ಬೆಂಗಳೂರು: ವಿಜ್ಞಾನ, ತಂತ್ರಜ್ಞಾನದ ಆಧುನಿಕತೆ ಎಷ್ಟೇ ಮುಂದುವರಿದರೂ ಮಾಟ-ಮಂತ್ರದಿಂದ ಮಾನಸಿಕ ಸಮಸ್ಯೆ ಉಂಟಾಗುತ್ತದೆ ಎಂದು ನಂಬುವವರೂ ಇದ್ದೇ ಇರುತ್ತಾರೆ. ಹೌದು, ನಗರದ “ಪೀಪಲ್ ಟ್ರೀ ಮಾರ್ಗ’ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಬೆಂಗಳೂರಿನ ಶೇ.12ರಷ್ಟು ಜನ ಮಾಟಮಂತ್ರದಿಂದ ಮಾನಸಿಕ ಅಸ್ವಸ್ಥತೆ ಸಾಧ್ಯ ಎಂಬುದನ್ನು ಒಪ್ಪಿಕೊಂಡಿರುವುದು ಗೊತ್ತಾಗಿದೆ.
ಮಾನಸಿಕ ಸಮಸ್ಯೆಗಳ ಕುರಿತ ನಿಲುವುಗಳ ಬಗ್ಗೆ ನಗರದ 300 ಜನರನ್ನು ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದ ಪ್ರಕಾರ ಶೇ.12ರಷ್ಟು ಮಂದಿ ತಮಗೆ ಮಾಟಮಂತ್ರದಲ್ಲಿ ನಂಬಿಕೆ ಇದೆ. ಅದರಿಂದ ಮಾನಸಿಕ ಅಸ್ವಸ್ಥತೆ ಉಂಟಾಗುತ್ತದೆ ಹಾಗೂ ಅದಕ್ಕೆ ಚಿಕಿತ್ಸೆ ನೀಡಲಾಗದು ಎಂದು ಹೇಳಿದ್ದಾರೆ.
ಶೇ.10ರಷ್ಟು ಮಂದಿಗೆ ಸಾಮಾನ್ಯ ಮಾನಸಿಕ ಸಮಸ್ಯೆಗಳಾದ ಖನ್ನತೆ ಮತ್ತು ಆತಂಕ ಕುರಿತಾಗಿ ಏನೂ ಗೊತ್ತಿಲ್ಲ. ಶೇ.30 ಜನರಲ್ಲಿ ಭಂಗಿ ವ್ಯಸನ ಮತ್ತು ಗಂಭೀರ ಮಾನಸಿಕ ಸಮಸ್ಯೆ ಸಾಬೀತಾಗಿದ್ದರೂ ಇದರಿಂದ ಹಾನಿ ಇಲ್ಲ ಎನ್ನುತ್ತಿದ್ದಾರೆ. ಶೇ.30ರಷ್ಟು ಮಂದಿಗೆ ಸೈಕೋಸಿಸ್ ಅಥವಾ ಸ್ಕಿಝೊಫ್ರೆನಿಯಾ, ಭ್ರಾಂತಿ ಕುರಿತು ಏನೂ ತಿಳಿದಿಲ್ಲ. ಇನ್ನು ಕೆಲವರು ಮಾನಸಿಕ ಸಮಸ್ಯೆಗಳು ಹಿಂಸೆಯೊಂದಿಗೆ ಸಂಬಂಧ ಹೊಂದಿವೆ ಮತ್ತು ಇದು ವಂಶವಾಹಿ ಎಂದಿದ್ದಾರೆ.
ಗುಣಮಟ್ಟದ ಮಾನಸಿಕ ಆರೋಗ್ಯ ಪೂರೈಕೆಯಲ್ಲಿ ಈ ಸಮಸ್ಯೆಯ ಜಾಗೃತಿಗೆ ಸಮೀಕ್ಷೆ ಮಾಡಿದ್ದೇವೆ. ಮಾನಸಿಕ ಸಮಸ್ಯೆಗಳ ಕುರಿತು ಮುಕ್ತವಾಗಿ ಮಾತನಾಡಲು, ವೃತ್ತಿಪರ ನೆರವು ಪಡೆಯಲು ಉತ್ತೇಜಿಸುತ್ತೇವೆ ಎಂದು ಡಾ.ಸತೀಶ್ ರಾಮಯ್ಯ ಹೇಳಿದರು.
ಆರೋಗ್ಯ ಕುರಿತ ಜಾಗೃತಿ
ಮಾನಸಿಕ ಸಮಸ್ಯೆಗಳ ಕುರಿತಾದ ಅರಿವು ಮೂಡಿಸುವ ಉದ್ದೇಶದಿಂದ ಯಲಹಂಕದ ಪೀಪಲ್ ಟ್ರೀ ಮಾರ್ಗ ಆಸ್ಪತ್ರೆಯಲ್ಲಿ ಭಾನುವಾರ ಮಾನಸೋ ತ್ಸವ ಏರ್ಪಡಿಸಲಾಯಿತು. ಯುವ ಜನತೆ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಾನಸಿಕ ಆರೋಗ್ಯ ಕುರಿತಾದ ಸಂಗೀತ, ನೃತ್ಯ, ಕಲೆ, ಛಾಯಾಗ್ರಹಣ ಮತ್ತು ಕವಿತೆ ಬರೆಯುವ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು.