ಬೆಂಗಳೂರು: ಕಾಲುಬಾಯಿ ರೋಗಕ್ಕೆ ಕೇಂದ್ರದಿಂದ 50 ಲಕ್ಷ ಡೋಸ್ ಮಂಜೂರಾಗಿದ್ದು, ಮೊದಲನೇ ಹಂತದಲ್ಲಿ ಕೇಂದ್ರದಿಂದ 25 ಲಕ್ಷ ಲಸಿಕೆ ಪೂರೈಕೆಯಾಗುತ್ತಿದೆ. ಲಸಿಕೆಯನ್ನು ಆದ್ಯತೆಯ ಮೇಲೆ ಎಲ್ಲ ಜಿಲ್ಲೆಗಳಿಗೆ ಪೂರೈಕೆ ಮಾಡಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ದಕ್ಷಿಣ ಭಾಗದಲ್ಲಿ ಕಾಲುಬಾಯಿ ರೋಗ ಹೆಚ್ಚು ಕಂಡು ಬಂದಿದ್ದು ಈಗಾಗಲೇ ರಿಂಗ್ ವ್ಯಾಕ್ಸಿಂಗ್ ಮೂಲಕ ರೋಗವನ್ನು ಹತೋಟಿಗೆ ತರಲಾಗಿದೆ. ಮೊದಲನೇ ಹಂತದಲ್ಲಿ ಬಳ್ಳಾರಿ, ಯಾದಗಿರಿ, ಗುಲ್ಬರ್ಗಾ, ರಾಯಚೂರು, ಬೀದರ್ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಆಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕಾಲುಬಾಯಿ ರೋಗ ಹೆಚ್ಚು ಕಂಡುಬರುತ್ತಿರುವ ಜಿಲ್ಲೆಗಳಲ್ಲಿ ಸ್ಯಾಂಪಲ್ ಸಂಗ್ರಹಣೆ ಮಾಡಿ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಪರೀಕ್ಷೆ ನೀಡಲಾಗಿತ್ತು, ಕರ್ನಾಟಕದಲ್ಲಿ ಓ ಮಾದರಿಯ ವೈರಸ್ ಕಂಡುಬಂದಿದೆ. ಜ್ವರ ಬಾದೆಯಿಂದ ಕರುಗಳು ಈ ರೋಗಕ್ಕೆ ಹೆಚ್ಚು ತುತ್ತಾಗುವ ಸಾಧ್ಯತೆ ಇರುವುದರಿಂದ ಪಶುಪಾಲಕರು ಕರುಗಳ ಬಗ್ಗೆ ಹೆಚ್ಚು ಕಾಳಜಿವಹಿಸಿ ಎಂದು ತಿಳಿಸಿದ್ದಾರೆ. ಎರಡನೇ ಹಂತದಲ್ಲಿ 27 ಲಕ್ಷ ಪೂರೈಕೆ ಆಗುತ್ತಿದ್ದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ
ಸದ್ಯ ರಾಜ್ಯದ 13 ಜಿಲ್ಲೆಗಳಲ್ಲಿ ಅಲ್ಲಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಂಡಿದೆ ರೋಗೋದ್ರೇಕ ಕಂಡುಬಂದ 5 ಕಿಮೀ ವ್ಯಾಪಿಯಲ್ಲಿ ಲಸಿಕೆ ನೀಡಲಾಗುತ್ತಿದೆ.
ನೊಂದ ರೈತರಿಂದ ಸಚಿವರಿಗೆ ಕರೆ: ಗದಗ್, ರಾಯಚೂರ್ ಹಾಗೂ ಮೈಸೂರು ಭಾಗದಿಂದ ಕೆಲ ರೈತರು ಹಾಗೂ ಪಶುಪಾಲಕರು ಸಚಿವರಿಗೆ ಕರೆ ಮಾಡಿ ಜಾನುವಾರುಗಳು ಅನುಭವಿಸುತ್ತಿರುವ ನೋವನ್ನು ತೋಡಿಕೊಂಡಿದ್ದಾರೆ. ಪಶುವೈದ್ಯಾಧಿಕಾರಿಗಳು ಕಾಲುಬಾಯಿ ರೋಗದಿಂದ ನರಳುತ್ತಿರುವ ಜಾನುವಾರುಗಳಿಗೆ ತುರ್ತಾಗಿ ಚಿಕಿತ್ಸೆ ನೀಡದಿರುವ ಬಗ್ಗೆ ರೈತರು ಸಚಿವರಿಗೆ ತಿಳಿಸಿದ್ದಾರೆ.
ಭರವಸೆ ನೀಡಿದ ಸಚಿವರು: ರೈತರು ಹಾಗೂ ಜಾನುವಾರು ಸಾಕಣೆದಾರರು ಯಾವುದೇ ರೀತಿಯಿಂದ ಆತಂಕಪಡುವ ಅಗತ್ಯವಿಲ್ಲ ಕಾಲುಬಾಯಿ ರೋಗಕ್ಕೆ ಇಲಾಖೆಯಲ್ಲಿ ಲಸಿಕೆ ಲಭ್ಯವಿದ್ದು ತೀವ್ರವಾಗಿ ಅವುಗಳನ್ನು ಜಾನುವಾರುಗಳಿಗೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಜಾನುವಾರುಗಳ ಆರೋಗ್ಯ ಕಾಪಾಡುವುದು ನಮ್ಮ ಇಲಾಖೆಯ ಹೊಣೆ. ಅಧಿಕಾರಿಗಳು ಕೆಲ ಜಿಲ್ಲೆಗಳಲ್ಲಿ ನಿರ್ಲಕ್ಷ್ಯ ತೋರಿದ್ದು ಕಂಡು ಬಂದಿದೆ ಮುಂದಿನ ಸಭೆಯಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ