ಶಿರಸಿ: ಉದ್ಯೋಗ ಖಾತ್ರಿ ಯೋಜನೆಯಡಿ ಬೇಡಿಕೆಯಲ್ಲಿದ್ದ ಹಳೆ ಅಡಕೆ ತೋಟಕ್ಕೆ ಮಣ್ಣು ಬದು ನಿರ್ಮಾಣಕ್ಕೆ ಪುನಃ ಅವಕಾಶ ಮಾಡಿಕೊಡಲಾಗುತ್ತದೆ. ಉಕದಲ್ಲಿ ಪ್ರಾಯೋಗಿಕವಾಗಿ ನಡೆಸಲಾಗುತ್ತದೆ. ಕೆಲಸ ಚೆನ್ನಾಗಿ ನಡೆದರೆ ಉಳಿದ ಜಿಲ್ಲೆಗೂ ಮಣ್ಣು ಬದು ನಿರ್ಮಾಣ ವಿಸ್ತರಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಹೇಳಿದರು.
ಇಲ್ಲಿನ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮಣ್ಣಿನ ಬದು ಹಾಕುವುದಕ್ಕೆ ಅವಕಾಶ ಮಾಡಿಕೊಡುತ್ತೇವೆ. ಪ್ರತಿ ತಾಲೂಕಿನಿಂದ ಕ್ರಿಯಾಯೋಜನೆ ಕಳುಹಿಸಿಕೊಡಬೇಕು. ಮಣ್ಣಿನ ಬದು ಅಳತೆಯ ಮಾನದಂಡ ಪಾರದರ್ಶಕವಾಗಿರಬೇಕು. ಯಾವುದೇ ಕಾರಣಕ್ಕೂ ದುರುಪಯೋಗ ಆಗಬಾರದು ಎಂದೂ ಎಚ್ಚರಿಸಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಈಗಾಗಲೇ ಹೊಸ ಅಡಕೆ ತೋಟ ನಿರ್ಮಾಣಕ್ಕೆ ಅವಕಾಶವಿದೆ. ಆದರೆ ಹಳೆ ತೋಟಕ್ಕೆ ಮಣ್ಣಿನ ಬದು ಹಾಕಲು ಅವಕಾಶ ಇರಲಿಲ್ಲ. ಇದರಿಂದ ಅಡಕೆ ಬೆಳೆಗಾರರಿಗೆ ತೊಂದರೆ ಆಗುತ್ತಿದ್ದವು. ಹಿಂದೆ ಈ ಅವಕಾಶವಿದ್ದ ಸಂದರ್ಭದಲ್ಲಿ ಸಾಕಷ್ಟು ರೈತರು ಇದರ ಉಪಯೋಗ ಪಡೆದಿದ್ದರು ಎಂದರು.
ನಂತರ ಈಶ್ವರಪ್ಪ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಗ್ರಾಪಂ ವ್ಯಾಪ್ತಿಯ ಟಾಸ್ಕ್ಫೋರ್ಸ್‌ನಂತೆ ಪ್ರತಿ ಮಜರೆಗಳಿಗೂ ಇಂಥ ಸಮಿತಿ ರಚಿಸಬೇಕು. ಆ ಪ್ರದೇಶದಲ್ಲಿ ಯಾರಿಗೆ ಪಾಸಿಟಿವ್ ಬಂದರೂ ಅವರನ್ನು ಕೋವಿಡ್ ಸೆಂಟರ್‌ಗೆ ಕಳುಹಿಸಬೇಕು. ಯಾರೇ ಹೊರಭಾಗದಿಂದ ಬಂದರೆ ಟೆಸ್ಟ್ ಮಾಡಿಸಿ ಹೋಮ್ ಐಸೋಲೇಶನ್‌ಗೆ ಒಳಪಡಿಸಬೇಕು, ಕೋವಿಡ್ ಖರ್ಚಿಗೆ ಗ್ರಾಪಂಗಳಿಗೆ 14ನೇ ಹಾಗೂ 15ನೆ ಹಣಕಾಸು ಯೋಜನೆ ಹಣ ಬಳಸಿಕೊಳ್ಳಲು ತಿಳಿಸಲಾಗಿದೆ. ಸರಕಾರ ಸಹ ಗ್ರಾಪಂಗೆ 50ಸಾವಿರ ರೂ. ನೀಡುತ್ತಿದೆ. ಈ ಹಣ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ನರೇಗಾದಲ್ಲಿ ಕ್ರಿಯಾ ಯೋಜನೆ ಮಾಡುವಾಗ ಗ್ರಾಪಂ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ದೇಗುಲಗಳ ಪುಷ್ಕರಣಿ, ಕಲ್ಯಾಣಿಗಳನ್ನು ಸ್ವತ್ಛತೆಗೂ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಗ್ರಾಪಂ ಆಡಳಿತ ಕಾರ್ಯ ಮಾಡಬೇಕು. ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿ ಆಗಿರುವ ಪೂರ್ಣ ಮಾಹಿತಿ ನೀಡಬೇಕು, ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲೂ ಘನತ್ಯಾಜ ಘಟಕಗಳನ್ನು ಸ್ಥಾಪಿಸಬೇಕು ಎಂದರು. ರಾಜ್ಯ ವಿಕೇಂದ್ರಿಕರಣ ಯೋಜನೆ ಹಾಗೂ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಕೃಷಿ ಜಮೀನುಗಳಲ್ಲಿ ಮನೆ ಕಟ್ಟಿಕೊಳ್ಳುವುದಕ್ಕೆ ಎನ್‌ಎ ಆಗಿಲ್ಲ ಎಂದು ಅನುಮತಿ ಸಿಗುವುದಿಲ್ಲ, ಮನೆ ಕಟ್ಟಿಕೊಂಡರೆ ವಿದ್ಯುತ್ ಸಂಪರ್ಕ, ಸಾಲ ದೊರೆಯುವುದಿಲ್ಲ. ಮನೆ, ಫಾರ್ಮಹೌಸ್ ಕಟ್ಟಲು ಅನುಮತಿ ನೀಡುವ ಅಧಿಕಾರವನ್ನು ಗ್ರಾಪಂಗಳಿಗೆ ನೀಡಬೇಕು ಎಂದು ಮನವಿ ಮಾಡಿದರು.
ಕೆಲವು ಪ್ರದೇಶಗಳು ಇತ್ತ ನಗರದಲ್ಲೂ ಇಲ್ಲ, ಅತ್ತ ಗ್ರಾಪಂಗೂ ಸೇರದೇ ಅತಂತ್ರವಾಗಿದೆ ಎಂದರು. ಜಿಪಂ ಸಿಇಒ ಪ್ರಿಯಂಕಾ, ಜಿಲ್ಲೆಯಲ್ಲಿ ಮೊದಲು ಶೇ.35ಕ್ಕೆ ತಲುಪಿದ್ದ ಕೋವಿಡ್ ಪಾಸಿಟಿವಿಟಿ ಈಗ ಶೇ.3.5ಕ್ಕೆ ಬಂದಿದೆ. ಈವರೆಗೆ 2.67ಲಕ್ಷ ಜನರಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಈಗ ಪ್ರತಿದಿನ 5 ಸಾವಿರ ಟೆಸ್ಟ್ ಮಾಡುತ್ತಿದ್ದೇವೆ. ಪಾಸಿಟಿವ್ ಬಂದವರಲ್ಲಿ ಹೆಚ್ಚಿನವರು ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈಗಲೂ ಜಾಸ್ತಿ ಸೋಂಕು ಇರುವ ಪ್ರದೇಶಗಳಿಗೆ ಮೊಬೈಲ್ ತಂಡ ತೆರಳಿ ಪರೀಕ್ಷೆ ನಡೆಸುತ್ತಿದೆ. ಜಿಲ್ಲೆಯಲ್ಲಿ ನರೇಗಾದಡಿ 322 ಕೆರೆ ಅಭಿವೃದ್ಧಿಪಡಿಸುತ್ತಿದ್ದೇವೆ. ಅದರಲ್ಲಿ 199 ಕೆರೆಗಳ ಕೆಲಸ ಪೂರ್ಣವಾಗಿದೆ. ನರೇಗಾದಲ್ಲಿ ಶೇ.73.46ರಷ್ಟು ಸಾಧನೆಯಾಗಿದೆ. 231 ಘನತ್ಯಾಜ್ಯ ಘಟಕ ಸ್ಥಾಪನೆಗೆ 64ಕಡೆಗಳಲ್ಲಿ ಸ್ಥಳ ದೊರೆತಿದೆ. ಇನ್ನುಳಿದ ಕಡೆಗಳಲ್ಲಿ ಇನ್ನಷ್ಟೇ ದೊರಕಬೇಕಿದೆ ಎಂದು ಮಾಹಿತಿ ನೀಡಿದರು.