ಹೊನ್ನಾಳಿ: ಮರಳು ಸಮಸ್ಯೆ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಂಗಳವಾರ ಬೆಳಗ್ಗೆಯಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಬುಧವಾರ ಸಂಜೆ ಅಸ್ವಸ್ಥರಾಗಿದ್ದು,
ವೈದ್ಯರು ಧರಣಿ ಸ್ಥಳದಲ್ಲಿಯೇ ಚಿಕಿತ್ಸೆ ನೀಡಿದರು.
ತಮ್ಮ ಕ್ಷೇತ್ರದಲ್ಲಿ ಮರಳು ಸಿಗದೆ ಜನ ಪರದಾಡುತ್ತಿದ್ದು, ಇದರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ರೇಣುಕಾಚಾರ್ಯ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರು. ನಂತರ, ತುಂಗಭದ್ರಾ ನದಿಗಿಳಿದು ಮರಳು ಸಂಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆಗ ರೇಣುಕಾಚಾರ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸಮಸ್ಯೆ ಪರಿಹರಿಸದ ಹಿನ್ನೆಲೆಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಬುಧವಾರ ಸಂಜೆ 5ರ ಸುಮಾರಿಗೆ ರಕ್ತದೊತ್ತಡ ಹಾಗೂ ಸಕ್ಕರೆ ಅಂಶ ಇಳಿದ ಕಾರಣ ಶಾಸಕರು ಅಸ್ವಸ್ಥರಾದರು.
ಸ್ಥಳದಲ್ಲಿಯೇ ಇದ್ದ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ| ಚಂದ್ರಪ್ಪ ನೇತೃತ್ವದ ತಂಡ ಶಾಸಕರ ತಪಾಸಣೆ ನಡೆಸಿ, ಚಿಕಿತ್ಸೆ ನೀಡಿದ್ದರಿಂದ ರಕ್ತದೊತ್ತಡ ಹಾಗೂ ಸಕ್ಕರೆ ಅಂಶ ತಹಬದಿಗೆ ಬಂತು. ಅಸ್ವಸ್ಥ ಶಾಸಕರನ್ನು ಆಸ್ಪತ್ರೆಗೆ ಸ್ಥಳಾಂತರಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದರೂ ರೇಣುಕಾಚಾರ್ಯ ಆಸ್ಪತ್ರೆಗೆ ತೆರಳದೆ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ. ಹೋರಾಟ ಬೆಂಬಲಿಸಿ ಉಪವಾಸ ಕುಳಿತ ಪ.ಪಂ ಮಾಜಿ ಸದಸ್ಯ ಪೇಟೆ ಪ್ರಶಾಂತ್ ಕೂಡಾ ಅಸ್ವಸ್ಥರಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ.