ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಚಂಪಾಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಭಕ್ತರು ಸಲ್ಲಿಸುವ ಬೀದಿ ಉರುಳು ಸೇವೆಯನ್ನು ಶನಿವಾರ ರಾತ್ರಿ ಲಕ್ಷದೀಪೋತ್ಸವದ ರಥೋತ್ಸವದ ಬಳಿಕ ಆರಂಭಿಸಿದ್ದಾರೆ.
ಷಷ್ಠಿಯಂದು ಮಹಾ ರಥೋತ್ಸವ ಎಳೆಯುವ ತನಕ ಈ ಸೇವೆಯನ್ನು ಭಕ್ತರು ನೆರವೇರಿಸುತ್ತಾರೆ. ಜಾತ್ರೋತ್ಸವದ ಪ್ರಮುಖ ದಿನವಾದ ಚೌತಿ, ಪಂಚಮಿಯಂದು ಅಧಿಕ ಸಂಖ್ಯೆಯಲ್ಲಿ ಭಕ್ತರು ಈ ಸೇವೆ ನೆರವೇರಿಸುತ್ತಾರೆ.
ಉರುಳು ಸೇವೆ ಮಾಡುವ ಭಕ್ತರು ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದ ರಾಜರಸ್ತೆ, ರಥಬೀದಿಯಲ್ಲಿ ಉರುಳಿಕೊಂಡು ದೇಗುಲಕ್ಕೆ ಬಂದು ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿ ಮೂಡು ಬಾಗಿಲಿನಲ್ಲಿ ಹೊರ ಹೋಗಿ ಎದುರಿನ ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಾರೆ.
ಆಡಳಿತ ಮಂಡಳಿಯು ಬೀದಿ ಉರುಳು ಸೇವೆ ನೆರವೇರಿಸಲು ವಿಶೇಷ ಅನುಕೂಲತೆ ಮಾಡಿದೆ. ಈ ಸೇವೆ ಮಾಡುವ ಭಕ್ತರಿಗೆ ಪ್ರತ್ಯೇಕ ಪಥದ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಅಲ್ಲದೆ ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಸೂಚನ ಫಲಕಗಳನ್ನು ವ್ಯವಸ್ಥೆ ಮಾಡಲಾಗಿದೆ.
ಕುಮಾರಧಾರದಿಂದ ಕುಕ್ಕೆಯ ತನಕ ವಿದ್ಯುತ್ ಸೌಕರ್ಯವನ್ನು ವ್ಯವಸ್ಥೆಗೊಳಿಸಲಾಗಿದೆ. ಪ್ರತಿನಿತ್ಯ ಈ ರಸ್ತೆಯನ್ನು ಗುಡಿಸಿ ಸ್ವಚ್ಚ ಮಾಡಿ ಆಗಾಗ್ಗೆ ನೀರನ್ನು ಹಾಕಿ ಶುಚಿಗೊಳಿಸಲಾಗುತ್ತದೆ. ಉರುಳು ಸೇವೆ ನೆರವೇರಿಸುವ ಭಕ್ತರ ಜತೆಗೆ ದೇಗುಲದ ವತಿಯಿಂದ ಸಿಬಂದಿಗಳನ್ನು ಒದಗಿಸಲಾಗುತ್ತದೆ.