ಮಂಗಳೂರು: ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ) 2021- 22ನೇ ಸಾಲಿನಲ್ಲಿ ಪ್ರತೀ ಯೂನಿಟ್‌ಗೆ ಸರಾಸರಿ 1.67 ರೂ. ವಿದ್ಯುತ್ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಪ್ರಸ್ತಾವ ಸಲ್ಲಿಸಿದೆ.
ನಗರ ಮತ್ತು ಗ್ರಾಮಾಂ ತರ ಪ್ರದೇಶಗಳಲ್ಲಿ ಎಲ್ಲ ವರ್ಗಗಳ ವಿದ್ಯುತ್ ಬಳಕೆ ದಾರರನ್ನು ಗಮನದಲ್ಲಿ ಇರಿಸಿ ಈ ವಿದ್ಯುತ್ ದರ ಏರಿಕೆಯ ಪ್ರಸ್ತಾವವನ್ನು ಮೆಸ್ಕಾಂ ಸಲ್ಲಿಸಿದೆ.
ಈಗಿನ ದರಗಳಿಂದ ಮೆಸ್ಕಾಂನ ಆದಾಯ ಅಗತ್ಯ ಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಈ ದರ ಏರಿಕೆಯ ಪ್ರಸ್ತಾವ ಮಾಡಲಾಗಿದೆ. ಪ್ರಸ್ತಾವ ಸಂದರ್ಭದಲ್ಲಿ ನಿಗದಿತ ಶುಲ್ಕ, ಡಿಮಾಂಡ್ ಶುಲ್ಕಗಳ ಏರಿಕೆಯನ್ನು ಒಳಗೊಂಡು ಮತ್ತು ಶೇ. 30 ನಿಗದಿತ ವೆಚ್ಚಗಳ ವಸೂಲಾತಿಯನ್ನು ಪರಿಗಣಿಸಲಾಗಿದೆ. 2021-22ನೇ ಸಾಲಿಗೆ ವಾರ್ಷಿಕ ಆದಾಯ ಅಗತ್ಯಕ್ಕೆ ಅನುಗುಣವಾಗಿ ಕ್ರಾಸ್ ಸಬ್ಸಿಡಿ, ಸರ್ಚಾರ್ಜ್ ಮತ್ತು ಹೆಚ್ಚುವರಿ ಸರ್ಚಾರ್ಜ್‌ಗಳನ್ನು ಪರಿಷ್ಕರಿಸಿ ಅನುಮೋದಿಸುವಂತೆಯೂ ಪ್ರಸ್ತಾವಿಸಲಾಗಿದೆ.
ಮೆಸ್ಕಾಂ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಕಳೆದ ಸಾಲಿನಲ್ಲಿ ಸರಾಸರಿ 62 ಪೈಸೆ ವಿದ್ಯುತ್ ದರ ಏರಿಸುವಂತೆ ಮೆಸ್ಕಾಂ ಆಯೋಗಕ್ಕೆ ಪ್ರಸ್ತಾವ ಮಂಡಿಸಿತ್ತು. ಅನಂತರ ಆಯೋಗವು ಸರಾಸರಿ 40 ಪೈಸೆ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು.
ಆಕ್ಷೇಪಣೆಗೆ ಅವಕಾಶ
ದರ ಪರಿಷ್ಕರಣೆ ಬಗ್ಗೆ ಸಾರ್ವಜನಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು 30 ದಿನಗಳ ಅವಕಾಶ ಇದೆ. ಆಕ್ಷೇಪಣೆಗಳನ್ನು ನಿಗದಿತ ನಮೂನೆಯಲ್ಲಿ ಸ್ವೀಕೃತಿ ಅಧಿಕಾರಿ, ಕೆಇಆರ್‌ಸಿ, 16ಸಿ-1, ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾ, ವಸಂತ ನಗರ, ಬೆಂಗಳೂರು ಇವರಿಗೆ 6 ಸೆಟ್‌ಗಳಲ್ಲಿ ಸಲ್ಲಿಸಿ ಒಂದು ಪ್ರತಿಯನ್ನು ಅಧೀಕ್ಷಕ ಎಂಜಿನಿಯರ್ (ವಾಣಿಜ್ಯ), ಕಾರ್ಪೊರೇಟ್ ಕಚೇರಿ, ಮೆಸ್ಕಾಂ ಭವನ, ಬಿಜೈ, ಮಂಗಳೂರು ಇವರಿಗೆ ಕಳುಹಿಸಿಕೊಡಬೇಕು.