Advertisement

ಅಪಾರ್ಟ್‌ಮೆಂಟ್‌ ಮನೆಗಳಿಗೆ ಮೀಟರ್‌ ಅಳವಡಿಕೆ?

10:55 PM Jul 02, 2019 | Lakshmi GovindaRaj |

ಬೆಂಗಳೂರು: ನೀರಿನ ಬವಣೆ ಹಿನ್ನೆಲೆಯಲ್ಲಿ ಹೊಸ ಅಪಾರ್ಟ್‌ಮೆಂಟ್‌ಗಳಿಗೆ ನಿಷೇಧ ವಿಧಿಸಲು ಚಿಂತನೆ ನಡೆಸಿರುವ ಸರ್ಕಾರ, ಇದರ ಬೆನ್ನಲ್ಲೇ ನಗರದಲ್ಲಿ ಈಗಾಗಲೇ ಇರುವ ಅಪಾರ್ಟ್‌ಮೆಂಟ್‌ಗಳಿಗೆ ಪೂರೈಕೆ ಆಗುತ್ತಿರುವ ಹೆಚ್ಚುವರಿ ನೀರಿಗೂ ಕತ್ತರಿ ಹಾಕಲು ಮುಂದಾಗಿದೆ.

Advertisement

ಈ ಸಂಬಂಧ ಅಪಾರ್ಟ್‌ಮೆಂಟ್‌ಗಳಲ್ಲಿರುವ ಎಲ್ಲ ಫ್ಲ್ಯಾಟ್‌ಗಳಿಗೆ ಪ್ರತ್ಯೇಕ ಮೀಟರ್‌ಗಳನ್ನು ಅಳವಡಿಸಲು ಚಿಂತನೆ ನಡೆಸಿದೆ. ಇದರ ನೆರವಿನಿಂದ ಪ್ರತಿ ಮನೆಗಳಿಗೆ ಪೂರೈಕೆ ಆಗುವ ನೀರಿನ ಪ್ರಮಾಣ ಲೆಕ್ಕ ಹಾಕಲಾಗುವುದು. ಅಗತ್ಯಕ್ಕಿಂತ ಹೆಚ್ಚು ಪೂರೈಕೆ ಆಗುತ್ತಿದ್ದರೆ, ಆ “ಹೆಚ್ಚುವರಿ ನೀರಿಗೆ’ ಕತ್ತರಿ ಹಾಕಲಾಗುತ್ತದೆ. ಈ ಮೂಲಕ ನೀರಿನ ಮಿತವ್ಯಯಕ್ಕೆ ಯೋಜನೆ ರೂಪಿಸಲಾಗುತ್ತಿದೆ.

ಈಚೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್‌ ನೇತೃತ್ವದಲ್ಲಿ ನಡೆದ ಜಲಮಂಡಳಿ ಅಧಿಕಾರಿಗಳ ಸಭೆಯಲ್ಲಿ ಪ್ರತಿ ಫ್ಲ್ಯಾಟ್‌ಗಳಿಗೂ ಪ್ರತ್ಯೇಕ ಮೀಟರ್‌ ಅಳವಡಿಸುವ ಯೋಜನೆ ಪ್ರಸ್ತಾಪ ಆಗಿದೆ. ಶೀಘ್ರದಲ್ಲೇ ಈ ಸಂಬಂಧದ ಸಾಧ್ಯಾಸಾಧ್ಯತೆಗಳ ಯೋಜನೆ ರೂಪಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಜಲಮಂಡಳಿಯ ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಒಂದೊಂದು ಅಪಾರ್ಟ್‌ಮೆಂಟ್‌ ಅಥವಾ ಕಟ್ಟಡಗಳು ನೂರಾರು ಮನೆಗಳನ್ನು ಒಳಗೊಂಡಿರುತ್ತವೆ. ಆದರೆ, ಆ ಎಲ್ಲ ಮನೆಗಳಿಗೂ ಸೇರಿ ಒಂದೇ ಮೀಟರ್‌ ಇರುತ್ತದೆ. ಕಟ್ಟಡದಲ್ಲೇ ದೊಡ್ಡ ಟ್ಯಾಂಕ್‌ಗಳನ್ನು ನಿರ್ಮಿಸಿಕೊಂಡು ಅದರಲ್ಲಿ ಶೇಖರಣೆ ಮಾಡಿಕೊಳ್ಳಲಾಗಿರುತ್ತದೆ. ಇದರಿಂದ ನಿತ್ಯ ಬಳಕೆಯಾಗುವ ನೀರಿನ ಪ್ರಮಾಣ ನಿಖರವಾಗಿ ಗೊತ್ತಾಗುವುದಿಲ್ಲ. ತಿಂಗಳಿಗೆ ಒಮ್ಮೆಲೆ ಬಿಲ್‌ ಆಧರಿಸಿ ಬಳಕೆಯಾದ ನೀರಿನ ಪ್ರಮಾಣ ಲೆಕ್ಕ ಮಾಡಲಾಗುತ್ತಿದೆ. ಆದ್ದರಿಂದ ಪ್ರತ್ಯೇಕ ಮೀಟರ್‌ಗಳ ಅಳವಡಿಕೆಗೆ ಚಿಂತನೆ ನಡೆದಿದೆ ಎಂದು ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ಸ್ಪಷ್ಟಪಡಿಸಿದರು.

ಅಳವಡಿಕೆ ಸುಲಭವಲ್ಲ: ಆದರೆ, ಇದು ಅಷ್ಟು ಸುಲಭವೂ ಅಲ್ಲ. ನಗರದಲ್ಲಿ ಒಟ್ಟಾರೆ 22,645 ಅಪಾರ್ಟ್‌ಮೆಂಟ್‌ಗಳು ಕಾವೇರಿ ನೀರಿನ ಸಂಪರ್ಕ ಹೊಂದಿವೆ (20ಕ್ಕೂ ಹೆಚ್ಚು ಫ್ಲ್ಯಾಟ್‌ಗಳನ್ನು ಹೊಂದಿರುವಂತಹವು ಮಾತ್ರ). ಆದರೆ, ಮನೆಗಳು ಲಕ್ಷಾಂತರ ಇವೆ. ಪ್ರತಿ ಮನೆಗಳಿಗೆ ಜಲಮಂಡಳಿಯೇ ಹೋಗಿ ಮೀಟರ್‌ ಅಳವಡಿಸುವುದು ಅಸಾಧ್ಯ ಮತ್ತು ಸಾಕಷ್ಟು ಸಮಯ ಹಿಡಿಯುತ್ತದೆ. ಹಾಗಾಗಿ, ಆಯಾ ಅಪಾರ್ಟ್‌ಮೆಂಟ್‌ಗಳ ಮಾಲೀಕರೇ ಮಿಟರ್‌ ಅಳವಡಿಸಬೇಕಾಗುತ್ತದೆ.

Advertisement

ಇದಕ್ಕಾಗಿ ನಿಯಮವೊಂದನ್ನು ರೂಪಿಸಬೇಕಾಗುತ್ತದೆ ಎಂದೂ ಜಲಮಂಡಳಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಹಾಗೊಂದು ವೇಳೆ ಕಡ್ಡಾಯವಾಗಿ ಮೀಟರ್‌ ಅಳವಡಿಸಿದರೆ, ಮುಖ್ಯವಾಗಿ ನೀರಿನ ಬಳಕೆಗೆ ಕಡಿವಾಣ ಬೀಳುತ್ತದೆ. ಅನಗತ್ಯ ನೀರಿನ ಪೋಲು ಆಗುವುದಿಲ್ಲ. ಬಳಕೆ ಪ್ರಮಾಣ ತಿಳಿಯುತ್ತದೆ. ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕಂತೆ ನೀರಿನ ಪೂರೈಸಬಹುದು. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಪ್ರತಿ ಮನೆಯ ನೀರಿನ ಬಳಕೆ ಆಧರಿಸಿ ದರಗಳ ಸ್ಲಾéಬ್‌ಗಳನ್ನು ನಿಗದಿಪಡಿಸಬಹುದು ಎಂದು ಅವರು ವಿವರಿಸಿದರು.

ಪ್ರಸ್ತುತ ಒಟ್ಟಾರೆ ಯಾವೊಂದು ಅಪಾರ್ಟ್‌ಮೆಂಟ್‌ಗೆ ಪೂರೈಕೆಯಾಗಿರುವ ನೀರು ಮತ್ತು ಅಲ್ಲಿರುವ ಫ್ಲ್ಯಾಟ್‌ಗಳೊಂದಿಗೆ ತಾಳೆಹಾಕಿ ನೀರಿನ ದರವನ್ನು ನಿಗದಿಪಡಿಸಲಾಗುತ್ತದೆ. ಉದಾಹರಣೆಗೆ 20 ಫ್ಲ್ಯಾಟ್‌ಗಳಿದ್ದು, 1.60 ಲಕ್ಷ ಲೀ. ನೀರು ಬಳಕೆ ಮಾಡಿದ್ದರೆ, ಪ್ರತಿ ಫ್ಲ್ಯಾಟ್‌ ಬಳಸಿರುವ ನೀರಿನ ಪ್ರಮಾಣ 8 ಸಾವಿರ ಲೀ. ಆಗುತ್ತದೆ.

ಇದಕ್ಕಿಂತ ಹೆಚ್ಚು ಆಗಿದ್ದರೆ, ಅದನ್ನು ನಂತರದ ಅಂದರೆ 8001ರಿಂದ 25 ಸಾವಿರ ಲೀ. ಸ್ಲಾಬ್‌ಗ ಪರಿಗಣಿಸಲಾಗುತ್ತದೆ. ಆದರೆ, ಬಿಲ್ಡರ್‌ಗಳ ಪ್ರಕಾರ ನಗರದಲ್ಲಿರುವ ಬಹುತೇಕ ಅಪಾರ್ಟ್‌ಮೆಂಟ್‌ಗಳು ಕಾವೇರಿ ನೀರು ಅವಲಂಬಿಸಿಲ್ಲ. ಟ್ಯಾಂಕರ್‌ ಅಥವಾ ಸ್ವಂತ ಕೊಳವೆಬಾವಿಗಳಿಂದ ನೀರು ಪಡೆಯಲಾಗುತ್ತಿದೆ. ಹೀಗಿರುವಾಗ, ಇದು ಎಷ್ಟರಮಟ್ಟಿಗೆ ಫ‌ಲ ನೀಡುತ್ತದೆ ಎಂಬುದನ್ನೂ ಕಾದುನೋಡಬೇಕು ಎನ್ನುತ್ತಾರೆ ತಜ್ಞರು.

ಗೃಹ ಬಳಕೆಗೆ ನಿಗದಿಪಡಿಸಲಾದ ನೀರಿನ ದರ
ಸ್ಲಾಬ್‌ (ಲೀ.ಗಳಲ್ಲಿ) ನೀರಿನ ದರ
0-8,000 7 ರೂ.
8001-25,000 11 ರೂ.
25,001-50,000 26 ರೂ.
50,000 ಮೇಲ್ಟಟ್ಟಿದ್ದರೆ 45 ರೂ.
* ಅಪಾರ್ಟ್‌ಮೆಂಟ್‌ಗಳಿಗೆ ಪ್ರತಿ ಲೀ.ಗೆ 22 ರೂ.

ನಗರದ ಎಲ್ಲ ಅಪಾರ್ಟ್‌ಮೆಂಟ್‌ಗಳಲ್ಲಿರುವ ಪ್ರತಿ ಫ್ಲ್ಯಾಟ್‌ಗಳಿಗೂ ಮೀಟರ್‌ ಅಳವಡಿಸುವ ಸಂಬಂಧ ನೀತಿಯೊಂದನ್ನು ಜಾರಿಗೊಳಿಸುವ ಚಿಂತನೆಯಿದೆ. ಅಪಾರ್ಟ್‌ಮೆಂಟ್‌ ಮಾಲೀಕರು ಈ ಸಬ್‌ ಮೀಟರ್‌ಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದರಿಂದ ನೀರಿನ ಮಿತ ಬಳಕೆ ಜತೆಗೆ ಜಲಮಂಡಳಿಗೂ ನಿಖರ ಲೆಕ್ಕ ಸಿಗಲಿದೆ.
-ತುಷಾರ್‌ ಗಿರಿನಾಥ್‌, ಅಧ್ಯಕ್ಷರು, ಜಲಮಂಡಳಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next