Advertisement
ಪ್ರಸಕ್ತ ಶೈಕ್ಷಣಿಕ ವರ್ಷ ಕಳೆದ ಮೇ 15ರಿಂದ ಆರಂಭಗೊಂಡಿದ್ದು, ಇದೀಗ 50 ದಿನಗಳಾದರೂ ಜಿಲ್ಲೆಯ ಸುಮಾರು 600 ಶಾಲೆಗಳಲ್ಲಿ ಬಿಸಿಯೂಟ ಸ್ಥಗಿತಗೊಂಡಿದೆ. ತಾಪಂ, ಶಿಕ್ಷಣ ಇಲಾಖೆ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳ ನಿರ್ಲಕ್ಷéದ ಪರಿಣಾಮವೇ ಇದೀಗ ಮಕ್ಕಳಿಗೆ ಶಾಲೆಗಳಲ್ಲಿ ಸರ್ಕಾರದ ಬಿಸಿಯೂಟ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿದೆ.
Related Articles
Advertisement
ಆರ್ಥಿಕ ಶಕ್ತಿ ಇಲ್ಲದ ಶಾಲೆಗಳಲ್ಲಿ ನಗದು ವ್ಯವಹಾರ ಅಸಾಧ್ಯವಾಗಿದ್ದು, ಶಿಕ್ಷಕರು ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಯೋಜನಾಧಿಕಾರಿಗಳಿಗೆ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸುವುದಿಲ್ಲ, ಸ್ವೀಕರಿಸಿದರೂ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ. ಸಮಸ್ಯೆಗೆ ಕಾರಣ ಕೇಳಿದರೆ ಅಕ್ಷರ ದಾಸೋವ ವಿಭಾಗದ ಅಧಿಕಾರಿಗಳು ಸಮಸ್ಯೆ ಏನೂ ಇಲ್ಲ. ಅಲ್ಲಲ್ಲಿ ಕೆಲವೆಡೆ ಸಮಸ್ಯೆ ಇದ್ದರೂ ಶಾಲಾ ಅನುದಾನ ಬಳಸಿಕೊಂಡು ಸ್ಥಳೀಯ ಮಟ್ಟದಲ್ಲಿ ಕಟ್ಟಿಗೆ, ಆಹಾರ ಧಾನ್ಯ ಖರೀದಿಸಿ ಮಧ್ಯಾಹ್ನ ಬಿಸಿಯೂಟ ಪೂರೈಕೆ ಮಾಡುವಂತೆ ಸೂಚಿಸಲಾಗಿದೆ ಎಂದು ಶಿಕ್ಷಕರ ಮೇಲೆ ಹೊರೆ ಹಾಕಿದ್ದನ್ನು ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಮನೆಯಿಂದಲೇ ಮಧ್ಯಾಹ್ನದ ಬಿಸಿಯೂಟಕ್ಕೆ ಬುತ್ತಿ ಕಟ್ಟಿಕೊಂಡು ಬರುವಂತೆ ಶಿಕ್ಷಕರು ತಾಕೀತು ಮಾಡಿದ್ದರಿಂದ ಮಕ್ಕಳಿಗೆ ಅಕ್ಷರ ದಾಸೋಹಕ್ಕೆ ಮನೆಯ ರೊಟ್ಟಿಬುತ್ತಿ ಗತಿಯಾಗಿದೆ.
ಅಧಿಕಾರಿಗಳ ಆಡಳಿತದ ವೈಫಲ್ಯದಿಂದಾಗಿ ಶಿಕ್ಷಕರು ಇಲಾಖೆ ಸೂಚನೆ ಪಾಲಿಸಲೂ ಆಗದೆ, ಪಾಲಿಸದಿರಲೂ ಆಗದೇ ಅವ್ಯಕ್ತ ಸಮಸ್ಯೆ ಎದುರಿಸುತ್ತಿದ್ದಾರೆ. ಯಾರನ್ನು ದೂರಲಾಗದ ಮಕ್ಕಳು ಮಾತ್ರ ಮನೆಯಿಂದ ರೊಟ್ಟಿಬುತ್ತಿ ಹೊತ್ತು ಬರುವುದನ್ನು ರೂಢಿಸಿಕೊಂಡಿದ್ದಾರೆ. ಈ ಲೋಪಕ್ಕೆ ತ್ವರಿತ ಸ್ಪಂದನೆ ಸಿಗದಿದ್ದರೆ ಸಾರ್ವಜನಿಕರು ಬೀದಿಗಿಳಿದು ಅಕ್ಷರ ದಾಸೋಹ ಯೋಜನೆಯ ಮಧ್ಯಾಹ್ನ ಬಿಸಿಯೂಟಕ್ಕಾಗಿ ಶಾಲೆಗಳತ್ತ ದಾವಿಸುವ ದುಸ್ಥಿತಿ ಎದುರಾಗುವ ದಿನಗಳು ದೂರವಿಲ್ಲ.
ಶಾಲೆಗಳ ಬಿಸಿಯೂಟಕ್ಕೆ ಗ್ಯಾಸ್ ಪೂರೈಸುತ್ತಿದ್ದ ಮೊದಲಿನ ಏಜೆನ್ಸಿಯವರು ಮಾರ್ಚ್ ನಂತರ ಬಿಲ್ ಸಲ್ಲಿಸಿದ್ದು, ಬಜೆಟ್ ಸಮಸ್ಯೆಯಾಗಿದೆ. ಇದೀಗ ವಿಜಯಪುರ, ಬಬಲೇಶ್ವರ, ತಿಕೋಟಾ ತಾಲೂಕಿನ ಶಾಲೆಗಳಿಗೆ ಪ್ರತ್ಯೇಕ ಏಜೆನ್ಸಿಗಳ ನೇಮ ಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಾದಿಲ್ವಾರು ಬಳಸಿ ಕೊಂಡು ಬಿಸಿಯೂಟ ಯೋಜನೆ ನಡೆಸಲು ಮುಖ್ಯೋಪಾದ್ಯಯರಿಗೆ ಸೂಚಿಸಲಾಗಿದೆ. -ಎಸ್.ಎಸ್.ಮುಜಾವರ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ವಿಜಯಪುರ
-ಜಿ.ಎಸ್.ಕಮತರ