Advertisement

Davanagere; ಅಡುಗೆಗೂ ಸಿದ್ಧ ಜನ ಸೇವೆಗೂ ಬದ್ಧ ಆಂದೋಲನ: ಆಕ್ರೋಶ

02:42 PM Apr 03, 2024 | Team Udayavani |

ದಾವಣಗೆರೆ:ಅಡುಗೆ ಮಾಡಲು ಲಾಯಕ್ಕು ಎಂಬ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ಖಂಡಿಸಿ ದಾವಣಗೆರೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬುಧವಾರ ಜಯದೇವ ವೃತ್ತದಲ್ಲಿ ಅಡುಗೆಗೂ ಸಿದ್ಧ ಜನ ಸೇವೆಗೂ ಬದ್ಧ ಆಂದೋಲನ ನಡೆಸುವ ಮೂಲಕ ಆಕ್ರೋಶ ಹೊರ ಹಾಕಲಾಗಿದೆ.

Advertisement

ಜಯದೇವ ವೃತ್ತದಲ್ಲಿ ಅಡುಗೆ ಮಾಡುವ ಮೂಲಕ ಮಹಿಳೆ ಅಡುಗೆಗೂ ಸಿದ್ದ ಜನಸೇವೆಗೂ ಸಿದ್ದ ಎನ್ನುವ ಘೋಷಣೆಯೊಂದಿಗೆ ಶಾಮನೂರು ಶಿವಶಂಕರಪ್ಪರ ಹೇಳಿಕೆ ಖಂಡಿಸಿದರು. ಕೂಡಲೇ ಅವರು ದೇಶದ ಎಲ್ಲಾ ಮಹಿಳೆಯರ‌ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಭಾಗ್ಯ ಪಿಸಾಳೆ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಅಡುಗೆಗೆ ಲಾಯಕ್ಕು ಎಂದು ಹೇಳಿಕೆ ನೀಡುವ ಮೂಲಕ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಇಡೀ ಮಹಿಳಾ ಸಮುದಾಯವನ್ನೇ ಅವಮಾನಿಸಿದ್ದಾರೆ. ಯಾರೇ ಆಗಲಿ ಹೆಣ್ಣುಮಕ್ಕಳ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ಮಹಿಳೆಯರು ಮನೆಯಲ್ಲಿ ಅಡುಗೆ ಮಾಡಿದರೆ ಎಲ್ಲರೂ ಊಟ ಮಾಡಲು ಸಾಧ್ಯ. ಇದನ್ನು ‌ಅವರು ಅರಿತು ಕೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯ ಜಿಲ್ಲಾಧ್ಯಕ್ಷ ಎನ್. ರಾಜಶೇಖರ ನಾಗಪ್ಪ ಮಾತನಾಡಿ, ಇಡೀ ದೇಶದಲ್ಲಿ ರಾಹುಲ್ ಗಾಂಧಿಯಿಂದ ಹಿಡಿದು ಕೆಳಹಂತದ ಕಾರ್ಯಕರ್ತರವರೆಗೂ ಕೀಳು ಮನೋಭಾವದ ಮನಸ್ಥಿತಿ ಇದೆ. ನಾರಿಯರ ಶಕ್ತಿ ಏನಿದೆ ಎನ್ನುವುದು ತೋರಿಸಿಕೊಡುತ್ತೇವೆ. ಶೇ.50ರಷ್ಟು ದೇಶದಲ್ಲಿ ಮಹಿಳೆಯರು ಇದ್ದಾರೆ. ತಾಯಿ, ಸಹೋದರಿ, ಹೆಂಡತಿ ಸ್ಥಾನ ಸೇರಿದಂತೆ ಎಲ್ಲಾ ಹಂತಗಳಲ್ಲಿ ಮಹಿಳೆಯರು ತಮ್ಮ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತಾ ಬಂದಿದ್ದಾರೆ ಎಂಬುದು ಶಾಸಕರು ತಿಳಿಯಬೇಕು ಎಂದು ಒತ್ತಾಯಿಸಿದರು.

ಮಾಜಿ ಮೇಯರ್ ಎಸ್.ಟಿ.ವೀರೇಶ್, ಕೆ.ಬಿ.ಕೊಟ್ರೇಶ್, ಎ.ವೈ.ಪ್ರಕಾಶ್, ಧನಂಜಯ ಕಡ್ಲೇಬಾಳು, ಅನಿಲ ಕುಮಾರ್ ನಾಯ್ಕ, ಕೆ.ಎನ್.ಕಲ್ಲೇಶ್, ಶಂಕರ್ ಗೌಡ ಬಿರಾದಾರ, ಕುಂಬಾರ ನಾಗರಾಜ್, ಉಮಾ ಪ್ರಕಾಶ್, ಗೌರಮ್ಮ, ದೇವಿರಮ್ಮ, ಯಶೋಧ, ದ್ರಾಕ್ಷಾಯಣಮ್ಮ, ಸುಧಾ ಜಯರುದ್ರೇಶ್, ರೇಣುಕಾ ಶ್ರೀನಿವಾಸ್, ರೂಪಾ ಕಾಟೆ, ಜ್ಯೋತಿ ಸಿದ್ದೇಶ್, ನಾಗರತ್ನ ಕಾಟೆ, ಪುಷ್ಪಾ ದುರುಗೇಶ್, ಗಾಯತ್ರಿ ಖಂಡೋಜಿರಾವ್, ಮಹೇಂದ್ರ ಹೆಬ್ಬಾಳು ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next