Advertisement

Menstruation: ಋತುಸ್ರಾವದ ಏರುಪೇರು….ಇದಕ್ಕೆ ಸುಲಭ ಪರಿಹಾರವೇನು?

05:30 PM Aug 16, 2023 | Team Udayavani |

ತಿಂಗಳ “ಆ ದಿನಗಳು’ ಹತ್ತಿರ ಬಂತೆಂದರೆ ಮಹಿಳೆಯರಿಗೆ ಅದೇನೋ ಬೇಜಾರು, ಟೆನ್ಶನ್ನು. ಮನಸ್ಸಿನಲ್ಲಿ ಗೊಂದಲದ ವಾತಾವರಣ. ಮುಟ್ಟಿನ ದಿನಗಳನ್ನು ದಾಟುವುದೇ ಒಂದು ಹರಸಾಹಸ. ರಕ್ತಸ್ರಾವದ ಜೊತೆಗೆ ಕಿಬ್ಬೊಟ್ಟೆಯ ನೋವು, ಸುಸ್ತು, ತಲೆ ತಿರುಗುವುದು, ಕಾಲಿನ ಸ್ನಾಯುಗಳ ಸೆಳೆತ, ಕೂರಲು, ನಿಲ್ಲಲೂ ಆಗದ ಪರಿಸ್ಥಿತಿಯಲ್ಲಿ ಆಗಾಗ್ಗೆ ಪ್ಯಾಡ್‌ಗಳನ್ನು ಬದಲಿಸುವ ಕಷ್ಟ ಬೇರೆ. 

Advertisement

ಪ್ರತಿ ತಿಂಗಳು ಮುಟ್ಟಾಗುವುದು ಆರೋಗ್ಯದ ಲಕ್ಷಣ. ಆರೋಗ್ಯವಂತ ಮಹಿಳೆಯ ಋತುಚಕ್ರವು 28 ದಿನಗಳಾಗಿದ್ದು, ಸಹಜವಾಗಿ 3-5 ದಿನಗಳವರೆಗೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಹೆಣ್ಣು ಮಕ್ಕಳ ಮುಟ್ಟು ಅನಿಯಮಿತವಾಗಿ ಬಿಟ್ಟಿದೆ. ಋತುಚಕ್ರದ ಏರುಪೇರು, ವಿಪರೀತ ರಕ್ತಸ್ರಾವ ಅಥವಾ ರಕ್ತಸ್ರಾವ ಇಲ್ಲದಿರುವಿಕೆಗಳೂ ರೋಗಗಳ ಲಕ್ಷಣಗಳಾಗಿರುತ್ತವೆ.

ಮುಟ್ಟಿನ ತೊಂದರೆಗಳು
*ಮುಟ್ಟಾಗುವ 1 ವಾರದ ಮೊದಲು ಮಹಿಳೆಯರಿಗೆ ಅದರ ಬಗ್ಗೆ ಸೂಚನೆ ಸಿಕ್ಕಿರುತ್ತದೆ. ಹಲವರಿಗೆ ಕಿಬ್ಬೊಟ್ಟೆಯಲ್ಲಿ ನೋವು, ವಿಪರೀತ ಕೋಪ ಅಥವಾ ಡಿಪ್ರಶನ್‌, ತಲೆ ನೋವು ಕಾಣಿಸಿಕೊಂಡರೆ ಕೆಲವರಿಗೆ ಬಿಳಿ ಸೆರಗು, ಕಾಲಿನಲ್ಲಿ ಸೆಳೆತ, ಅತಿಯಾದ ಸುಸ್ತು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

*ಋತುಚಕ್ರದ ವೇಳೆ ಉಂಟಾಗುವ ನೋವಿನ ಸೆಳೆತಕ್ಕೆ “ಡಿಸೆನೊರಿಯಾ’ ಎನ್ನುತ್ತಾರೆ. ಗರ್ಭಾಶಯದ ಸಂಕೋಚನದಿಂದಾಗಿ ಹೊಟ್ಟೆಯಲ್ಲಿ ಒತ್ತಡದ ಭಾವನೆ, ಕಿಬ್ಬೊಟ್ಟೆ ಜೊತೆಗೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ.

*ಅಮೆನೋರಿಯಾ! ಇದು ಅನಿಮಿಯತ ಋತುಚಕ್ರದ ಸಮಸ್ಯೆಯಾಗಿದ್ದು ಸತತವಾಗಿ 3 ಋತುಚಕ್ರದ ಅವಧಿಯಲ್ಲಿ ಏರುಪೇರು ಕಾಣಿಸಿಕೊಂಡರೆ ಅದು ಅಮೆನೋರಿಯಾ ಲಕ್ಷಣ.

Advertisement

*ಮೆನೋರಾಜಿಯಾ! ಅತಿಯಾದ ಹಾಗೂ ದೀರ್ಘಾವಧಿಯಲ್ಲಿ ಋತುಸ್ರಾವವಾಗುವುದು. ಇದು ಗರ್ಭಾಶಯದಲ್ಲಿ ಗಡ್ಡೆಗಳು, ಅನೀಮಿಯಾ, ಹಾರ್ಮೋನುಗಳ ಅಸಮತೋಲನದಿಂದ ಕಂಡುಬರುತ್ತದೆ.

ಅತಿ ಸುಲಭದ ಪರಿಹಾರ
1. ಪ್ರಕೃತಿದತ್ತ ಆಹಾರ ಸೇವನೆ ಅತ್ಯಗತ್ಯ. ಅತಿ ಖಾರ, ಎಣ್ಣೆಯ ಪದಾರ್ಥಗಳನ್ನು ವರ್ಜಿಸಿ. ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು.
2. ಶುಂಠಿಯು ನೈಸರ್ಗಿಕ ನೋವು ನಿವಾರಕವಾಗಿದ್ದು, ಆಹಾರದಲ್ಲಿ ಅದನ್ನು ಬಳಸಿ.
3. ಕುದಿಸಿದ ಜೀರಿಗೆ ನೀರನ್ನು ಕುಡಿಯುವುದರಿಂದ ನೋವು ಕಡಿಮೆಯಾಗುತ್ತದೆ.
4. ಪಪ್ಪಾಯಿ ಹಣ್ಣು ಸೇವಿಸುವುದರಿಂದ ಸಮಯಕ್ಕೆ ಸರಿಯಾಗಿ ಮುಟ್ಟಾಗುತ್ತದೆ.
5. ಮುಟ್ಟಿನ ಸಮಯದಲ್ಲಿ ಡಿಹೈಡ್ರೇಷನ್‌ ಆಗುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹಾಗೂ ಜ್ಯೂಸ್‌ ಸೇವಿಸಿ.
6. ತಣ್ಣೀರಿನ ಕಟಿ ಸ್ನಾನದಿಂದ ಹಾರ್ಮೋನುಗಳ ಸಮತೋಲನವಾಗಿ, ಮುಟ್ಟಿನ ತೊಂದರೆಗಳನ್ನು ನಿವಾರಿಸಬಹುದು.
7. ಮನಸ್ಸಿನ ಚಂಚಲತೆಯನ್ನು ನಿವಾರಿಸಲು ಯೋಗ, ಧ್ಯಾನವು ಸಹಕಾರಿ.

 ಡಾ. ಶ್ರೀಲತಾ ಪದ್ಯಾಣ,ಪ್ರಕೃತಿ ಚಿಕಿತ್ಸಾ ತಜ್ಞೆ

Advertisement

Udayavani is now on Telegram. Click here to join our channel and stay updated with the latest news.

Next