಮುಖೇನ ವಿಶ್ವಗುರುವಾಗಿದ್ದಾರೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಬಣ್ಣಿಸಿದರು.

Advertisement

ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಯೋಗದಲ್ಲಿ ಕುದ್ರೋಳಿ ಕ್ಷೇತ್ರದಲ್ಲಿ ಗುರುವಾರ ಆಯೋಜಿಸಲಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ರಾತ್ರಿ ಶಾಲೆಯನ್ನೂ ಆರಂಭಿಸಿ ಸಮಾಜ ಸುಧಾರಣೆಗೆ ಪಣತೊಟ್ಟ ಗುರುಗಳು ಕೇರಳ ಹಾಗೂ ಕರಾವಳಿ ಕರ್ನಾಟಕ ಭಾಗದಲ್ಲಿ ಮಾಡಿರುವ ಕ್ರಾಂತಿ ಅದ್ವಿತೀಯ ಎಂದರು.

ಗುರುಗಳು ಲೋಕಸಂತ
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿ, ನಾರಾಯಣ ಗುರುಗಳು ಯಾವುದೇ ಜಾತಿ, ಮತ, ಧರ್ಮಕ್ಕೆ ಸೀಮಿತರಲ್ಲ. ಸಮಾಜ ಸುಧಾರಣೆಯ ಮೂಲಕ ಲೋಕಸಂತರಾಗಿ ಕಂಗೊಳಿಸಿದವರು. ಗುರುಗಳ ಒಂದೊಂದು ಸಂದೇಶವೂ ನಮಗೆ ದಾರಿದೀಪ ಎಂದು ಹೇಳಿದರು.

ಸಂತ ಆ್ಯಗ್ನೆಸ್‌ ಕಾಲೇಜಿನ ಪ್ರಾಧ್ಯಾಪಕ ಡಾ| ಅರುಣ್‌ ಉಳ್ಳಾಲ ಅವರು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಸಂದೇಶ ನೀಡಿದರು. ಧಾರ್ಮಿಕ ಕ್ರಾಂತಿಗೆ ಮುನ್ನುಡಿ ಬರೆದ ಗುರುಗಳ ಕನಸಿನ ಅಮಲುಮುಕ್ತ ಸಮಾಜ ನಿರ್ಮಾಣಕ್ಕೆ ನಾವು ಜತೆಯಾಗಬೇಕು. ಮದುವೆ ಇನ್ನಿತರ ಸಮಾರಂಭವನ್ನು ಸರಳವಾಗಿ ಹಾಗೂ ಅಮಲು ರಹಿತವಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸೋಣ ಎಂದರು.

Advertisement

ಮಂಗಳೂರು ಮೇಯರ್‌ ಜಯಾನಂದ ಅಂಚನ್‌ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ ಮಾತನಾಡಿದರು. ಮನಪಾ ಸದಸ್ಯ ಅನಿಲ್‌ ಕುಮಾರ್‌, ತಹಶೀಲ್ದಾರ್‌ ಪ್ರಶಾಂತ್‌ ಪಾಟೀಲ್‌ ಹಾಜರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಾಜೇಶ್‌ ಜಿ. ಸ್ವಾಗತಿಸಿದರು.

ಅಧಿಕಾರಿಗಳ ಗೈರು; ಶಾಸಕರು ಗರಂ!
“ಕಾರ್ಯಕ್ರಮವನ್ನು ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದರೂ ಜಿಲ್ಲಾಧಿಕಾರಿ, ಸಿಇಒ ಅವರೇ ಗೈರು ಹಾಜರಾಗಿರುವುದು ಖಂಡನೀಯ. ಹಿಂದುಳಿದ ಸಮಾಜ ಸುಧಾರಕರ ಕಾರ್ಯಕ್ರಮವನ್ನು ಜಿಲ್ಲಾಡಳಿತ ಕಾಟಾಚಾರಕ್ಕೆ ಮಾಡುವುದು ಯಾಕೆ? ಹಿಂದುಳಿದ ವರ್ಗದವರು ಹಿಂದೆ ಉಳಿಯಬೇಕು ಎಂಬುದು ಆಡಳಿತ ವ್ಯವಸ್ಥೆಯ ಧೋರಣೆಯೇ?’ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಪ್ರಶ್ನಿಸಿದರು. “ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಬೇಕಿತ್ತು. ಜಿಲ್ಲಾಧಿಕಾರಿ, ಸಿಇಒ ಸಹಿತ ಜಿಲ್ಲಾಡಳಿತದ ಅಧಿಕಾರಿಗಳೂ ಇರಬೇಕಿತ್ತು. ವಿಶ್ವ ಸಂತನಿಗೆ ಜಿಲ್ಲಾಡಳಿತ ನೀಡುವ ಗೌರವ ಇದುವೇ?’ ಎಂದು ಶಾಸಕ ವೇದವ್ಯಾಸ ಕಾಮತ್‌ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next