Advertisement
ಬಿಬಿಎಂಪಿ ಬಜೆಟ್ ಮೇಲಿನ ಚರ್ಚೆಗೆ ಸಂಬಂಧಿಸಿದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಡಾ.ಅಶ್ವತ್ಥ ನಾರಾಯಣ, ನಗರದಲ್ಲಿ ನಿತ್ಯ 3,500 ಟನ್ ಕಸ ಉತ್ಪಾದನೆ ಆಗುತ್ತಿದೆ. ಈ ಪೈಕಿ ಸ್ವತಃ ಬಿಬಿಎಂಪಿ ಜಂಟಿ ಆಯುಕ್ತರು ನೀಡಿದ ಮಾಹಿತಿ ಪ್ರಕಾರ ಕನಿಷ್ಠ 1,542 ಟನ್ ಹಸಿ ಮತ್ತು ಒಣ ತ್ಯಾಜ್ಯವು ಮೂಲದಲ್ಲೇ ವಿಂಗಡಣೆಯಾಗಿ ಬರುತ್ತಿದೆ. ಇನ್ನು 2,800 ಟನ್ ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಕಸ ಸಂಸ್ಕರಣಾ ಘಟಕಗಳು ಹೊಂದಿವೆ.
Related Articles
Advertisement
ಸದಸ್ಯ ಕಟ್ಟೆ ಸತ್ಯನಾರಾಯಣ ಮಾತನಾಡಿ, ಆಟೋ ಚಾಲಕರು ಮತ್ತು ಸಹಾಯಕರು ನೇರವಾಗಿ ಬಿಬಿಎಂಪಿಯಿಂದ ವೇತನ ಪಾವತಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗಿಳಿದಿದ್ದಾರೆ. ಇದರಿಂದ ಅನೇಕ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಆಗಿಲ್ಲ. ತಕ್ಷಣ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಉಲ್ಬಣಗೊಳ್ಳಲಿದೆ ಎಂದು ಹೇಳಿದರು. ಇದಕ್ಕೆ ಸದಸ್ಯೆ ಜಿ. ಪದ್ಮಾವತಿ ದನಿಗೂಡಿಸಿದರು.
ಸರ್ಕಾರಿ ಆದೇಶ; ಆಯುಕ್ತರ ಸ್ಪಷ್ಟನೆ: ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಎನ್. ಮಂಜುನಾಥ ಪ್ರಸಾದ್, ಕಸ ಸಾಗಣೆ ಮಾಡುವ ಆಟೋಗಳು ಮತ್ತು ಕಾಂಪ್ಯಾಕ್ಟರ್ಗಳನ್ನು ಗುತ್ತಿಗೆ ಮೂಲಕ ಪಡೆಯಲಾಗಿರುತ್ತದೆ. ಅವುಗಳಿಗೆ ಚಾಲಕರು ಮತ್ತು ಸಹಾಯಕರನ್ನು ನೀಡುವ ಜವಾಬ್ದಾರಿಯೂ ಆಯಾ ಗುತ್ತಿಗೆದಾರರ ಜವಾಬ್ದಾರಿ ಆಗಿದೆ ಎಂದರು.
“ಅಷ್ಟಕ್ಕೂ ಪ್ರತಿಭಟನಾಕಾರರಿಗೆ ಒಂದು ಆಯ್ಕೆ ನೀಡಲಾಗುವುದು. ಹೈದರಾಬಾದ್ ಮಾದರಿಯಲ್ಲಿ ಚಾಲಕರು, ಸಹಾಯಕರು ವಾರ್ಡ್‌ವಾರು ಸೊಸೈಟಿ ಮಾಡಿಕೊಂಡರೆ, ತಲಾ ವಾರ್ಡ್‌ಗೆ ಕನಿಷ್ಠ 50 ಆಟೋಗಳನ್ನು ತಯಾರಕರ ಕಂಪೆನಿಗಳೊಂದಿಗೆ ಚರ್ಚಿಸಿ ನೀಡಲಾಗುವುದು. ಪ್ರತಿ ತಿಂಗಳು ನೀಡುವ ಬಾಡಿಗೆಯಲ್ಲಿ ಕಡಿತ ಮಾಡಲಾಗುವುದು ಎಂದರು.
ಸದಸ್ಯೆ ನೇತ್ರಾ ಮಾತನಾಡಿ, ಶಾಲಾ-ಕಾಲೇಜುಗಳೂ ಇಂದು ವಾಣಿಜ್ಯೀಕರಣಗೊಂಡಿದ್ದು, ಲಕ್ಷಗಟ್ಟಲೆ ಡೊನೇಷನ್ ಪಡೆಯುತ್ತಿವೆ. ಹೀಗಿರುವಾಗ, ಅವುಗಳಿಗೆ ತೆರಿಗೆಯಿಂದ ವಿನಾಯ್ತಿ ನೀಡುವುದು ಸರಿ ಅಲ್ಲ. ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಸಂಪತ್‌ರಾಜ್, ಈ ಸಂಬಂಧ ಪ್ರತ್ಯೇಕ ಸಭೆ ಕರೆಯಲಾಗುವುದು ಎಂದರು.
ಅನುಮೋದನೆಗೆ ವಿರೋಧ: ಪಾಲಿಕೆಯ ಆದಾಯ ನಿರೀಕ್ಷೆಯೇ 5,500 ಕೋಟಿ ರೂ. ಆದರೆ, ಬಜೆಟ್ ಗಾತ್ರ 9,325 ಕೋಟಿ ರೂ. ಇದೆ. ಅವಾಸ್ತವಿಕವಾದ ಬಜೆಟ್ ಹಿಂಪಡೆದು, ವಾಸ್ತವಿಕ ಬಜೆಟ್ ಮಂಡನೆ ಮಾಡಬೇಕು. ಇಲ್ಲದಿದ್ದರೆ, ಬಜೆಟ್ ಅನುಮೋದನೆಗೆ ಬೆಂಬಲ ನೀಡುವುದಿಲ್ಲ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ತಿಳಿಸಿದರು.
ಪಾಲಿಕೆಯ ಆದಾಯ ತೆರಿಗೆ ನಿರೀಕ್ಷೆ ಅಬ್ಬಬ್ಟಾ ಎಂದರೆ 3,300 ಕೋಟಿ ರೂ. ಇನ್ನು 300 ಕೋಟಿ ಕೇಂದ್ರದ ಅನುದಾನವಾಗಿದೆ. ಮಾರ್ಚ್ ಅಂತ್ಯದೊಳಗೆ ರಾಜ್ಯ ಸರ್ಕಾರದಿಂದ 2,500 ಸಾವಿರ ಕೋಟಿ ಬರುವುದು ಅಸಾಧ್ಯ. ಹೀಗಿರುವಾಗ ಬೃಹತ್ ಗಾತ್ರದ ಬಜೆಟ್ ಮಂಡನೆ ಅವಶ್ಯಕತೆಯೇ ಇರಲಿಲ್ಲ ಎಂದರು.
ಲೆಕ್ಕ ಕೊಡಿ: ವಿವಿಧ ಕಾಮಗಾರಿಗಳಿಗೆ ಅವೈಜ್ಞಾನಿಕವಾಗಿ ಖರ್ಚು ಮಾಡಿದ ಹಣದ ಬಗ್ಗೆ ಲೆಕ್ಕಕೊಡುವಂತೆ ಪದ್ಮನಾಭ ರೆಡ್ಡಿ ಕೇಳಿದರು. ಕೆಂಪಾಪುರದಲ್ಲಿ ನಾಡಪ್ರಭು ಕೆಂಪೇಗೌಡರ ಸಮಾಧಿಗೆ 6 ಕೋಟಿ ಖರ್ಚು ಮಾಡಲಾಗಿದೆ.
ಆದರೆ, ಅಲ್ಲಿ ಶಿಥಿಲಾವಸ್ಥೆಯಲ್ಲಿರುವ ಕೆಂಪೇಗೌಡರ ಗೋಪುರವನ್ನೂ ದುರಸ್ತಿ ಮಾಡಿಲ್ಲ. ಕೆಂಪೇಗೌಡರ ಅಧ್ಯಯನ ಪೀಠಕ್ಕೆ 50 ಕೋಟಿ ಖರ್ಚು ಎಂದು ತೋರಿಸಲಾಗಿದೆ. ನಿಜವಾಗಿಯೂ ಅಷ್ಟೊಂದು ಖರ್ಚು ಆಗಿದೆಯೇ? ಕೆಂಪೇಗೌಡರ ಹೆಸರಿನಲ್ಲಿ ಸುಳ್ಳು ಲೆಕ್ಕ ಕೊಡಲಾಗಿದೆ ಎಂದು ಆರೋಪಿಸಿದರು.
ಕನ್ನಡ ರಾಜ್ಯೋತ್ಸವಕ್ಕೆ 10 ಲಕ್ಷ ರೂ. ಖರ್ಚು ತೋರಿಸಲಾಗಿದೆ. ಕೇವಲ ಧ್ವಜಾರೋಹಣಕ್ಕೆ ಇಷ್ಟು ಖರ್ಚು ಮಾಡಲಾಯಿತೇ? ಸಾಮಾಜಿಕ ನ್ಯಾಯದ ಪ್ರತಿಪಾದಕರೆನಿಸಿಕೊಂಡವರು ಹಿಂದೂ ದೇವಾಲಯಗಳಿಗೂ ಹಣ ನೀಡಬೇಕು. ಅಷ್ಟಕ್ಕೂ ವಕ್ಫ್ ಮಂಡಳಿ, ಮುಜರಾಯಿ ಇಲಾಖೆ ಇದ್ದಾಗ, ಪಾಲಿಕೆಯಿಂದ ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಹಣ ನೀಡುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
ಉಚಿತ ಊಟ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಗುರುವಾರ ಪ್ರತಿಯೊಬ್ಬರಿಗೂ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೇಯರ್ ಸಂಪತ್‌ರಾಜ್ ತಿಳಿಸಿದರು. ಬಿಬಿಎಂಪಿ ಸಭೆಯಲ್ಲಿ ಮಾತನಾಡಿ, ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಾಮಾನ್ಯ ದಿನಗಳಲ್ಲಿ ಒಂದು ಊಟಕ್ಕೆ 10 ರೂ. ಇದೆ. ಆದರೆ, ಮಹಿಳಾ ದಿನಾಚರಣೆಯಂದು ಈ ಕ್ಯಾಂಟೀನ್‌ಗಳಲ್ಲಿ ಎಲ್ಲರಿಗೂ ಉಚಿತವಾಗಿ ಊಟ ವಿತರಿಸಲಾಗುವುದು ಎಂದರು.