Advertisement
ಮಡಿಕೇರಿಬಹಳ ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿದ್ದರೂ 2004ರಿಂದೀಚೆಗೆ ಅಧಿಕಾರಕ್ಕೆ ಏರಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. 2004ರಲ್ಲಿ ಕೆ.ಜಿ. ಬೋಪಯ್ಯ ಜಯ ಗಳಿಸಿದರು. ಅನಂತರದ ಚುನಾವಣೆಗಳಲ್ಲಿ ಅಪ್ಪಚ್ಚು ರಂಜನ್ ಜಯ ಗಳಿಸುತ್ತಾ ಬಂದಿದ್ದಾರೆ. 2023ರಲ್ಲೂ ಬಿಜೆಪಿ ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಇಲ್ಲಿ ಡಾ| ಮಂಥರ್ ಗೌಡ ಅವರನ್ನು ಕಣಕ್ಕೆ ಇಳಿಸಿದೆ. ಮಂಥರ್ ಗೌಡ ಈ ಹಿಂದೆ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಜೆಡಿಎಸ್‌ನಿಂದ ಕಣಕ್ಕೆ ಇಳಿದಿರುವ ಎನ್.ಎಂ. ಮುತ್ತಪ್ಪ ಪ್ರಬಲ ಸ್ಪರ್ಧೆ ನೀಡಲಿದ್ದಾರೆ. ಇವರ ಮತಗಳಿಗೆ ಆಧಾರದಲ್ಲಿ ಜಯ ಯಾರಿಗೆ ಎಂಬುದು ನಿರ್ಧಾರವಾಗಲಿದೆ. ಅರೆಭಾಷಿಕ ಗೌಡ ಹಾಗೂ ಒಕ್ಕಲಿಗ ಗೌಡ ಸಮುದಾಯವರು ಈ ಕ್ಷೇತ್ರದಲ್ಲಿ ಹೆಚ್ಚಿದ್ದಾರೆ. ಕೊಡವ ಸಮುದಾಯವರು ಇದ್ದಾರೆ. ಮೂರು ಪಕ್ಷಗಳಿಂದ ಪ್ರಚಾರ ಚುರುಕುಗೊಂಡಿದೆ. ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳಲು ಹಾಗೂ ಕಾಂಗ್ರೆಸ್ ಕ್ಷೇತ್ರದಲ್ಲಿ ಅಧಿಕಾರ ಪಡೆಯಲು ಹೋರಾಡುತ್ತಿವೆ.
ಈ ಕ್ಷೇತ್ರದಲ್ಲೂ ಕಾಂಗ್ರೆಸ್ ಬಹುಕಾಲ ಆಡಳಿತ ನಡೆಸಿದ್ದರೂ 2004ರ ಅನಂತರದಲ್ಲಿ ಜಯ ಕಾಣಲಿಲ್ಲ. 2008ರಲ್ಲಿ ಮಡಿಕೇರಿ ಬಿಟ್ಟು ವಿರಾಜಪೇಟೆಯಿಂದ ಸ್ಪರ್ಧಿಸಿ ಜಯ ಸಾಧಿಸಿದ ಕೆ.ಜಿ. ಬೋಪಯ್ಯ 2023ರ ಚುನಾವಣೆಯಲ್ಲೂ ಬಿಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದಾರೆ. ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಹಾಗೂ ಹಿರಿಯ ವಕೀಲರಾಗಿದ್ದ ದಿ| ಎ.ಕೆ. ಸುಬ್ಬಯ್ಯ ಅವರ ಪುತ್ರ ಎ.ಎಸ್. ಪೊನ್ನಣ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಜೆಡಿಎಸ್‌ನಿಂದ ಮನ್ಸೂರ್ ಅಲಿ ಕಣದಲ್ಲಿದ್ದಾರೆ. ಪೊನ್ನಣ್ಣ ಮತ್ತು ಬೋಪಯ್ಯ ಅವರ ನಡುವೆ ನೇರ ಹಣಾಹಣಿಯಿದೆ. ಜಾತಿ ಲೆಕ್ಕಾಚಾರಗಳು ಜೋರಾಗಿವೆ. ಕೊಡವ ಹಾಗೂ ಗೌಡ ಸಮುದಾಯದ ಮತಗಳು ಹೆಚ್ಚಿವೆ. ಅಲ್ಪಸಂಖ್ಯಾಕರ ಮತಗಳು ಇದ್ದರೂ ಫಲಿತಾಂಶದ ಮೇಲೆ ಪರಿಣಾಮ ಬೀರುವಷ್ಟಿಲ್ಲ. ಅಧಿಕಾರದ ಚುಕ್ಕಾಣೆ ಹಿಡಿಯಲು ಕಾಂಗ್ರೆಸ್ ಎಲ್ಲ ಪ್ರಯತ್ನ ನಡೆಸುತ್ತಿದ್ದು, ಬಿಜೆಪಿ ಅಧಿಕಾರ ಮುಂದುವರಿಸಲು ತಂತ್ರ ರೂಪಿಸುತ್ತಿದೆ.