Advertisement

ನಿಮ್ಮ ಬಾಯಿಗೆ ಹಾಲುಬಾಯಿ

03:03 PM Jan 31, 2018 | |

ಹಲ್ವಾದಂತೆ ಕಾಣುವ, ಆದರೆ ಹಲ್ವಕ್ಕಿಂತ ವಿಭಿನ್ನವಾಗಿರುವ ಸಿಹಿ ತಿನಿಸು ಹಾಲ್‌ಬಾಯಿ. ಉಡುಪಿ, ಮಂಗಳೂರು ಕಡೆಯಲ್ಲಿ ಇದು ಭಾರೀ ಫೇಮಸ್‌. ಮಕ್ಕಳಿಂದ, ಹಿರಿಯರವರೆಗೆ ಎಲ್ಲರಿಗೂ ಇಷ್ಟವಾಗುವ ಈ ಖಾದ್ಯವನ್ನು ಸಾಮಾನ್ಯವಾಗಿ ಅಕ್ಕಿ, ಬೆಲ್ಲ, ತೆಂಗಿನಕಾಯಿ ಬಳಸಿ ಮಾಡುತ್ತಾರೆ. ಅಷ್ಟೇ ಅಲ್ಲ, ಗೋಧಿ, ರಾಗಿ ಹಾಗೂ ರವೆಯಿಂದಲೂ ಹಾಲ್‌ಬಾಯಿ ತಯಾರಿಸಬಹುದು. ಹೇಗೆ ಅಂತೀರಾ, ಇಲ್ಲಿದೆ ನೋಡಿ ಥರಹೇವಾರಿ ಹಾಲ್‌ಬಾಯಿ ರೆಸಿಪಿಗಳು. 

Advertisement

1. ಅಕ್ಕಿ ಹಾಲ್‌ಬಾಯಿ
ಬೇಕಾಗುವ ಸಾಮಗ್ರಿ: ಅಕ್ಕಿ- 1/2 ಕಪ್‌, ತೆಂಗಿನತುರಿ- 1/2 ಕಪ್‌, ಬೆಲ್ಲ- 1/2 ಕಪ್‌, ತುಪ್ಪ (6 ದೊಡ್ಡ ಚಮಚ), ಏಲಕ್ಕಿ-3, ಗೋಡಂಬಿ.  

ಮಾಡುವ ವಿಧಾನ: ಅಕ್ಕಿಯನ್ನು ನೀರಲ್ಲಿ ಚೆನ್ನಾಗಿ ತೊಳೆದು 2 ಗಂಟೆಗಳ ಕಾಲ ನೆನೆಸಿಡಿ. ನಂತರ ನೀರು ಬಸಿದು ಅಕ್ಕಿ, ತೆಂಗಿನತುರಿ ಮತ್ತು ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಲು ಬೇಕಾಗುವಷ್ಟು ಮಾತ್ರ ನೀರು ಸೇರಿಸಿ. ಒಂದು ಬಾಣಲೆಗೆ ರುಬ್ಬಿದ ಮಿಶ್ರಣ, ಬೆಲ್ಲ, 1.5 ಕಪ್‌ನಷ್ಟು ನೀರು ಸೇರಿಸಿ ಕಲಸಿ. ಮಂದ ಉರಿಯಲ್ಲಿ ಕೈಯಾಡಿಸುತ್ತಾ ಕಾಯಿಸಿ. ಮಿಶ್ರಣ ಗಟ್ಟಿಯಾಗುತ್ತ ಬರುತ್ತಿದ್ದಂತೆ ಸ್ವಲ್ಪಸ್ವಲ್ಪವಾಗಿ ತುಪ್ಪ ಸೇರಿಸಿ. ತಳ ಬಿಡುತ್ತಿದ್ದಂತೆ ತುಪ್ಪ ಸವರಿದ ತಟ್ಟೆಗೆ ಹಾಕಿ ತಣಿಸಿ. ನಂತರ ಕತ್ತರಿಸಿ ಗೋಡಂಬಿಯಿಂದ ಅಲಂಕರಿಸಿ ಸವಿಯಿರಿ. ತುಪ್ಪ ಜಾಸ್ತಿ ಹಾಕಿದಷ್ಟೂ ರುಚಿ ಜಾಸ್ತಿ.

2. ಗೋಧಿ ಹಾಲ್‌ಬಾಯಿ 
ಬೇಕಾಗುವ ಸಾಮಗ್ರಿ: ಗೋಧಿ-1 ಕಪ್‌, ತೆಂಗಿನ ತುರಿ- 1/2 ಕಪ್‌, ಬೆಲ್ಲ- 3/4 ಕಪ್‌, ತುಪ್ಪ-1/4 ಕಪ್‌, ಏಲಕ್ಕಿ ಪುಡಿ, ನೀರು- 3 ಕಪ್‌.

ಮಾಡುವ ವಿಧಾನ: ಗೋಧಿಯನ್ನು ಚೆನ್ನಾಗಿ ತೊಳೆದು 8 ಗಂಟೆಗಳ ಕಾಲ ನೆನಸಿಡಿ. ತೆಂಗಿನ ತುರಿಯನ್ನು 1/2 ಕಪ್‌ ನೀರು ಹಾಕಿ ರುಬ್ಬಿ.  ಗೋಧಿಯ ನೀರು ಬಸಿದು, ಪುನಃ ಸಾಕಷ್ಟು ನೀರು ಬೆರೆಸಿ ರುಬ್ಬಿಕೊಳ್ಳಿ. ಈಗ ರುಬ್ಬಿದ ಗೋಧಿಯನ್ನು ಸೋಸಿಕೊಂಡು ಗಟ್ಟಿ ಹಾಲು ತೆಗೆದಿಡಿ. ಹಿಂಡಿದ ಗೋಧಿಗೆ ಪುನಃ ನೀರು ಹಾಕಿ ರುಬ್ಬಿಕೊಂಡು ಸೋಸುವ ಹಂತವನ್ನು ಪುನರಾವರ್ತಿಸಿ. ಗೋಧಿ ಹಾಲು ಇರುವ ಪಾತ್ರೆಗೆ ಇನ್ನೊಂದು ಕಪ್‌ ನೀರು ಸೇರಿಸಿ ಕದಡದಂತೆ 2 ಗಂಟೆಗಳ ಕಾಲ ಇಟ್ಟು ಬಿಡಿ. ಮೇಲಿನ ನೀರನ್ನು ಮಾತ್ರ ಬಸಿದುಕೊಳ್ಳಿ. ನಂತರ ಒಂದು ದಪ್ಪ ತಳದ ಬಾಣಲೆಗೆ ಬೆಲ್ಲ, 1/2 ಕಪ್‌ ನೀರು ಸೇರಿಸಿ ಕುದಿಸಿ. ಬೆಲ್ಲ ಕರಗಿದ ಕೂಡಲೆ ಅದಕ್ಕೆ ಗಟ್ಟಿ ಗೋಧಿ ಹಾಲು, ರುಬ್ಬಿದ ತೆಂಗಿನ ತುರಿ ಸೇರಿಸಿ ಗೊಟಾಯಿಸಿ. ಮಿಶ್ರಣ ದಪ್ಪವಾಗುತ್ತಿದ್ದಂತೆ ತುಪ್ಪ ಸೇರಿಸಿ ಗೊಟಾಯಿಸುವುದನ್ನು ಮುಂದುವರಿಸಿ. ಉಂಡೆ ಮಾಡಿದಾಗ ಕೈಗೆ ಅಂಟದಿದ್ದರೆ ಹಾಲ್‌ಬಾಯಿ ತಿನ್ನಲು ರೆಡಿ ಎಂದರ್ಥ. ತುಪ್ಪ ಸವರಿದ ತಟ್ಟೆಗೆ ಹಾಕಿ, ಕತ್ತರಿಸಿ ಸವಿಯಿರಿ.

Advertisement

3.ರಾಗಿ ಹಾಲ್‌ಬಾಯಿ 
ಬೇಕಾಗುವ ಸಾಮಗ್ರಿ: ರಾಗಿ-1/2 ಕಪ್‌, ತೆಂಗಿನತುರಿ- 1/2 ಕಪ್‌, ಬೆಲ್ಲ- 1/2 ಕಪ್‌, ತುಪ್ಪ-4 ಚಮಚ, ಏಲಕ್ಕಿ ಪುಡಿ, ನೀರು- 1.5 ಕಪ್‌.

 ಮಾಡುವ ವಿಧಾನ: ರಾಗಿಯನ್ನು ಚೆನ್ನಾಗಿ ತೊಳೆದು 3-4 ಗಂಟೆಗಳ ಕಾಲ ನೆನೆಸಿಡಿ. ನೆನೆದ ರಾಗಿಯ ನೀರು ಬಸಿದು, 1/2 ಕಪ್‌ ನೀರು ಬೆರೆಸಿ ತೆಂಗಿನ ತುರಿ ಜೊತೆಗೆ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ರಾಗಿಯನ್ನು ಸೋಸಿ ದಪ್ಪ ಹಾಲು ತೆಗೆದಿಡಿ. ಹಿಂಡಿದ ರಾಗಿಗೆ ಪುನಃ 1/2 ಕಪ್‌ ನೀರು ಹಾಕಿ ರುಬ್ಬಿಕೊಂಡು ಸೋಸುವುದನ್ನು ಪುನರಾವರ್ತಿಸಿ. ನಂತರ ಒಂದು ದಪ್ಪ ತಳದ ಬಾಣಲೆಗೆ ಬೆಲ್ಲ, 1/2 ಕಪ್‌ ನೀರು ಸೇರಿಸಿ ಕುದಿಸಿ. ಬೆಲ್ಲ ಕರಗಿದ ಕೂಡಲೆ ಅದಕ್ಕೆ ರಾಗಿಹಾಲು ಸೇರಿಸಿ ಗೊಟಾಯಿಸಿ. ಮಿಶ್ರಣ ದಪ್ಪವಾಗುತ್ತಿದ್ದಂತೆ ತುಪ್ಪ ಸೇರಿಸಿ ಗೊಟಾಯಿಸುವುದನ್ನು ಮುಂದುವರಿಸಿ. ಮಿಶ್ರಣ ತಳ ಬಿಡುತ್ತಾ ಬಂದು, ಹೊಳಪಿನಿಂದ ಕೂಡಿದಾಗ, ತುಪ್ಪ ಸವರಿದ ತಟ್ಟೆಗೆ ಹಾಕಿ ತಣಿಸಿ. 

4. ರವೆ ಹಾಲ್‌ಬಾಯಿ: 
ಬೇಕಾಗುವ ಸಾಮಗ್ರಿ: ರವೆ-1/2 ಕಪ್‌, ತೆಂಗಿನ ತುರಿ- 1 ಕಪ್‌, ಬೆಲ್ಲ- 1 ಕಪ್‌, ತುಪ್ಪ-1/8 ಕಪ್‌, ಏಲಕ್ಕಿ, ನೀರು- 1.5 ಕಪ್‌

 ಮಾಡುವ ವಿಧಾನ: ತೆಂಗಿನತುರಿಯನ್ನು 1.5 ಕಪ್‌ ನೀರು ಹಾಕಿ ನುಣ್ಣಗೆ ರುಬ್ಬಿ ಸೋಸಿಕೊಳ್ಳಿ. 1.5 ಕಪ್‌ನಷ್ಟು ತೆಂಗಿನ ಹಾಲನ್ನು ತೆಗೆದಿಟ್ಟುಕೊಳ್ಳಿ. ಒಂದು ದಪ್ಪ ತಳದ ಬಾಣಲೆಗೆ ಅರ್ಧದಷ್ಟು ತುಪ್ಪ ಹಾಕಿ ರವೆಯನ್ನು ಚೆನ್ನಾಗಿ ಘಮ್ಮೆನ್ನುವಂತೆ ಹುರಿದು ತೆಗೆದಿಟ್ಟುಕೊಳ್ಳಿ. ಬಾಣಲೆಗೆ ಬೆಲ್ಲ, ಸ್ವಲ್ಪ ನೀರು ಸೇರಿಸಿ ಕುದಿಸಿ. ಬೆಲ್ಲ ಕರಗಿದ ಕೂಡಲೇ ತೆಗೆದಿರಿಸಿದ ತೆಂಗಿನ ಹಾಲು ಸೇರಿಸಿ. ಆದು ಕುದಿಯಲು ಆರಂಭವಾಗುತ್ತಿದ್ದಂತೆ ಹುರಿದ ರವೆಯನ್ನು ನಿಧಾನವಾಗಿ ಸೇರಿಸಿ. ರವೆ ಹಾಕುವಾಗ ಕೈಯಾಡಿಸುತ್ತಿರಿ. ಇಲ್ಲದಿದ್ದರೆ ಗಂಟಾಗುವ ಸಾಧ್ಯತೆ ಇದೆ. ಮಿಶ್ರಣ ದಪ್ಪವಾಗುತ್ತಿದ್ದಂತೆ ತುಪ್ಪ ಸೇರಿಸಿ ಗೊಟಾಯಿಸುವುದನ್ನು ಮುಂದುವರಿಸಿ. ಮಿಶ್ರಣ ತಳ ಬಿಡುತ್ತಾ ಬಂದಾಗ ರವೆ ಹಾಲ್‌ಬಾಯಿ ತಯಾರು. ಅದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ ತಣಿಸಿ. 

ವಿ.ಸೂ: ಎಲ್ಲ ಬಗೆಯ ಹಾಲ್‌ಬಾಯಿ ತಿನ್ನುವ ಮೊದಲು, ಅದಕ್ಕೆ ಒಂದು ದೊಡ್ಡ ಸ್ಪೂನ್‌ ತುಪ್ಪ ಬೆರೆಸಿಕೊಂಡು ತಿಂದರೆ, ಅದರ ರುಚಿ ದುಪ್ಪಟ್ಟಾಗುತ್ತದೆ. 

ಸುಮನಾ ರಾವ್‌, ದುಬೈ

Advertisement

Udayavani is now on Telegram. Click here to join our channel and stay updated with the latest news.

Next