ಬೆಂಗಳೂರು: ಎಲ್ ಕೆಜಿ, ಯುಕೆಜಿ, ಪ್ರಾಥಮಿಕ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನಡೆಸುವುದು ಕಷ್ಟ. ಹಾಗಾಗಿ ಈ ಕೂಡಲೇ ರಾಜ್ಯದಲ್ಲಿ ಪ್ರಾಥಮಿಕ ತರಗತಿಯವರೆಗೆ ಆನ್ ಲೈನ್ ಕ್ಲಾಸ್ ನಡೆಸುವುದನ್ನು ನಿಲ್ಲಿಸಬೇಕು. ಅದರ ಫೀಸ್ ಪಡೆಯುವುದನ್ನೂ ನಿಲ್ಲಿಸಬೇಕು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆನ್ ಲೈನ್ ತರಗತಿಯ ಬಗ್ಗೆ ರಾಜ್ಯದಲ್ಲಿ ದೂರುಗಳು ಕೇಳಿಬಂದಿದೆ. ಈ ಬಗ್ಗೆ ಸಭೆ ನಡೆಸಿದ್ದೇವೆ. ಆನ್ ಲೈನ್ ಕಲಿಕೆ ತರಗತಿಯ ಕಲಿಕೆಗೆ ಪರ್ಯಾಯವಲ್ಲ ಎಂದು ಎಲ್ಲರೂ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಶಿಕ್ಷಣ ಎಂದರೆ ಸಿಲೆಬಸ್ ಮುಗಿಸುವುದು ಆಗಿರದೆ ಜ್ಞಾನವೃದ್ದಿ ಆಗಬೇಕು ಎಂದು ಚರ್ಚೆ ನಡೆಸಿದ್ದೇವೆ ಎಂದರು.
ರಾಜ್ಯದಲ್ಲಿ ಆನ್ ಲೈನ್ ತರಗತಿಗಳಿಗೆ ಫೀಸ್ ತೆಗೆದುಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಬೇಕು. ಈ ಸಂಕಷ್ಟದ ಸಮಯದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳು ಶಾಲಾ ಶುಲ್ಕದಲ್ಲಿ ಏರಿಕೆ ಮಾಡಬಾರದು. ಈ ಬಗ್ಗೆ ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ ಎಂದರು.
ಕೋವಿಡ್-19 ಸಮಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವ ಬಗ್ಗೆ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಸಭೆ ನಡೆಸಿದ್ದೇನೆ. ಎಲ್ಲಾ ಸಿದ್ದತೆಗಳು ನಡೆದಿದೆ. ಈ ಪರೀಕ್ಷೆಗೆ ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ ಮತ್ತು ಗೃಹ ಇಲಾಖೆ ನಮ್ಮ ಜೊತೆ ಕೈ ಜೋಡಿಸಿವೆ.
ಎಲ್ಲಾ ಮಕ್ಕಳಿಗೂ ಮಾಸ್ಕ್ ನೀಡುವ ವ್ಯವಸ್ಥೆ ಮಾಡಿದ್ದೇವೆ. ಒಂದು ವಿದ್ಯಾರ್ಥಿಗೆ ಎರಡರಿಂದ ಮೂರು ಮಾಸ್ಕ್ ನೀಡುತ್ತೇವೆ. ಪರೀಕ್ಷಾ ಕೊಠಡಿಗೆ ಬರುವ ಮೊದಲು ಸ್ಯಾನಿಟೈಸರ್ ನೀಡುತ್ತೇವೆ. ಆರೋಗ್ಯ ತಪಾಸಣೆ ನಡೆಸುತ್ತೇವೆ. ಒಂದು ವೇಳೆ ಆನಾರೋಗ್ಯ ಕಂಡುಬಂದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡುತ್ತೇವೆ ಎಂದರು.
ಎಲ್ಲಾ ಮಕ್ಕಳ ಬಗ್ಗೆ ಮಾಹಿತಿ ಪಡೆದಿದ್ದೇವೆ. ಯಾರಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ಸರ್ಕಾರಿ ಸಾರಿಗೆ ಅಗತ್ಯವಿದೆ ಎನ್ನುವ ಮಾಹಿತಿ ಪಡೆದು ಸಾರಿಗೆ ವ್ಯವಸ್ಥೆ ಮಾಡಿದ್ದೇವೆ. ಸಾರಿಗೆ ತೊಂದರೆಯಿಂದ ರಾಜ್ಯದಲ್ಲಿ ಯಾರೂ ಪರೀಕ್ಷೆ ತಪ್ಪಿಸಿಕೊಳ್ಳದಂತೆ ನಾವು ವ್ಯವಸ್ಥೆ ಮಾಡಿದ್ದೇವೆ ಎಂದರು.