ಯಶವಂತಪುರ: ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಕಳೆದೆರಡು ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಜೆಡಿಎಸ್ ಅಭ್ಯರ್ಥಿಯನ್ನು ಉಪ ಚುನಾವಣೆಯಲ್ಲಿ ಮಣಿಸಲೇಬೇಕೆಂದು ರಣತಂತ್ರ ಹೆಣೆದಿದ್ದಾರೆ. ನಿಷ್ಠ ಕಾಂಗ್ರೆಸಿಗರಾಗಿದ್ದ ಸೋಮಶೇಖರ್‌ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಮುನ್ನುಗ್ಗಿದ್ದಾರೆ. ಕಾಂಗ್ರೆಸ್ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಗ್ರಾಪಂ ಸದಸ್ಯರಿಂದ ಹಿಡಿದು ತಾಪಂ, ಜಿಪಂ ಹಾಗೂ ಕ್ಷೇತ್ರ ವ್ಯಾಪ್ತಿಯ ವಿಪಕ್ಷಗಳ ಪಾಲಿಕೆ ಸದಸ್ಯರನ್ನು ಬಿಜೆಪಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಯಶವಂತಪುರದಲ್ಲೆ ಬೀಡು ಬಿಟ್ಟಿದ್ದು, ಸೋಮಶೇಖರ್ ಅವರನ್ನು ಗೆಲ್ಲಿಸಲೇಬೇಕೆಂದು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೋಮಶೇಖರ್ ಬೆನ್ನಿಗೆ ನಿಂತಿದ್ದಾರೆ. ಮಂಗಳವಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕ್ಷೇತ್ರದ ಹೇರೋಹಳ್ಳಿ ಹಾಗೂ ದೊಡ್ಡಬಿದರಕಲ್ಲು ವಾರ್ಡ್ ಗಳ ಹಲವೆಡೆಗಳಲ್ಲಿ ರೋಡ್ ಶೋ ನಡೆಸಿರುವುದು ಸೋಮಶೇಖರ್ ಅವರಿಗೆ ಮತ್ತಷ್ಟು ಶಕ್ತಿ ಬಂದಿದೆ. ಈ ವೇಳೆ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಬೆಂಗಳೂರು ಬೆಳೆದಂತೆಲ್ಲಾ ಹೊರ ವಲಯ ಅಭಿವೃದ್ಧಿಯಾಗುತ್ತಿದೆ. ಮೂಲ ಸೌಕರ್ಯ ಒದಗಿಸಲು ಸರ್ಕಾರದ ಬದ್ಧವಾಗಿದೆ.
ಈ ನಿಟ್ಟಿನಲ್ಲಿ ಮಾಗಡಿ ಮುಖ್ಯರಸ್ತೆಯಲ್ಲಿ ಮೆಟ್ರೊ ವಿಸ್ತರಣೆಗೆ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು. ಯಶವಂತಪುರ ಕ್ಷೇತ್ರಕ್ಕೆ ಈಗಾಗಲೇ 761 ಕೋಟಿ ಬಿಡುಗಡೆ ಮಾಡಿದ್ದೇನೆ ಹೆಚ್ಚುವರಿ ಅನುದಾನ ಕೇಳಿದರೂ ಕೊಡಲು ಸಿದ್ಧ ಎಂದರು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹೊರವರ್ತುಲ ರಸ್ತೆ ಸೇರಿದಂತೆ ಕಾವೇರಿ ನೀರು ಸರಬರಾಜು ಹಾಗೂ ಯುಜಿಡಿ ಸೇರಿ ಎಲ್ಲ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸುವುದಾಗಿ ತಿಳಿಸಿದರು. ಕ್ಷೇತ್ರದ ಸೋಮಶೇಖರ್ ಅವರನ್ನು ಬೆಂಬಲಿಸಲು ಮನವಿ ಮಾಡಿದರು.
ಅಭ್ಯರ್ಥಿ ಎಸ್. ಟಿ. ಸೋಮಶೇಖರ್ ಮಾತನಾಡಿ, ಒಂದೇ ದಿನದಲ್ಲಿ ಸಿಎಂ 761 ಅನುದಾನ ಬಿಡುಗಡೆಗೊಳಿಸಿದ್ದಾರೆ ಎಂದರು. ದೊಡ್ಡಗೊಲ್ಲರಹಟ್ಟಿ ನೈಸ್ ಜಂಕ್ಷನ್, ಬ್ಯಾಡರಹಳ್ಳಿ ಬಸ್ ನಿಲ್ದಾಣ, ಬಿಇಎಲ್ ಒಂದನೇ ಹಂತ, ಅಂಜನಾನಗರ ಬಸ್ ನಿಲ್ದಾಣ, ಅಪ್ಪಣ್ಣಪ್ಪ ಬಡಾವಣೆ, ತುಂಗಾನಗರ ವೃತ್ತ, ಹೇರೋಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನ ವಿವಿಧೆಡೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತಬೇಟೆ ನಡೆಸಿದರು. ಸಂಸದೆ ಶೋಭಾ ಕರಂದ್ಲಾಜೆ ನಗರ ಬಿಜೆಪಿ ಜಿಲ್ಲಾಧ್ಯಕ್ಷ ಮುನಿರಾಜು ಕ್ಷೇತ್ರ ಬಿಜೆಪಿ ಅಧ್ಯಕ್ಷ ಮಾರೇಗೌಡ ಪ್ರಚಾರದಲ್ಲಿದ್ದರು.
ಕಾಂಗ್ರೆಸ್, ಜೆಡಿಎಸ್‌ನಿಂದ ರಾಜಕೀಯ ದೊಂಬರಾಟ: ಯಶವಂತಪುರ ಕ್ಷೇತ್ರದ ಪ್ರಚಾರದ ವೇಳೆ ಮಾತನಾಡಿದ ಅವರು ಕಾಂಗ್ರೆಸ್, ಜೆಡಿಎಸ್‌ನವರು ಚುನಾವಣೆಗೆ ಹೋಗೋಣ ಎನ್ನುತ್ತಿದ್ದಾರೆ. ಬಿಜೆಪಿ ಉಪಚುನಾವಣೆಯಲ್ಲಿ ಸೋತು ನಮ್ಮ ಸರ್ಕಾರ ಬಹುಮತ ಕಳೆದುಕೊಳ್ಳಬೇಕು. ಮುಂದೆ ಮತ್ತೆ ಚುನಾವಣೆ ನಡೆಯಬೇಕು ಎಂಬುದು ಕಾಂಗ್ರೆಸ್, ಜೆಡಿಎಸ್‌ನ ಉದ್ದೇಶ. ಹಾಗೆಂದು ಆರು ತಿಂಗಳಿಗೊಮ್ಮೆ ಚುನಾವಣೆಗೆ ಹೋಗೋಕಾಗತ್ತಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್, ಜೆಡಿಎಸ್‌ನವರು ರಾಜಕೀಯ ದೊಂಬರಾಟ ಮಾಡಲು ಹೊರಟಿದ್ದಾರೆ. ನಾನು ಎಲ್ಲ 15 ಕ್ಷೇತ್ರಗಳಿಗೂ 700- 800 ಕೋಟಿ ರೂ. ಅನುದಾನ ನೀಡಿ ಅಭಿವೃದ್ಧಿಪಡಿಸುತ್ತೇನೆ. ನಾನು ಜೆಡಿಎಸ್, ಕಾಂಗ್ರೆಸ್‌ನವರಂತೆ ಸುಳ್ಳು ಭರವಸೆ ನೀಡುವುದಿಲ್ಲ. ಕಾಂಗ್ರೆಸ್, ಜೆಡಿಎಸ್ ಯಾರ ಸಹಕಾರವೂ ಬೇಕಾಗಿಲ್ಲ. 15 ಕ್ಷೇತ್ರಗಳನ್ನು ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.