Advertisement

Darshan; ಸಹಾನುಭೂತಿ ದುರ್ಬಳಕೆ:ಜಾಮೀನು ರದ್ದು ಮಾಡಿ ಎಂದ ಸರಕಾರ

10:52 PM Dec 06, 2024 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ನ ಆರೋಗ್ಯ ಸ್ಥಿತಿ ಹಾಗೂ ಚಿಕಿತ್ಸೆಯ ವಿಚಾರದಲ್ಲಿ ನ್ಯಾಯಾಲಯದ ಹಾದಿ ತಪ್ಪಿಸಲಾಗಿದ್ದು ವೈದ್ಯಕೀಯ ಜಾಮೀನು ಮಂಜೂರು ಮಾಡಿ ನ್ಯಾಯಾಲಯ ತೋರಿದ ಸಹಾನುಭೂತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. 5 ವಾರ ಕಳೆದರೂ ದರ್ಶನ್‌ ಯಾವುದೇ ಚಿಕಿತ್ಸೆ ಪಡೆದಿಲ್ಲ. ಆದ್ದರಿಂದ ಮಧ್ಯಾಂತರ ಜಾಮೀನು ರದ್ದುಪಡಿಸಬೇಕು ಎಂದು ರಾಜ್ಯ ಸರಕಾರ ಬಲವಾಗಿ ಪ್ರತಿಪಾದಿಸಿದೆ.

Advertisement

ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್‌, ಪವಿತ್ರಾ ಗೌಡ, ಆರ್‌. ನಾಗರಾಜು, ಎಂ. ಲಕ್ಷ್ಮಣ್‌, ಅನು ಕುಮಾರ್‌ ಅಲಿಯಾಸ್‌ ಅನು, ಜಗದೀಶ್‌ ಅಲಿಯಾಸ್‌ ಜಗ್ಗ, ಪ್ರದೋಶ್‌ ಎಸ್‌. ರಾವ್‌ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ನ್ಯಾಯಪೀಠ ಶುಕ್ರವಾರವೂ ಮುಂದುವರಿಸಿತು.

ಈ ವೇಳೆ ರಾಜ್ಯ ಸರಕಾರ (ಪೊಲೀಸರ) ಪರ ವಿಶೇಷ ಸರಕಾರಿ ಅಭಿಯೋಜಕ ಪಿ. ಪ್ರಸನ್ನಕುಮಾರ್‌ ವಾದ ಮಂಡಿಸಿ, ದರ್ಶನ್‌ ಚಿಕಿತ್ಸೆ ಪಡೆಯುತ್ತಿರುವ ವಿವರಣೆಯನ್ನು ಸವಿವರವಾಗಿ ನೀಡಿದರು. ಆದರೆ ಮಧ್ಯಾಂತರ ಜಾಮೀನಿನಲ್ಲಿ ಉಳಿಯಲು ದರ್ಶನ್‌ ಅರ್ಹನಲ್ಲ. ಆತ ಶರಣಾಗಬೇಕು. ಆನಂತರ ಜಾಮೀನು ಅರ್ಜಿ ವಿಚಾರಣೆ ನಡೆಸಬಹುದು. ಮುಂದಿನ ವಾರಕ್ಕೆ ಆರು ವಾರ ಮುಗಿಯಲಿದೆ ಎಂದು ನ್ಯಾಯಪೀಠ ಹೇಳಿತು.
ಈ ಮಧ್ಯೆ ದರ್ಶನ್‌ ಪರ ವಕೀಲ ಸಿ.ವಿ. ನಾಗೇಶ್‌, ಮಧ್ಯಾಂತರ ಜಾಮೀನು ಪ್ರಶ್ನಿಸಿ ರಾಜ್ಯ ಸರಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ ಎಂದರು. ಅದಕ್ಕೆ ಸುಪ್ರೀಂ ಕೋರ್ಟ್‌ಗೆ ಹಾಕಿದ ಮಾತ್ರಕ್ಕೆ ಇಲ್ಲಿ ವಾದಿಸಬಾರದು ಎಂದೇನಿಲ್ಲ ಎಂದು ನ್ಯಾಯಪೀಠ ಹೇಳಿತು. ಬಳಿಕ ವಿಚಾರಣೆ ಸೋಮವಾರಕ್ಕೆ (ಡಿ. 9) ಮುಂದೂಡಲಾಯಿತು.

“ನಾಳೆಯೇ ಲಕ್ವ ಹೊಡೆಯುತ್ತದೆ ಎಂದಿದ್ದರು’
ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾಗದಿದ್ದರೆ ನಾಳೆಯೇ ದರ್ಶನ್‌ ಸಾಯುತ್ತಾರೆ, ನಾಳೆ ಬೆಳಗ್ಗೆಯೇ ಲಕ್ವ ಹೊಡೆಯುತ್ತದೆ ಎಂದು ಹೇಳಿ ನ್ಯಾಯಾಲಯದ ದಾರಿ ತಪ್ಪಿಸಲಾಗಿದ್ದು, ಕೋರ್ಟ್‌ ತೋರಿದ ಸಹಾನುಭೂತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪಿ. ಪ್ರಸನ್ನ ಕುಮಾರ್‌ ತಿಳಿಸಿದರು. 5 ವಾರಗಳು ಕಳೆದರೂ ಯಾವುದೇ ಚಿಕಿತ್ಸೆ ದರ್ಶನ್‌ ಪಡೆದಿಲ್ಲ. ಹೀಗಾಗಿ ಅವರಿಗೆ ಮಂಜೂರು ಮಾಡಿರುವ ಮಧ್ಯಾಂತರ ಜಾಮೀನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next