Advertisement

ಎಂ.ಜಿ.ರಸ್ತೆ ಲೈಂಗಿಕ ದೌರ್ಜನ್ಯಕ್ಕೆ ಸಾಕ್ಷ್ಯವಿಲ್ಲ

11:30 AM Jan 10, 2017 | Team Udayavani |

ಬೆಂಗಳೂರು: ಇತ್ತೀಚೆಗೆ ವರ್ಷಾಚರಣೆ ಬಳಿಕ ರಾಜಧಾನಿಯಲ್ಲಿ ಕೇಳಿ ಬಂದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಗಳ ಸಂಬಂಧ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಂದ ಸೋಮವಾರ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಸುಷ್ಮಾ ಸಾಹು ಮಾಹಿತಿ ಪಡೆದರು. 

Advertisement

ನಗರದ ನೃಪತುಂಗ ರಸ್ತೆಯಲ್ಲಿ ರಾಜ್ಯ ಪೊಲೀಸ್‌ ಕೇಂದ್ರ ಕಾರ್ಯಾಲಯದಲ್ಲಿ ಡಿಜಿಪಿ ಓಂಪ್ರಕಾಶ್‌ ಅವರನ್ನು ಭೇಟಿಯಾದ ಮಹಿಳಾ ಆಯೋಗದ ಸದಸ್ಯರು, ಇತ್ತೀಚಿಗೆ ಎಂ.ಜಿ. ರಸ್ತೆ ಹಾಗೂ ಕಮ್ಮನಹಳ್ಳಿ ನಡೆದಿದ್ದ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಆರೋಪಗಳ ಕುರಿತು ಹೊತ್ತು ಸಮಾಲೋಚಿಸಿದರು. 

ಮಹಿಳೆ ಮತ್ತು ಮಕ್ಕಳ ಸುರಕ್ಷಿತೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದ್ದು, ಬೆಂಗಳೂರು ನಗರವು ಮಹಿಳೆಯರಿಗೆ ಭದ್ರ ನೆಲೆಯಾಗಿದೆ. ಅಲ್ಲದೆ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಡಿಜಿಪಿ ಸ್ಪಷ್ಟಪಡಿಸಿದರು. 

ಇದೇ ವೇಳೆ ಡಿಜಿಪಿ ಸೂಚನೆ ಹಿನ್ನೆಲೆಯಲ್ಲಿ ಆಗಮಿಸಿದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಹಾಗೂ ಹೆಚ್ಚುವರಿ ಪೊಲೀಸ್‌ ಆಯುಕ್ತೆ (ಪಶ್ಚಿಮ) ಮಾಲಿನಿ ಕೃಷ್ಣಮೂರ್ತಿ ಅವರು, ವರ್ಷಾಚರಣೆ ಸಂದರ್ಭದಲ್ಲಿ ಎಂ.ಜಿ. ರಸ್ತೆಯಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಆಯೋಗದ ಸದಸ್ಯರಿಗೆ ವಿವರಣೆ ನೀಡಿದ್ದಾರೆ. 

ಕಮ್ಮನಹಳ್ಳಿ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಈವರೆಗಿನ ತನಿಖೆಯಲ್ಲಿ ಎಂ.ಜಿ. ರಸ್ತೆಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂಬುದಕ್ಕೆ ಸಾಕ್ಷ್ಯಗಳು ಸಿಕ್ಕಿಲ್ಲ. ಅಲ್ಲದೆ ಪ್ರಕರಣದ ತನಿಖೆಗೆ ಮಹಿಳಾ ಅಧಿಕಾರಿಯನ್ನೇ ನೇಮಿಸಲಾಗಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. 

Advertisement

ಇನ್ನು ಈ ಕುರಿತು ಯಾರೊಬ್ಬರು ದೂರು ನೀಡಿಲ್ಲ. ಆದಾಗ್ಯೂ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದೇವೆ. ಸಾಮಾಜಿಕ ತಾಣಗಳು ಹಾಗೂ ಮಾಧ್ಯಮಗಳಲ್ಲಿ ಮಾತ್ರವಷ್ಟೆ ಕೆಲವರು ಘಟನೆ ಕುರಿತು ಚರ್ಚಿಸಿದ್ದಾರೆ. ನಿಸ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಆಯೋಗ ಸದಸ್ಯರಿಗೆ ಆಯುಕ್ತರು ಹೇಳಿದ್ದಾರೆ. ಈ ವಿವರಣೆ ಪಡೆದ ಬಳಿಕ ಮಹಿಳಾ ಆಯೋಗ ಸದಸ್ಯೆ ಸುಷ್ಮಾ ಸಾಹು ಅವರು, ಮಹಿಳೆಯರ ಸುರಕ್ಷಿತೆಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿ ತೆರಳಿದ್ದಾರೆ ಎಂದು ಡಿಜಿಪಿ ಕಚೇರಿ ಮೂಲಗಳು ತಿಳಿಸಿವೆ.

ಗೃಹ ಸಚಿವರ ಕ್ಷಮೆಗೆ  ಸದಸ್ಯೆಯ ಒತ್ತಾಯ 
ಬೆಂಗಳೂರು:
ಎಂ.ಜಿ.ರಸ್ತೆಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಗೃಹ ಸಚಿವರ ಡಾ.ಜಿ.ಪರಮೇಶ್ವರ್‌ ಹೇಳಿಕೆಯನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಸುಷ್ಮಾ ಸಾಹು ಖಂಡಿಸಿದ್ದಾರೆ. ಡಿಜಿಪಿ ಭೇಟಿ ಸೋಮವಾರ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಜಿ.ರಸ್ತೆಯಲ್ಲಿ ಮಹಿಳೆಯರ ಘಟನೆಗೆ ಪಾಶ್ಚಿಮಾತ್ಯ ಸಂಸ್ಕೃತಿ ಉಡುಗೆತೊಡಿಗೆ ಕಾರಣ ಎನ್ನುವಂತೆ ಸಚಿವರ ಹೇಳಿಕೆ ನೀಡಿದ್ದಾರೆ.

ಮಹಿಳೆಯರ ಗೌರವಕ್ಕೆ ಚ್ಯುತಿ ತರುವ ರೀತಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ವರ್ತಿಸಿದ್ದಾರೆ ಎಂದು ಟೀಕಿಸಿದರು. ಅಲ್ಲದೆ ಈ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಸಚಿವರು ಕ್ಷಮೆ ಕೋರುವಂತೆ ಆಯೋಗ ಸದಸ್ಯೆ ಸುಷ್ಮಾ ಸಾಹು ಆಗ್ರಹಿಸಿದರು. ಎಂ.ಜಿ. ರಸ್ತೆ ಘಟನೆ ಕುರಿತು ಪೊಲೀಸರಿಂದ ಮಾಹಿತಿ ಪಡೆಯಲಾಗಿದೆ. ಶುಕ್ರವಾರ ಮತ್ತೂಮ್ಮೆ ನಗರಕ್ಕೆ ಆಗಮಿಸಿ ಆ ಘಟನೆ ಸಂಬಂಧಿಸಿದ ಸಿಸಿಟೀವಿ ಕ್ಯಾಮೆರಾ ದೃಶ್ಯಾವಳಿಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ ಎಂದು ಅವರು ತಿಳಿಸಿದರು. 

ಕಮ್ಮನಹಳ್ಳಿ ದೌರ್ಜನ್ಯ: 6ನೇ ಆರೋಪಿ ¬ಬಂಧನ
ಬೆಂಗಳೂರು:
ಇತ್ತೀಚಿಗೆ ವರ್ಷಾಚರಣೆ ವೇಳೆ ನಡೆದಿದ್ದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತಲೆಮರೆಸಿಕೊಂಡಿದ್ದ 6ನೇ ಆರೋಪಿ ಕೊನೆಗೂ ಬಾಣಸವಾಡಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚಿಕ್ಕಬಾಣಸವಾಡಿ ನಿವಾಸಿ ಜಾರ್ಜ್‌ ಅಲಿಯಾಸ್‌ ಪಪ್ಪಿ ಬಂಧಿತನಾಗಿದ್ದು, ಆನೇಕಲ್‌ ಸಮೀಪ ಪರಿಚಿತರ ಮನೆಯಲ್ಲಿದ್ದಾಗ ಬಂಧಿಸಿದ್ದಾರೆ.

ಕೃತ್ಯ ಎಸೆಗಿದ ಬಳಿಕ ಬಂಧನ ಭೀತಿಯಿಂದ ನಗರ ತೊರೆದು ಗೋವಾ ಹಾಗೂ ತಮಿಳುನಾಡು ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದ ಅವನು ಭಾನುವಾರ ರಾತ್ರಿ ಸೆರೆಯಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಲೇ ಈ ಪ್ರಕರಣ ಸಂಬಂಧ ಪಪ್ಪಿಯ ಐವರು ಗೆಳೆಯರು ಪೊಲೀಸರು ಬಂಧಿತರಾಗಿದ್ದರು. ಪಪ್ಪಿ ಎಲೆಕ್ಟ್ರಿಶಿಯನ್‌ ಆಗಿದ್ದು, ಅಯ್ಯಪ್ಪನ ಆಪ್ತ ಗೆಳೆಯನಾಗಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next