Advertisement

ಜನಾಭಿಪ್ರಾಯಕ್ಕೆ ಬೆಲೆ ಕೊಡದಿದ್ದರೆ ಪ್ರಜಾಪ್ರಭುತ್ವ ಉಳಿಯದು: ಜಗದೀಪ್‌ ಧನ್‌ಕರ್‌

12:08 AM Jan 08, 2025 | Team Udayavani |

ಧರ್ಮಸ್ಥಳ: ಸಶಕ್ತ ಪ್ರಜಾಪ್ರಭುತ್ವ ನಮ್ಮಲ್ಲಿದ್ದು, ಜನ ಪ್ರತಿನಿಧಿ  ಗಳು ಜನರ ಅಭಿಪ್ರಾಯಗಳಿಗೆ, ಆದ್ಯತೆಗೆ ಬೆಲೆ ಕೊಡಬೇಕಿದೆ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಂಗಳವಾರ ಭಕ್ತಾದಿಗಳಿಗೆ ಸುಸಜ್ಜಿತ ಸೌಕರ್ಯಗಳುಳ್ಳ ಸರತಿ ಸಾಲಿನ ವ್ಯವಸ್ಥೆಯನ್ನೊಳಗೊಂಡ ನೂತನ ಸಂಕೀರ್ಣ “ಶ್ರೀಸಾನ್ನಿಧ್ಯ’ ಮತ್ತು 2024-25 ರ ಜ್ಞಾನದೀಪ ಕಾರ್ಯಕ್ರಮದ ಶುಭಾರಂಭ ನೆರವೇರಿಸಿ ಅವರು ಮಾತನಾಡಿದರು.

ಸಂವಿಧಾನವೇ ನಮ್ಮಲ್ಲಿ ಪರಮೋತ್ಛವಾದುದು. ಜನರ ಮತಕ್ಕೆ ಬೆಲೆ ಇದ್ದರೆ ಮಾತ್ರ ಸಶಕ್ತ ಪ್ರಜಾಪ್ರಭುತ್ವ ಸಾಧ್ಯ ಎಂದರಲ್ಲದೇ, ಪ್ರಜಾಪ್ರಭುತ್ವ ನಮಗೆ ಎಲ್ಲ ಸ್ವಾತಂತ್ರ್ಯವನ್ನೂ ನೀಡಿದೆ ಎಂದು ಹೇಳಿದರು.

ಯಾವುದಕ್ಕೂ ದ್ವೇಷ ಉತ್ತರವಲ್ಲ. ದೇಶದಲ್ಲಿ ಸಮಗ್ರತೆ, ವೈವಿಧ್ಯತೆಯನ್ನು ಉಳಿಸಿಕೊಳ್ಳಬೇಕು. ಸೌಹಾರ್ದ ವಾತಾವರಣ ಉಳಿಸಿಕೊಳ್ಳಬೇಕು. ಸಾಮಾಜಿಕ ಸದ್ಭಾವ ಸಾಧ್ಯವಾಗಬೇಕಾದರೆ ಭಾರತಮಾತೆ ಒಂದೇ ಎಂದು ಭಾವಿಸಬೇಕು. ಇದಕ್ಕಾಗಿ ದೇಶವೇ ತಮ್ಮ ಮೊದಲ ಆದ್ಯತೆ ಎಂದು ತಿಳಿದು ದುಡಿಯಬೇಕಿದೆ ಎಂದು ಹೇಳಿದರು.

Advertisement

ಬಾಹ್ಯ ಶಕ್ತಿಗೆ ಅವಕಾಶ ನೀಡಬೇಡಿ
ನಾವು ರಾಜಕೀಯವಾಗಿ ಇನ್ನಷ್ಟು ಬಲಗೊಂಡು ದೇಶವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು. ಮೆಸಪಟೋಮಿಯಾ, ಚೀನಾ ನಾಗರಿಕತೆ ನಾಶವಾಗಿದೆ. ಆದರೆ ನಮ್ಮ ನಾಗರಿಕತೆ ಮಾತ್ರ ಇನ್ನೂ ಬೆಳೆಯುತ್ತಿದೆ. ಅದೇ ನಮ್ಮ ಶಕ್ತಿ ಎಂದರು.

ಬಾಹ್ಯ ಶಕ್ತಿಗಳು ನಮ್ಮನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಸಾರ್ವಜನಿಕ ಸೊತ್ತುಗಳನ್ನು ನಾಶಮಾಡುವಂತಹ ವೈಪರೀತ್ಯಗಳೂ ಸಂಭವಿಸುತ್ತಿವೆ. ಅದಕ್ಕೆ ಅವಕಾಶ ನೀಡದೇ, 2047ರ ವೇಳೆಗೆ ಪರಿಪೂರ್ಣ ಸಶಕ್ತ ಭಾರತದ ಗುರಿಯನ್ನು ಸಾಧ್ಯವಾ ಗಿಸಬೇಕು. ಅದಕ್ಕಾಗಿ ಜನರು ದೇಶ ಸೇವೆಗೆ ಮುಂದಾಗಬೇಕು ಎಂದರು.

ದೇಶವೇ ಮೊದಲ ಆದ್ಯತೆ: ರಾಜಕಾರಣಿಗಳು ವಿಭಿನ್ನ ಸಿದ್ಧಾಂತ ಹೊಂದಿರಬಹುದು. ಆದರೆ ನಮ್ಮ ಸಂಸ್ಕೃತಿ, ಸಂಸ್ಕಾರ ಮರೆಯುವುದು ಸಲ್ಲದು. ದಿನದ 24 ಗಂಟೆಯೂ ರಾಜಕಾರಣವೇ ಮುಖ್ಯವಾಗಿರಬೇಕೇ ? ದೇಶ ಸೇವೆಗೆ ಸಮಯ ವಿನಿಯೋಗ ಬೇಡವೇ? ಎಂದು ಪ್ರಶ್ನಿಸಿದ ಅವರು, ನಮ್ಮ ಸಮಾಜ ಯಾಕೆ ಧ್ರುವೀಕರಣ ಆಗುತ್ತಿದೆ ಎಂಬುದರ ಕುರಿತೂ ಯೋಚಿಸಬೇಕು ಎಂದು ಹೇಳಿದರು.

ಭಾರತೀಯ ಕಾರ್ಪೊರೇಟ್‌ ಸಂಸ್ಥೆಗಳು ಧಾರ್ಮಿಕ ಸಂಸ್ಥೆಗಳ ಮೂಲಸೌಕರ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತೇಜಿಸಲು ಸಿಎಸ್‌ಆರ್‌ನಿ ಧಿಯನ್ನು ಕಾಣಿಕೆಯಾಗಿ ನೀಡುತ್ತಿವೆ. ಈ ಭೂಮಿಯನ್ನು ಪರಿಸರಸ್ನೇಹಿಯಾಗಿ ಕಾಣುವುದರ ಜೊತೆಗೆ ಎಳವೆಯಲ್ಲೇ ಮಕ್ಕಳು ಧಾರ್ಮಿಕತೆಗೆ ತೆರೆದುಕೊಳ್ಳುವಂತೆ ಮಾಡಬೇಕು. ದೇಶಕ್ಕಾಗಿ ಕೆಲಸ ಮಾಡುವ ಮಾನಸಿಕತೆಯನ್ನು ಬೆಳೆಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಸರತಿ ಸಾಲಿನಲ್ಲಿ ಕಾಯುವ ಭಕ್ತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಶ್ರೀ ಸಾನಿಧ್ಯ ನಿರ್ಮಿಸಲಾಗಿದೆ. ಇಲ್ಲಿ ಆಧುನಿಕ ತಂತ್ರಜ್ಞಾನ, ಭದ್ರತೆಯೊಂದಿಗೆ ಸಕಲ ಸೌಲಭ್ಯ ಒದಗಿಸಲಾಗಿದೆ. ಹಾಗೆಯೇ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಲು ಜ್ಞಾನದೀಪ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಉಪರಾಷ್ಟ್ರಪತಿಯವರನ್ನು ಡಾ| ಹೆಗ್ಗಡೆ ಹಾಗೂ ಡಾ| ಸುದೇಶ್‌ ಧನ್‌ಕರ್‌ ಅವರನ್ನು ಹೇಮಾವತಿ ವೀ. ಹೆಗ್ಗಡೆಯವರು ಗೌರವಿಸಿದರು.

ಮುಖ್ಯ ಅತಿಥಿ ಡಾ| ಸುದೇಶ್‌ ಧನ್‌ಕರ್‌, ಜ್ಞಾನವಿಕಾಸ ಮಹಿಳಾ ಸಶಕ್ತೀಕರಣ ಕಾರ್ಯಕ್ರಮ ಅಧ್ಯಕ್ಷೆ ಡಾ| ಹೇಮಾವತಿ ವೀ. ಹೆಗ್ಗಡೆ, ಸಂಸದ ಕ್ಯಾ| ಬ್ರಿಜೇಶ್‌ ಚೌಟ, ಶಾಸಕ ಹರೀಶ್‌ ಪೂಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್‌ ಎಸ್‌.ಎಸ್‌., ಡಿ. ಸುರೇಂದ್ರ ಕುಮಾರ್‌, ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್‌ ಉಪಸ್ಥಿತರಿದ್ದರು.

ಸಮಾನತೆ ದರ್ಶನ
ಧಾರ್ಮಿಕ ಸ್ಥಳಗಳಲ್ಲಿ ವಿಐಪಿ ಸಂಸ್ಕೃತಿಗೆ ಹೆಚ್ಚಿನ ಸ್ಥಾನ ನೀಡಬಾರದು. ಇದು ದೈವತ್ವಕ್ಕೆ ವಿರುದ್ಧ. ಧಾರ್ಮಿಕ ಸಂಸ್ಥೆಗಳು ಸಮುದಾಯ ಸೇವೆಯ ಕೇಂದ್ರಗಳಾಗಿವೆ. ಧರ್ಮಸ್ಥಳ ಕ್ಷೇತ್ರವು ಗ್ರಾಮೀಣ ಭಾರತಕ್ಕೆ ಸೇವೆ ಸಲ್ಲಿಸುತ್ತಿದೆ. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಿ, ಸಮಾನತೆಯನ್ನು ತರುವಲ್ಲಿ ಧರ್ಮಸ್ಥಳ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಜಗದೀಪ್‌ ಧನಕರ್‌ ಹೇಳಿದರು.

ಧರ್ಮಸ್ಥಳದಲ್ಲಿ ಮಂಜುನಾಥ ದೇವರ ದರ್ಶನಕ್ಕೆ ಬರುವ ಭಕ್ತರಿಗಾಗಿ ಕ್ಯೂ ಕಾಂಪ್ಲೆಕ್ಸ್‌ ಮಾಡಿದ್ದಾರೆ. ಇದು ಕೇವಲ ಕಟ್ಟಡ ಮಾತ್ರ ಅಲ್ಲ, ವೈದ್ಯಕೀಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಕೇಂದ್ರ. ಎಲ್ಲ ಜನರಿಗೆ ಒಂದೇ ಕಡೆ ನಿಲ್ಲುವ ವ್ಯವಸ್ಥೆ ಮಾಡಿದ್ದು ಸಮಾನತೆಯ ಪ್ರತೀಕ ಎಂದು ಶ್ಲಾಘಿಸಿದರು.

ಧಾರ್ಮಿಕ ಸಂಸ್ಥೆಗಳ ಪಾತ್ರ ಗಣನೀಯ
ಈ ದೇಶದಲ್ಲಿ ಸಂಸ್ಕೃತಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಧಾರ್ಮಿಕ ಸಂಸ್ಥೆಗಳು ತಮ್ಮದೇ ಕೊಡುಗೆ ನೀಡುತ್ತಿವೆ ಎಂದು ಹೇಳಿದ ಉಪರಾಷ್ಟ್ರಪತಿಯವರು, ಧಾರ್ಮಿಕ ಸಂಸ್ಥೆಗಳೇ ಗ್ರಾಮೀಣ ಪ್ರದೇಶದ ಶಕ್ತಿ. ಶಿಕ್ಷಣವೇ ಸಮಾನತೆ ತರುವ ಮುಖ್ಯ ಸಾಧನ ಎಂದರು.

ಭಾರತದ ಆಧ್ಯಾತ್ಮಿಕತೆಯ ಪ್ರತಿಬಿಂಬ ಧರ್ಮಸ್ಥಳ
ಭಾರತವು ಆಧ್ಯಾತ್ಮಿಕತೆಯ ತವರೂರು. ಶ್ರೀ ಕ್ಷೇತ್ರ ಧರ್ಮಸ್ಥಳ ಅದರ ಪ್ರತಿಬಿಂಬ. “ಶ್ರೀ ಸಾನ್ನಿಧ್ಯ’ ಭವ್ಯ ಕ್ಯೂ ಕಾಂಪ್ಲೆಕ್ಸ್‌ ಕೇವಲ ಕಟ್ಟಡ ಮಾತ್ರವಾಗಿರದೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಶ್ರೀ ಮಂಜುನಾಥ ಸ್ವಾಮಿ ಹಾಗೂ ಭಕ್ತರ ನಡುವೆ ಭಾವನಾತ್ಮಕ ಸಂಬಂಧವನ್ನು ಬೆಸೆಯಲಿದೆ ಎಂದು ಅಭಿಪ್ರಾಯಪಟ್ಟರು ಉಪರಾಷ್ಟ್ರಪತಿಯವರು.

ಧರ್ಮಸ್ಥಳ ಕ್ಷೇತ್ರವು ಗ್ರಾಮೀಣ ಭಾರತದ ನಾಡಿಮಿಡಿತ. ಶಿಕ್ಷಣ, ಆರೋಗ್ಯ ಸಹಿತ ಚತುರ್ದಾನದ ಮೂಲಕ ಕ್ಷೇತ್ರವು ಎಲ್ಲವನ್ನು ಪ್ರತಿನಿಧಿಸುವ ಮೂಲಕ ಸರ್ವಧರ್ಮ ಸಮನ್ವಯ ಕ್ಷೇತ್ರವಾಗಿದೆ. ಪ್ರಪಂಚವು ಡಿಜಿಟಲ್‌ ಕ್ರಾಂತಿಯಲ್ಲಿದ್ದು, ಅತ್ಯಾಧುನಿಕ ತಂತ್ರಜ್ಞಾನದೆಡೆ ಭಾರತವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಮಾನವೀಯ ಮೌಲ್ಯ, ಸಂಸ್ಕೃತಿ, ಆಧ್ಯಾತ್ಮಿಕ ಆದ್ಯತೆಯೊಂದಿಗೆ ಭವ್ಯ ಭಾರತವಾಗಿ ಯುವ ಸಮುದಾಯನ್ನು ಪ್ರತಿನಿಧಿಸುತ್ತಿದೆ ಎಂದರು.

-ಮಧ್ಯಾಹ್ನ 1.45ಕ್ಕೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಉಪರಾಷ್ಟ್ರಪತಿ ಆಗಮನ.
-2 ಗಂಟೆಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ
-2.10 ಗಂಟೆಗೆ ಶ್ರೀ ಸಾನ್ನಿಧ್ಯ ಸಭಾಂಗಣ ಲೋಕಾರ್ಪಣೆ
-ಆಬಳಿಕ ಅಮೃತವರ್ಷಿಣಿ ಸಭಾಭವನಕ್ಕೆ ಆಗಮನ
-3.10ಕ್ಕೆ ವಾಯುಪಡೆಯ ವಿಶೇಷ ವಿಮಾನದಲ್ಲಿ ನಿರ್ಗಮನ

ಜ್ಞಾನದೀಪ ಕಾರ್ಯಕ್ರಮ
ರಾಜ್ಯದಲ್ಲಿ ಗ್ರಾಮೀಣ ಶಿಕ್ಷಣವನ್ನು ಬಲಪಡಿಸುವ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ ಲೋಕಾರ್ಪಣೆ. 65 ಸಾವಿರ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿವೇತನ ವಿತರಣೆ. ಗ್ರಾಮೀಣ ಶಾಲೆಗಳಿಗೆ 1028 ಸೇರಿ 9,278 ಶಿಕ್ಷಕರ ನೇಮಕ. ಪ್ರಸ್ತುತ 4,000 ಬೆಂಚ್‌-ಡೆಸ್ಕ್ ವಿತರಣೆ. 6821 ಪ್ರಾಥಮಿಕ ಶಾಲೆ, 1019 ಅಂಗನವಾಡಿ, ಬಾಲವಾಡಿ, 4,982 ಆಟದ ಮೈದಾನ, 787 ಶೌಚಾಲಯ ಇತ್ಯಾದಿ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗಿದೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next