ನ್ಯೂಯಾರ್ಕ್ : ಸರಣಿ ವಲಸೆಯ ಮೂಲಕ ಅಥವಾ ಕುಟುಂಬದ ನೆಲಯಲ್ಲಿ (chain migration) ಅಮೆರಿಕ ಪೌರತ್ವ ಪಡೆಯುವ ಕಾನೂನನ್ನು ಅತ್ಯುಗ್ರವಾಗಿ ವಿರೋಧಿಸುತ್ತಾ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಉಲ್ಟಾ ಹೊಡೆದಿದ್ದಾರೆ.
ಟ್ರಂಪ್ ಅವರ ಅತ್ತೆ, ಮಾವ, ಪ್ರಥಮ ಮಹಿಳೆ ಮೆಲಾನಿಯಾ ಅವರ ಸ್ಲೊವೇನಿಯನ್ ಹೆತ್ತವರಾದ, ತಂದೆ ವಿಕ್ಟರ್ ಮತ್ತು ತಾಯಿ ಅಮಾಲಿಜಾ ನಾವ್ಸ್ ಅವರಿಗೆ ಕೌಟುಂಬಿಕ ನೆಲೆಯಲ್ಲೇ ಅಮೆರಿಕ ಪೌರತ್ವವನ್ನು ನೀಡಲಾಗಿರುವುದು ಈಗ ಎಲ್ಲಡೆ ಚರ್ಚೆ, ವಿವಾದಕ್ಕೆ ಕಾರಣವಾಗಿದೆ.
ಟ್ರಂಪ್ ಅವರ ಪತ್ನಿ ಮೆಲಾನಿಯಾ ಅವರ ತಂದೆ ಮತ್ತು ತಾಯಿ ಅಮೆರಿಕದ ಗ್ರೀನ್ ಕಾರ್ಡ್ ಹೊಂದಿದವರಾಗಿದ್ದಾರೆ. ಗ್ರೀನ್ ಕಾರ್ಡ್ ಹೊಂದಿರುವವರು ಕನಿಷ್ಠ ಐದು ವರ್ಷದ ಬಳಿಕವೇ ಅಮೆರಿಕ ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಅರ್ಹತೆ ಪಡೆಯತ್ತಾರೆ. ಅರ್ಜಿ ಸಲ್ಲಿಸಿದ ಎರಡು ವರ್ಷಗಳ ತರುವಾಯ ಪೌರತ್ವ ಸಿಗುತ್ತದೆ. ಆದರೆ ಇವರಿಗೆ ಯಾವಾಗ ಗ್ರೀನ್ ಕಾರ್ಡ್ ಸಿಕ್ಕಿತೆಂಬ ಮಾಹಿತಿ ಯಾರಿಗೂ ಇಲ್ಲ.
ಹಾಗೆ ನೋಡಿದರೆ ಮೆಲಾನಿಯಾ ಕೂಡ ಮಾಡೆಲ್ ಆಗಿ “ಅಸಾಧಾರಣ ಪ್ರತಿಭೆಯ’ ವ್ಯಕ್ತಿಯಾಗಿ 2001ರಲ್ಲಿ ಐನ್‌ಸ್ಟಿನ್ ವೀಸಾ ಮೂಲಕ ಅಮೆರಿಕಕ್ಕೆ ಬಂದವರಾಗಿದ್ದು 2006ರಲ್ಲಿ ಅಮೆರಿಕ ಪೌರತ್ವ ಪಡೆದವರಾಗಿದ್ದಾರೆ.
ಮೆಲಾನಿಯಾ ಟ್ರಂಪ್ ಅವರ ತಂದೆ ವಿಕ್ಟರ್ ಮತ್ತು ತಾಯಿ ಅಮಾಲಿಜಾ ನಾವ್ಸ್ ಅವರಿಗೆ ನ್ಯೂಯಾರ್ಕ್ ನಗರದಲ್ಲಿರುವ ಫೆಡರಲ್ ಇಮಿಗ್ರೇಶನ್ ಕೋರ್ಟಿನಲ್ಲಿ ನಿನ್ನೆ ಗುರುವಾರ ಅಮೆರಿಕ ಪೌರತ್ವ ಪ್ರಮಾಣ ವಚನ ಬೋಧಿಸಲಾಯಿತು.