Advertisement

Desi Swara: ಮಾಸಿದ ನೆನಪುಗಳಿಗೆ ರಂಗು ತುಂಬಿದ ಮಿಲನ

12:24 PM Jan 06, 2024 | Team Udayavani |

ದಿನಗಳನ್ನು ಎಣಿಸಿಕೊಂಡು ರಜಾ ಹಾಕಿ ತಾಯ್ನಾಡಿಗೆ ಭೇಟಿ ಕೊಡಬೇಕೆಂದಾಗ ಅನಿವಾಸಿಗಳಲ್ಲಿ ಲೆಕ್ಕಾಚಾರಗಳು ಆರಂಭವಾಗುತ್ತವೆ. ಭಾರತದ ಈ ಭೇಟಿಯಲ್ಲಿ ಏನೇನು ಮಾಡಬೇಕು? ಕುಟುಂಬದ ಜತೆ ಕಾಲ ಕಳೆಯುವುದು, ಸ್ಥಳಗಳಿಗೆ ಭೇಟಿ ಕೊಡುವುದು, ವ್ಯವಹಾರದ ವಿಷಯಗಳು, ಭಾರತೀಯ ವಸ್ತು – ವಸ್ತ್ರ ಇತ್ಯಾದಿ ಖರೀದಿಸುವುದು, ಸ್ನೇಹಿತರನ್ನು ಕಾಣುವುದು, ಸಂಬಂಧಿಕರನ್ನು ಭೇಟಿಯಾಗುವುದು, ಬೆಳೆಸಿಕೊಂಡ ನಮ್ಮ ಯಾವುದೋ ಹವ್ಯಾಸಗಳಿಗಾಗಿ ಸಮಯ ಮೀಸಲಾಗಿರಿಸಿಕೊಳ್ಳುವುದು ಇತ್ಯಾದಿ ಇತ್ಯಾದಿ ವಿಷಯಗಳ ಜಮಾವಣೆಯಾಗತ್ತ ಹೋಗುತ್ತವೆ.

Advertisement

ತಿಂಗಳುಗಟ್ಟಲೆ ಸಮಯವಿದ್ದರೆ ನಿಧಾನವಾಗಿ ಎಲ್ಲವನ್ನೂ ಮಾಡಬಹುದಾದರೂ, ಒಂದೆರಡೇ ವಾರ ಅಥವಾ ಕೆಲವೇ ಕೆಲವು ದಿನಗಳ ಭೇಟಿಯಾದರೆ ಆಗ ಕರಾರುವಕ್ಕಾಗಿ ಕೆಲಸ ಮಾಡಬೇಕಾಗುತ್ತದೆ. ಖಂಡಾಂತರ ಪ್ರಯಾಣ ಬೆಳೆಸಿದಾಗ ಉಂಟಾಗುವ ಜೆಟ್ಲ್ಯಾಗ್‌ ನಿಂದ ಚೇತರಿಸಿಕೊಳ್ಳಲು ಕೂಡ ಸಮಯವಿಲ್ಲದಾಗುತ್ತದೆ. ನಿದ್ದೆಗೆಟ್ಟ ಅನಂತರ ಹಸಿವು, ನೀರಡಿಕೆಗಳ ಗಡಿಯಾರ ಕೂಡ ಬದಲಾಗುತ್ತದೆ. ಆದರೆ ಮುಖ್ಯಗುರಿಗಳನ್ನು ಸಾಧಿಸಿ ತಮ್ಮ ಭೇಟಿಯ ಪೂರ್ಣ ಲಾಭ ಪಡೆದುಕೊಳ್ಳುವ ಧಾವಂತ ವಿದೇಶೀ ವಾಸಿಗಳಲ್ಲಿ ಇದ್ದೇ ಇರುತ್ತದೆ. ಮಾಡಬೇಕು ಎಂದು ಪಟ್ಟಿಹಾಕಿಕೊಂಡ ಕೆಲಸಗಳಿಗೆ ಮೊದಲಿಂದಲೇ ತಯಾರಿ ಮಾಡಿಕೊಳ್ಳಬೇಕಾದ ಅಗತ್ಯವೂ ಬೀಳುತ್ತದೆ.

ಈ ಭಾರಿ ಭಾರತಕ್ಕೆ ಹೋಗುವುದಕ್ಕೆ ಒಂದು ಕಾರಣ ಒದಗಿಬಂತು. ಹೋಗುತಿದ್ದೇನೆ ಎಂದು ತಿಳಿದ ಅನಂತರ ಇನ್ನೇನು ಮಾಡಬಹುದೆಂಬುದರ ಪಟ್ಟಿ ಬೆಳೆಯುತ್ತ ಹೋಯಿತು. ಅದರಲ್ಲಿ ಬಹುದಿನಗಳಿಂದ ಮಾಡಬೇಕು ಎಂದುಕೊಳ್ಳುತ್ತಿದ್ದ ಒಂದು ವಿಚಾರವನ್ನು ಸಾಧಿಸಲು ಸಾಧ್ಯವೇ ಎಂಬ ಆಲೋಚನೆ ಗಟ್ಟಿಯಾಗತೊಡಗಿತು.

ನಾನು ಓದಿದ ಮಾಧ್ಯಮಿಕ ಶಾಲೆಯಲ್ಲಿ ನಮಗೆ ಪಾಠ, ಆಟ, ಕ್ರೀಡೆ, ಭಾಷಣ, ಸಾಹಿತ್ಯ ಇತ್ಯಾದಿ ವಿಚಾರಗಳಲ್ಲಿ ಪ್ರೋತ್ಸಾಹ ದೊರಕಿತ್ತು, ನಮ್ಮಲ್ಲಿ ಆತ್ಮ ವಿಶ್ವಾಸ ಮತ್ತು ಉತ್ತಮ ಪರಿಪಾಠಗಳನ್ನು ಬೆಳೆಸಿದ ಕೆಲವರು ಗುರುಗಳಿಗೆ ವಂದನೆ ಹೇಳಬಹುದೆಂಬ ವಿಚಾರ ನನ್ನನ್ನು ಬಹಳ ದಿನಗಳಿಂದ ಕಾಡುತ್ತಿತ್ತು. ನಿವೃತ್ತರಾಗಿದ್ದ ಹಲವರು ಶಿಕ್ಷಕರು ನನ್ನೂರಿನಲ್ಲೇ ಇದ್ದಾರೆ ಎಂದು ಕೂಡ ತಿಳಿದಿತ್ತು. ನಾಲ್ಕಾರು ಸಹಪಾಠಿಗಳೊಡನೆ ಕೂಡಿ ಹೋದರೆ ಅವರಿಗೂ ಸಂತೋಷವಾದೀತೆಂದು ಅನ್ನಿಸಿತು.

Advertisement

ಆ ಶಾಲೆಯ ಸಹಪಾಠಿಗಳು ಕಳೆದ ವರ್ಷ ಒಂದು ಸ್ನೇಹ ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆ ಕಾರಣ, ಅವರೆಲ್ಲರ ಸಂಪರ್ಕವೂ ಇತ್ತು. ಆದರೆ ಇದು ನನ್ನೊಬ್ಬಳ ಆಶಯವೇ ಅಥವಾ ಇತರರಿಗೂ ಆಸಕ್ತಿಯಿದೆಯೇ ಎಂಬ ಬಗ್ಗೆ ನನಗೆ ಖಾತ್ರಿಯಿರಲಿಲ್ಲ.

ಹಾಗಾಗಿ ಈ ಗುರುಗಳ ಸಂಪರ್ಕದಲ್ಲಿರುವ ಗೆಳೆಯನೋರ್ವನಿಗೆ ಫೋನಾಯಿಸಿ, ನನ್ನೊಡನೆ ಅವರಲ್ಲಿ ಕೆಲವರು ಜತೆಗೂಡಿದರೆ, ಗುರುಗಳ ಮನೆಗೇ ಹೋಗಿ ವಂದಿಸಿ ಬರಬಹುದಲ್ಲವೇ?- ಎಂಬ ಆಲೋಚನೆಯನ್ನು ಮುಂದಿಟ್ಟೆ. ಆತ ಒಪ್ಪಿದ್ದಷ್ಟೇ ಅಲ್ಲದೆ, ಯೋಜನೆಯ ಸ್ವರೂಪವನ್ನೇ ಬದಲಿಸಿ, ಎಲ್ಲ ಸಹಪಾಠಿಗಳನ್ನೂ ಸೇರಿಸಿ ಜತೆಯಾಗಿಯೇ ಮಾಡೋಣ ಎಂದ. ಎಷ್ಟು ಜನರಿಗೆ ಈ ಬಗ್ಗೆ ಆಸಕ್ತಿಯಿದೆಯೆಂದು ಅಕ್ಟೋಬರಿನಲ್ಲಿಯೇ ಪರಾಮರ್ಶಿಸತೊಡಗಿದೆವು. ಆಶ್ಚರ್ಯವೆಂದರೆ ಎಲ್ಲರಿಗೂ ಈ ಬಗ್ಗೆ ಆಸಕ್ತಿ ಇರುವಂತೆ ಕಂಡಿತು.

ಅಭೂತಪೂರ್ವವಾದ ಬೆಂಬಲ ಮತ್ತು ಪ್ರತಿಕ್ರಿಯೆ ದೊರಕಿತು. ಡಿಸೆಂಬರ್‌ನ ನನ್ನ ಭೇಟಿಯ ಸಮಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಎಂದಾಯಿತು. ಒಬ್ಬರು ಗುರುಗಳಿಂದ ಇನ್ನೊಬ್ಬರ ಸಂಪರ್ಕ ದೊರೆತು ಬಹುತೇಕ ಎಲ್ಲ ಗುರುಗಳೂ ಸಂಪರ್ಕಕ್ಕೆ ಸಿಕ್ಕರು. ಇದೆಲ್ಲ ಆಶ್ಚರ್ಯಕರ ಎನ್ನಿಸಲು ಕಾರಣವೆಂದರೆ, ಮಾಧ್ಯಮಿಕ ಶಾಲೆಯನ್ನು ಮುಗಿಸಿ ಈಗಾಗಲೇ ನಾಲ್ಕು ದಶಕಗಳ ಕಾಲವಾಗಿತ್ತು. ಮೂವರು ಮೇಷ್ಟ್ರುಗಳು ವಿಧಿವಶರಾಗಿದ್ದರು. ಆದರೆ ಒಮ್ಮೆ ಆರಂಭವಾದ ಈ ಪ್ರಕ್ರಿಯೆ, ಸಾಂಕ್ರಾಮಿಕ ರೂಪ ಪಡೆದುಕೊಂಡಿತು.

ಕಾಲೇಜಿನ ಸ್ನೇಹಿತರ ಜತೆಗಿನ ಪುರ್ನ ಮಿಲನ ಅಥವಾ re-unionಗಳು ಅತ್ಯಂತ ಸುಲಭ! ಆದರೆ ದಶಕಗಳ ಹಿಂದಿನ ಪ್ರಾಥಮಿಕ, ಮಾಧ್ಯಮಿಕ ಶಾಲೆಯ ಸಹಪಾಠಿಗಳನ್ನು ಕಲೆಹಾಕುವುದು ಅಷ್ಟೇನೂ ಸುಲಭವಲ್ಲ. ಆದರೆ ಶಶಿಧರ ರೆಡ್ಡಿ ಎನ್ನುವ ಸಹಪಾಠಿಯೊಬ್ಬ ಅಂತಹ ಕಷ್ಟಸಾಧ್ಯವಾದ ಕೆಲಸವನ್ನು ಎಂದೋ ಶುರುಮಾಡಿಯಾಗಿತ್ತು.

ಸಣ್ಣದೊಂದು ಸ್ನೇಹ ಮಿಲನ ಕಾರ್ಯಕ್ರಮವನ್ನು 1994ರಲ್ಲಿ ನಾವಾಗಲೇ ಮಾಡಿದ್ದೇವು. ಕೇವಲ 14 ಜನರು ಸೇರಿ ತುಮಕೂರು ಜಿಲ್ಲೆಯ, ದೇವರಾಯನದುರ್ಗದಲ್ಲಿ ಒಂದು ಸಣ್ಣ ಪಿಕ್ನಿಕ್‌ ಮಾಡಿ ಖುಷಿ ಪಟ್ಟಿದ್ದೇವು. ಅಲ್ಲಿಂದ ಮುಂದಕ್ಕೆ ಕೆಲವು ಜನರು ಸೇರಿ, ಇನ್ನಷ್ಟು ಆಸಕ್ತರನ್ನು ಸೇರಿಸಿಕೊಂಡು ಚಾರಣದ ಹವ್ಯಾಸವನ್ನೂ ಬೆಳೆಸಿಕೊಂಡಿದ್ದೇವು. ಅಂತಹವರೆಲ್ಲ ಡಿಜಿಟಲ್‌ ಮಾಧ್ಯಮಗಳ ಮೂಲಕ ಸಂಪರ್ಕ ಉಳಿಸಿಕೊಂಡಿದ್ದೇವು.

ಅನಂತರ ವಾಡ್ಸ್‌ಆ್ಯಪ್‌ ಗುಂಪು ತಯಾರಾಯಿತು. 2022ರ ಆಗಸ್ಟ್‌ 15ರಂದು ಸುಮಾರು 22 ಜನ ಸೇರಿ ರೆಸಾರ್ಟ್‌ ಒಂದರಲ್ಲಿ ಇಡೀ ದಿನ ಹಳೆಯ ನೆನಪುಗಳಲ್ಲಿ ಮಿಂದು ಖುಷಿಪಟ್ಟಿದ್ದೇವು. ಹೀಗಾಗಿ ಈ ಬಾರಿ ಜನರನ್ನು ಕೂಡಿಸುವುದು ಅತ್ಯಂತ ಸುಲಭವಾಗಿ ಘಟಿಸಿತು. ಕೆ.ಎನ್‌. ಶಶಿಧರ ಎನ್ನುವ ಉತ್ಸಾಹೀ ಸ್ಥಳೀಯ ಸಹಪಾಠಿ ಈ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ನಡೆಸಿಕೊಟ್ಟ. ಆತನಿಗೆ ಇದ್ದ ಹಲವರ ಸಂಪರ್ಕದ ಕಾರಣ ಕೆಲಸ ಭರದಿಂದ ನಡೆಯಿತು. ಭಾರತ ತಲುಪಿದ ಅನಂತರ ನಾನೂ ಕೈ ಜೋಡಿಸಿದೆ.

ಡಿಸೆಂಬರ್‌ 17ರಂದು ತುಮಕೂರಿನ ಶ್ರೀ ಸಿದ್ಧಗಂಗಾ ಎಲಿಮೆಂಟರಿ ಶಾಲೆಯಲ್ಲಿ ನಮಗಿದ್ದ ಎಲ್ಲ ಮೇಷ್ಟ್ರು ಮತ್ತು ಮೇಡಂ ಗಳನ್ನು ಆಹ್ವಾನಿಸಿದೆವು. ಅವರಿಗೆ ಧನ್ಯವಾದಗಳನ್ನು ಸಲ್ಲಿಸಲು ಹಿಂದಿನ ಬಾರಿಗಿಂತ ಹೆಚ್ಚೇ ಜನರು ಸೇರಿ, ಗುರುವಂದನೆ ಮತ್ತು ಸ್ನೇಹಮಿಲನ ಕಾರ್ಯಕ್ರಮವನ್ನು ಶಿಂಷಾ ರಿಟ್ರೀಟ್‌ ಎನ್ನುವ ಸ್ಥಳದಲ್ಲಿ ಹಮ್ಮಿಕೊಂಡೆವು. ಬಹಳಷ್ಟು ವರ್ಷಗಳ ಅನಂತರ ಭೇಟಿಯಾಗುತ್ತಿದ್ದ ಕಾರಣ ಒಬ್ಬರನ್ನೊಬ್ಬರು ಗುರುತಿಸುವ, ಮಾತಾಡಿಸುವ, ಹಿಂದಿನ ದಿನಗಳ ನೆನಪುಗಳನ್ನು ಕೆದಕುವ ಕೆಲಸ ಭರ್ಜರಿ ತಿಂಡಿಯೊಡನೆ ಆರಂಭವಾಯಿತು.

ಹಿಂದೆ ಒದೆ ತಿಂದ ಮಕ್ಕಳು, ಗಾತ್ರ, ಸಾಧನೆ ಮತ್ತು ಅರಿವಿನಲ್ಲಿ ತಮ್ಮಗಳಿಗಿಂತ ಹೆಚ್ಚು ಬೆಳೆದು ನಿಂತು ಗುರುತಿಸಲಾಗದಷ್ಟು ಬದಲಾದದ್ದನ್ನು ನೋಡಿ ಶಿಕ್ಷಕರು ಬೆರಗಾದರೆ, ಕೆಲವು ಶಿಕ್ಷಕರುಗಳು ಅವರಷ್ಟೇ ಚಿಕ್ಕವರಂತೆ ಕಾಣುತ್ತಿದ್ದುದನ್ನು ನೋಡಿ ವಿದ್ಯಾರ್ಥಿಗಳು ಆಶ್ಚರ್ಯಪಟ್ಟರು. ಶಾಲಾ ದಿನಗಳ ನೆನಪಿನಲ್ಲಿ ಆ ಕ್ಷಣ ಎಲ್ಲರು, ತಮ್ಮ ಹುದ್ದೆ, ವಯಸ್ಸು, ಅಂತಸ್ತು ಇತ್ಯಾದಿಗಳನ್ನು ಮರೆತು ಹತ್ತು-ಹನ್ನೆರಡು ವರ್ಷದ ಮಕ್ಕಳಂತೆಯೇ ಆಡುತ್ತಿದುದನ್ನು ನೋಡಿದ ಗುರುಗಳೂ ನಮ್ಮೊಡನೆ ಒಂದಾಗಿ ನಕ್ಕು ಸಂತಸಪಟ್ಟರು.

ತಾವು ಓದಿದ ಮಾಧ್ಯಮಿಕ ಶಾಲೆ ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ನಾವೀಗ ಬದುಕು ಕಟ್ಟಿಕೊಂಡು ನಿಂತಿದ್ದೇವೆ ಎಂದು ಒಕ್ಕೊರಲಿನಿಂದ ವಿದ್ಯಾರ್ಥಿಗಳು ಗುರುಗಳಿಗೆ ತಿಳಿಸಿದರು. ಅಂದಿನ ಹೆಡ್‌ ಮಾಸ್ಟರ್‌ ವಿ. ಪುಟ್ಟಗಂಗಯ್ಯನವರಿಗೆ ಭೇಷರತ್‌ ಆಭಾರಿಗಳಾಗಿದ್ದೇವೆ ಎಂಬುದು ಅವರ ಒಕ್ಕೊರಲಿನ ಅಭಿಪ್ರಾಯವಾಗಿತ್ತು.

ನಾಲ್ಕೈದು ಜನ ಶಿಕ್ಷಕರು ಮಾತಾಡಿದ ಅನಂತರ ವಿದ್ಯಾರ್ಥಿಗಳು ಒಬೊಬ್ಬರಾಗಿ ಅವರ ಪರಿಚಯ ಹೇಳಿಕೊಂಡು, ಶಾಲೆಯ ಬಗ್ಗೆ ಅವರಿಗಿರುವ ಕೆಲವು ನೆನಪುಗಳನ್ನು ಹಂಚಿಕೊಂಡರು. ಜೋರಾಗಿ ಕಿವಿಹಿಂಡಿದ, ಬೆರಳು ತಿರುಚಿದ, ಕೋಣ ಬಗ್ಗಿಸಿದ, ಕೈ ಬೆರಳುಗಳ ಗೆಣ್ಣಿನ ಮೇಲೆ ಹೊಡೆದಿದ್ದ, ಮೂಗು ಹಿಡಿದು ಕೆನ್ನೆಗೆ ಬಾರಿಸಿ ಬುದ್ಧಿ ಕಲಿಸಿದ್ದ ಮೇಷ್ಟ್ರು ಗಳ ಮೇಲೆ ಎಲ್ಲರೂ ಪ್ರೀತಿ ತೋರಿ, ಅಂದಿನ ಶಿಕ್ಷೆ ಯಿಂದಲೇ ತಾವು ಮುಂದೆ ಬಂದದ್ದರ ಬಗ್ಗೆ ಹೇಳಿಕೊಂಡು ನಕ್ಕು ನಲಿದದ್ದು ವಿಶೇಷವಾಗಿತ್ತು.

ಈ ಪ್ರೀತಿಯ ಮಳೆಯಲ್ಲಿ ಮುಖ್ಯೋಪಾಧ್ಯಾಯರ ಗಂಟಲು ತುಂಬಿ ಬಂದು, ಅವರು ಕೆಲಕಾಲ ಸ್ತಬ್ಧರಾದರು. ಇತರ ಶಿಕ್ಷಕರೂ ಅದೇ ಸ್ಥಿತಿಯಲ್ಲಿದ್ದರು. ಇಂದಿನ ಕಾಲದಲ್ಲಿ ಮಕ್ಕಳಿಗೆ ಮೌಖೀಕ ತಾಕೀತುಗಳನ್ನು ಮಾಡುವುದನ್ನು ಬಿಟ್ಟರೆ, ಕೇವಲ ಗೋಡೆಯನ್ನು ನೋಡಿಕೊಂಡು ಪಾಠ ಮಾಡಬೇಕಿರುವ ವಿಚಾರಗಳು ಕೂಡ ನುಸುಳಿದವು ಅಷ್ಟೇ ಏಕೆ, ಮುಂದೊಮ್ಮೆ ನಮ್ಮನ್ನೆಲ್ಲ ಕರೆಸಿ ಅದೇ ಶಾಲೆಯಲ್ಲಿ ಕಲಿಯುತ್ತಿರುವ ಇಂದಿನ ಮಕ್ಕಳ ಮುಂದೆ ಅಭಿನಂದಿಸಬೇಕು ಎಂದುಕೊಂಡಿದ್ದೇವೆ ಎಂದು ಮರುದಿನ ಅವರೆಲ್ಲ ಸೇರಿ ಕರೆಮಾಡಿದರು!

ಶಾಲೆಯ ಹಾಲಿ ಹೆಡ್‌ ಮಾಸ್ಟರ್‌ ಕಾರ್ಯಕ್ರಮಕ್ಕೆ ಬಂದಿದ್ದ ಕಾರಣ, ಅವರೆಲ್ಲ ಸೇರಿ ಹೀಗೆ ನಿರ್ಧರಿಸಿದ್ದು , ಎಲ್ಲರಿಗೂ ಆದ ಸಂತೋಷಕ್ಕೆ ದ್ಯೋತಕವಾಗಿ ಕಂಡಿತು. ಇದು ಖಾಸಗಿ ಸ್ಕೂಲಾದರೂ, ಆಗ ನಾವು ಕೊಟ್ಟ ವಾರ್ಷಿಕ ಫೀ ಕೇವಲ ಮೂವತ್ತು ರೂಪಾಯಿಗಳು! ಆದರೆ ಪಡೆದ ಶಿಕ್ಷಣ, ವಿದ್ಯೆಯ ಜತೆಗೆ ಶಿಸ್ತು ಸಂಸ್ಕಾರಗಳನ್ನು ಕೂಡ ಅದು ನಮಗೆ ನೀಡಿದ್ದು ಸುಳ್ಳಲ್ಲ.
ಕಾರಣಾಂತರಗಳಿಂದ ಬರಲಾಗದ ಇಬ್ಬರು ಗುರುವಂದನೆಗೆ ಕಾಣಿಕೆ ಸಲ್ಲಿಸಿ ಖುಷಿಪಟ್ಟರು. ಮತ್ತೋರ್ವ ಮಾಜಿ ವಿದ್ಯಾರ್ಥಿ ಡಾ| ಹೆಚ್‌. ಎನ್‌. ಗೋಪಾಲಕೃಷ್ಣ ಇನ್ನೊಂದು ಸುತ್ತಿನ ವಂದನೆಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದ್ದು ಕೂಡ ವಿಶೇಷವಾಗಿತ್ತು ತಿಂಡಿ- ಊಟಗಳ ಅನಂತರ ಗುರುಗಳನ್ನು ಬೀಳ್ಕೊಟ್ಟು, ನಮ್ಮ ಸಹಪಾಠಿಗಳ ಹಾಡು, ನೃತ್ಯ, ಜೋಕುಗಳಿಗೆ ನಕ್ಕು ನಲಿದೆವು. ಸಾಯಂಕಾಲದ ಖಾದ್ಯ-ಕಾಫಿಗಳೊಡನೆ ಕಾರ್ಯಕ್ರಮ ಇಷ್ಟು ಬೇಗ ಮುಗಿದು ಹೋಯಿತೇ ಎಂಬ ಬೇಜಾರಿನಲ್ಲಿಯೇ, ಬೇರೆ, ಬೇರೆ ಸ್ಥಳಗಳಿಂದ ಬಂದಿದ್ದ ಎಲ್ಲರನ್ನೂ ಬೀಳ್ಕೊಟ್ಟೆವು. ಗುರುವಂದನಾ ಕಾರ್ಯಕ್ರಮದ ಕಾರಣ ಈ ಬಾರಿಯ ಭಾರತದ ಭೇಟಿ ಅತ್ಯಂತ ಖುಷಿಕೊಟ್ಟಿತು.

ಡಾ| ಪ್ರೇಮಲತಾ ಬಿ., ಲಿಂಕನ್‌

Advertisement

Udayavani is now on Telegram. Click here to join our channel and stay updated with the latest news.

Next