Advertisement
‘ಉದಯವಾಣಿ’ ತಂಡವು ಮಂಗಳೂರು ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದಾಗ ತೊಕ್ಕೊಟ್ಟು ಪರಿಸರದಲ್ಲಿ ಕೂಲಿ ಕೆಲಸಕ್ಕಾಗಿ ಕಾಯುತ್ತಿದ್ದವರನ್ನು ಮಾತನಾಡಿಸಿತು. ‘ನಾವೇ ಖರ್ಚು ಮಾಡಿಕೊಂಡು ಹೋಗುತ್ತಿದ್ದೇವೆ. ನಮ್ಮ ಊರಿನಲ್ಲಿ ಚುನಾವಣೆಗೆ ನಿಂತವರು ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡಿದವರೇ’ ಎಂದರು. ಕ್ಷೇತ್ರಾದ್ಯಂತ ಸುತ್ತಾಡಿದಾಗ ಚುನಾ ವಣೆಯ ಕುರಿತು ಒಬ್ಬೊಬ್ಬರು ಒಂದೊಂದು ಅನಿಸಿಕೆ ವ್ಯಕ್ತಪಡಿಸಿದರು.
ಕೊಣಾಜೆ ಮತ್ತು ಮಂಜನಾಡಿ ಗಡಿಭಾಗದ ನಾಟೆಕಲ್‌ನಲ್ಲಿ ಹಲವು ವರ್ಷಗಳಿಂದ ಜ್ಯೂಸ್ ಅಂಗಡಿ ನಡೆಸುತ್ತಿರುವ ಹಿರಿಯರಾದ ಅಬ್ದುಲ್ ರಹೆಮಾನ್ ಈಗಿನ ಮತ್ತು ಹಿಂದಿನ ಪ್ರಚಾರದ ನೆನಪನ್ನು ಬಿಚ್ಚಿಟ್ಟರು- ‘ದುಂಬು ಓಟು ಕೇನ್ಯೆರೆ ಬನ್ನಗ ಓಬೇಲೆ ಪಾಡೊಂದು ಬರೊಂದಿತ್ತೆರ್. ಇತ್ತೆ ಅವು ದಾಲ ಇಜ್ಜಿ. ಓಟು ಆಯೆರೆ ಉಂಡಾ ಪಂಡ್‌ದ್ ಗೊತ್ತಾವೊಂದು ಇಜ್ಜಿ’ (ಹಿಂದೆ ಮತ ಕೇಳಲು ಬರುವಾಗ ಜೈಕಾರ ಹಾಕುತ್ತಾ ಬರುತ್ತಿದ್ದರು, ಈಗ ಅಂತಹದೇನೂ ಇಲ್ಲ. ಚುನಾವಣೆ ನಡೆಯಲಿಕ್ಕಿದೆ ಎನ್ನುವುದೇ ಗೊತ್ತಾಗುವುದಿಲ್ಲ). ಹಿಂದೆ ಚುನಾವಣೆ ಪ್ರಚಾರಕ್ಕೆ ಬಂದಾಗ ಜನರು ತುಂಬಾ ಬರುತ್ತಿದ್ದರು. ವ್ಯಾಪಾರ ಆಗುತ್ತಿತ್ತು. ಈಗ ಎರಡು ಮೂರು ಜನರು ಬಂದು ಮತ ಹಾಕಿ ಎಂದು ಕೇಳಿ ಹೋಗುತ್ತಾರೆ. ಚುನಾವಣೆಯ ವ್ಯಾಪಾರವೂ ಇಲ್ಲ ಎಂದರು ಅವರು. ಮಂಜನಾಡಿ ಗ್ರಾಮದ ಮಂಗಳಾಂತಿಯಲ್ಲಿ ರಿಕ್ಷಾ ಚಾಲಕರನ್ನು ಮಾತನಾಡಿಸಿದಾಗ ರಿಕ್ಷಾ ಚಾಲಕ ತಮೀಮ್ ಅಭಿಪ್ರಾಯ ಹೇಳಿದರು. ರಸ್ತೆ ಅಭಿವೃದ್ಧಿಯಾಗಿದೆ. ಆದರೆ ಅದಕ್ಕೆ ಬೇಕಾದ ಮೂಲ ಸೌಕರ್ಯ ಒದಗಿಸಿಲ್ಲ. ಚರಂಡಿ ನಿರ್ಮಾಣ ಮಾಡದೆ ಮಳೆಗಾಲದಲ್ಲಿ ನೀರು ಹರಿದು ರಸ್ತೆಗೆ ಹಾನಿಯಾಗುತ್ತದೆ. ಸಂಚಾರಕ್ಕೂ ಕಷ್ಟ. ರಸ್ತೆ ಅಭಿವೃದ್ಧಿಯಾದರೂ ಉಪಯೋಗಕ್ಕೆ ಇಲ್ಲದಂತಾಗುತ್ತದೆ ಎಂದರು.
Related Articles
Advertisement
ಹಿಂದೆ ಬೆಲೆ ಇತ್ತು, ಈಗ ಇಲ್ಲನರಿಂಗಾನ ತೌಡುಗೋಳಿ ಕ್ರಾಸ್ ಮೆಡಿಕಲ್‌ನ ಮಾಲಕರೊಂದಿಗೆ ಚುನಾವಣೆ ವಿಚಾರದಲ್ಲಿ ಚರ್ಚಿಸುತ್ತಿದ್ದ ಹಿರಿಯರಾದ ಚಂದ್ರಶೇಖರ್ ಶೆಟ್ಟಿ ಮೋರ್ಲ ಅವರನ್ನು ಮಾತಿಗೆಳೆದೆವು. ‘ಹಿಂದಿನ ರಾಜಕೀಯಕ್ಕೂ ಬೆಲೆ ಇತ್ತು, ಜನರಿಗೆ ಮತ್ತು ಚುನಾವಣೆಗೆ ನಿಲ್ಲುವವರಿಗೆ ಒಂದು ಬೆಲೆ ಇತ್ತು. ಆದರೆ ಈಗ ಅಂತಹ ಬೆಲೆ ಕಳೆದು ಹೋಗಿದೆ. ಈಗ ಸರ್ವಾಧಿಕಾರ ಹೆಚ್ಚಾಗಿದೆ’ ಎಂದರು ಅವರು. ಹಿಂದೆ ಶಾಲೆಯಲ್ಲಿ ಎರಡು ಗೋಣಿ ಅವಲಕ್ಕಿ, ಒಂದು ಗೋಣಿ ಬೆಲ್ಲ ತಂದು ವೋಟು ಹಾಕಲು ಬಂದವರಿಗೆಲ್ಲ ಕೊಡುತ್ತಿದ್ದರು. ಆದರೆ ಈಗ ಮತ ಹಾಕಲು ಹೋದವರಿಗೆ ತಿನ್ನಲು ಕೊಡುವಂತಿಲ್ಲ. ಒಟ್ಟಾರೆಯಾಗಿ ಈ ಬಾರಿ ಅಭಿವೃದ್ಧಿಗೆ ಒತ್ತು ಕೊಟ್ಟವರಿಗೆ ಗೆಲುವು ಸಹಜ’ ಎಂದರು ಶೆಟ್ಟಿ ಅವರು. ಚುನಾವಣೆ ಸದ್ದು ಗದ್ದಲ ಇಲ್ಲದಿರುವುದು ಉತ್ತಮ
ಚುನಾವಣೆ ಸದ್ದುಗದ್ದಲವಿಲ್ಲದೆ ನಡೆಯುತ್ತಿರುವುದು ಉತ್ತಮ. ಹಿಂದೆ ನಾವು ಸಣ್ಣದಿರುವಾಗ ರಸ್ತೆ, ಗೋಡೆಗಳು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷದವರ ಸೊತ್ತಾಗುತ್ತಿತ್ತು. ಆದರೆ ಈಗ ಬ್ಯಾನರ್, ಸದ್ದುಗದ್ದಲವಿಲ್ಲದೆ ಸ್ವತ್ಛ ಹಾಗೂ ನಿಶ್ಯಬ್ದ ಚುನಾವಣೆ ನಡೆಯುತ್ತಿರುವುದು ಶ್ಲಾಘನೀಯ.
– ಫ್ರಾನ್ಸಿಸ್, ಕೈರಂಗಳ – ಡಿ.ಜಿ.ಕಟ್ಟೆ ವಸಂತ್ ಎನ್. ಕೊಣಾಜೆ