Advertisement

ಲಂಕೆಯನ್ನು ಸಂಕಷ್ಟಕ್ಕೆ ನೂಕಿದ ಚೀನಗೆ ಸಚಿವ ಜೈಶಂಕರ್‌ ಟಾಂಗ್‌

10:02 PM Jan 20, 2023 | Team Udayavani |

ಕೊಲೊಂಬೋ/ಬೀಜಿಂಗ್‌: “ನಾವು ಸಂಕಷ್ಟದಲ್ಲಿರುವ ನೆರೆಹೊರೆಯವರಿಗೆ ಸಹಾಯಹಸ್ತ ಚಾಚುತ್ತೇವೆಯೇ ಹೊರತು, “ನಿಮ್ಮ ಕರ್ಮ, ನೀವೇ ಅನುಭವಿಸಿ’ ಎಂದು ಹೇಳಿ ಓಡಿಹೋಗುವವರಲ್ಲ.’

Advertisement

ಇದು ಶ್ರೀಲಂಕಾವನ್ನು ಅರ್ಧ ನೀರಿನಲ್ಲಿ ಕೈಬಿಟ್ಟು ಓಡಿಹೋದ ಚೀನದ ಹೊಣೆಗೇಡಿತನದ ಕುರಿತು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಆಡಿರುವ ಮಾತುಗಳು.

ತೀವ್ರ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾಗೆ ಭೇಟಿ ನೀಡಿರುವ ಜೈಶಂಕರ್‌ ಅವರು ಶುಕ್ರವಾರ, ಚೀನ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು. ನಾವು “ನೆರೆಹೊರೆಯವರಿಗೆ ಆದ್ಯತೆ’ ನೀಡುವವರು. ಅವರು ಕಷ್ಟದಲ್ಲಿರುವಾಗ ಮಿಡಿಯುವವರು. ಮಿತ್ರನೆಂದು ಹೇಳಿ ಮೋಸ ಮಾಡುವವರಲ್ಲ ಎಂದರು.

ಚೀನವು ಸಣ್ಣಪುಟ್ಟ ರಾಷ್ಟ್ರಗಳನ್ನು ತನ್ನ ಸಾಲದ ಬಲೆಯೊಳಗೆ ಸಿಲುಕಿಸಿ, ಕೊನೆಗೆ ಆ ದೇಶಗಳನ್ನು ಹೈರಾಣಾಗಿಸಿ, ಆರ್ಥಿಕತೆಯನ್ನು ಬುಡಮೇಲು ಮಾಡಿದ ಎಷ್ಟೋ ಉದಾಹರಣೆಗಳಿವೆ. ಅದೇ ಮಾದರಿಯಲ್ಲಿ ಶ್ರೀಲಂಕಾದ ಆರ್ಥಿಕತೆಯನ್ನೂ ನಾಶ ಮಾಡಿದ ಆರೋಪವನ್ನು ಚೀನ ಎದುರಿಸುತ್ತಿದೆ. ಮಿತ್ರನಂತೆ ನಾಟಕವಾಗಿ, ಸಾಲವನ್ನು ತಂದು ಸುರಿಯುತ್ತಿದ್ದ ಚೀನ, ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಎದುರಿಸಿದಾಗ ಪುನಶ್ಚೇತನಕ್ಕೆ ಯಾವುದೇ ನೆರವನ್ನು ನೀಡಲಿಲ್ಲ.

ಬಿಕ್ಕಟ್ಟಿನಲ್ಲಿರುವ ಲಂಕೆಯ ಸಾಲವನ್ನು ಮನ್ನಾ ಮಾಡಿ, ಆ ದೇಶವನ್ನು ಮತ್ತೆ ಹಳಿಗೆ ತರಲು ಚೀನ ಪ್ರಯತ್ನಿಸಬಹುದಿತ್ತು ಎಂಬ ಒತ್ತಾಸೆಯು ಅಂತಾರಾಷ್ಟ್ರೀಯ ಮಟ್ಟದಿಂದ ಕೇಳಿಬಂದಿತ್ತು. ಆದರೂ, ಚೀನ ಒಂದು ಪೈಸೆಯ ಸಹಾಯವನ್ನೂ ಮಾಡದೇ ಲಂಕೆಯನ್ನು ಮತ್ತಷ್ಟು ಅಧೋಗತಿ ನೂಕಿತು. ಇದನ್ನೇ ಪರೋಕ್ಷವಾಗಿ ಪ್ರಸ್ತಾಪಿಸಿ ಜೈಶಂಕರ್‌ ಚೀನಾ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ 24 ಸಾವಿರ ಕೋಟಿ ರೂ. ಸಾಲ ಪಡೆಯಲು ಹೋರಾಡುತ್ತಿರುವ ಶ್ರೀಲಂಕಾಗೆ ಭಾರತವು ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದೆ. ನಾವು ನಿಮಗೆ ಎಲ್ಲ ರೀತಿಯಲ್ಲೂ ಹಣಕಾಸು ನೆರವು ನೀಡುತ್ತೇವೆ ಎಂಬ ವಾಗ್ಧಾನವನ್ನೂ ಜೈಶಂಕರ್‌ ನೀಡಿದ್ದಾರೆ.

“ಭಾರತವು ಇನ್ನೊಬ್ಬರಿಗಾಗಿ ಕಾಯದೇ, ನಮಗೇನು ಸರಿ ಕಾಣುತ್ತದೋ ಅದನ್ನೇ ಮಾಡಬೇಕು ಎಂದು ನಿರ್ಧರಿಸಿದೆ. ಇದರಿಂದ ಶ್ರೀಲಂಕಾದ ಸ್ಥಿತಿಯನ್ನು ಬಲಿಷ್ಠಗೊಳಿಸುವುದು ಮಾತ್ರವಲ್ಲ, ಎಲ್ಲ ದ್ವಿಪಕ್ಷೀಯ ಸಾಲಗಾರರನ್ನು ಸಮಾನವಾಗಿ ಕಾಣಬೇಕು ಎಂಬ ಸಂದೇಶವನ್ನೂ ರವಾನಿಸುತ್ತದೆ’ ಎಂದಿದ್ದಾರೆ. ಕಳೆದ ವರ್ಷ ಲಂಕಾದ ಸ್ಥಿತಿ ಹದಗೆಟ್ಟಿದ್ದಾಗ ಭಾರತ 32 ಸಾವಿರ ಕೋಟಿ ರೂ.ಗಳ ಹಣಕಾಸು ನೆರವನ್ನು ನೀಡಿತ್ತು.

ಧನ್ಯವಾದ ಹೇಳಿದ ಲಂಕಾ:
ಸಂಕಷ್ಟದ ಸಮಯದಲ್ಲಿ ನಮ್ಮ ಬೆನ್ನಿಗೆ ನಿಂತು, ಅಗತ್ಯ ನೆರವು ನೀಡಿರುವ ಭಾರತಕ್ಕೆ ಮತ್ತು ಪ್ರಧಾನಿ ಮೋದಿಯವರಿಗೆ ನಾವು ಆಭಾರಿಗಳು ಎಂದು ಶ್ರೀಲಂಕಾ ಅಧ್ಯಕ್ಷ ರಣಿಲ್‌ ವಿಕ್ರಮಸಿಂಘೆ, ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ ಹೇಳಿದ್ದಾರೆ.

ನಿಮಗೆ ತಾಜಾ ತರಕಾರಿ ಸಿಗುತ್ತಿದೆಯೇ?
– ಚೀನ ಸೈನಿಕರಿಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಪ್ರಶ್ನೆ
– ಯುದ್ಧ ಸನ್ನದ್ಧತೆ ಪರಿಶೀಲಿಸಿದ ಚೀನ ಅಧ್ಯಕ್ಷ
ಶುಕ್ರವಾರ ಪೂರ್ವ ಲಡಾಖ್‌ನ ಭಾರತ-ಚೀನ ಗಡಿಯಲ್ಲಿ ನಿಯೋಜನೆಗೊಂಡಿರುವ ಚೀನದ ಸೈನಿಕರೊಂದಿಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ವಿಡಿಯೋ ಸಂವಾದ ನಡೆಸಿ, ಯುದ್ಧ ಸನ್ನದ್ಧತೆಯನ್ನು ಪರಿಶೀಲಿಸಿದ್ದಾರೆ. ಪೀಪಲ್ಸ್‌ ಲಿಬರೇಷನ್‌ ಆರ್ಮಿ ಪ್ರಧಾನ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಕ್ಸಿ, ಇತ್ತೀಚಿನ ವರ್ಷಗಳಲ್ಲಿ ಗಡಿ ಪ್ರದೇಶವು ಹೇಗೆ ಬದಲಾವಣೆಯಾಗುತ್ತಿದೆ ಮತ್ತು ಅದು ಸೇನೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ, “ನಿಮಗೆ ತಾಜಾ ತರಕಾರಿಗಳು ಲಭ್ಯವಾಗುತ್ತಿವೆಯಲ್ಲವೇ’ ಎಂದೂ ಅವರು ಪ್ರಶ್ನಿಸಿದ್ದಾರೆ.

ಚೀನದಿಂದ ಹೊಸ ಅಣೆಕಟ್ಟು?
ಟಿಬೆಟ್‌ನಲ್ಲಿರುವ ಗಂಗಾ ನದಿಯ ಉಪನದಿಗೆ ಚೀನಾ ಅಣೆಕಟ್ಟೊಂದನ್ನು ನಿರ್ಮಿಸುತ್ತಿದೆಯೇ? ಹೌದು ಎನ್ನುತ್ತಿವೆ ಉಪಗ್ರಹ ಚಿತ್ರಗಳು. ಟಿಬೆಟ್‌ನ ಬುರಾಂಗ್‌ ಕೌಂಟಿಯ ನದಿಯಲ್ಲಿ ಚೀನದಿಂದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಭಾರತ-ನೇಪಾಳದೊಂದಿಗಿನ ಗಡಿ ಪ್ರದೇಶಕ್ಕೆ ಸಮೀಪದಲ್ಲೇ ಈ ಅಣೆಕಟ್ಟು ನಿರ್ಮಾಣಗೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

 

 

 

Advertisement

Udayavani is now on Telegram. Click here to join our channel and stay updated with the latest news.

Next