Advertisement

ಮಂಗಳೂರು : ಜೂ. 25ರಂದು ಮೆಗಾ ಲೋಕ ಅದಾಲತ್‌

12:29 AM May 29, 2022 | Team Udayavani |

ಮಂಗಳೂರು : ಜಿಲ್ಲೆಯ ನಾಗರಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತತ್‌ಕ್ಷಣ ಪರಿಹಾರ ಪಡೆದುಕೊಳ್ಳಲು ಜೂನ್‌ 25ರಂದು ರಾಷ್ಟ್ರೀಯ ಲೋಕ ಅದಾಲತ್‌ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರವೀಂದ್ರ ಎಂ. ಜೋಶಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಅದಾಲತ್‌ನಲ್ಲಿ ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಪರಸ್ಪರ ಇಬ್ಬರಿಗೂ ಒಪ್ಪಿಗೆಯಾಗುವಂತಹ ಪ್ರಕರಣಗಳು ತೀರ್ಮಾನ ವಾಗುವುದರಿಂದ ಬಾಂಧವ್ಯಗಳು ಉಳಿದು ವಿವಾದವು ಬಗೆಹರಿಯುತ್ತದೆ. ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಪ್ರಕರಣಗಳನ್ನು ಸಹ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ, ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಮರು ಪಾವತಿಸಲಾಗುವುದು, ಮುಖ್ಯವಾಗಿ ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದಾಗಿದೆ, ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ ಎಂದು ವಿವರಿಸಿದರು.

52,238 ಪ್ರಕರಣ ಬಾಕಿ
ಜಿಲ್ಲೆಯಲ್ಲಿ ಒಟ್ಟಾರೆ 52,238 ಪ್ರಕರಣಗಳು ಬಾಕಿ ಉಳಿದಿವೆ. ಅವುಗಳಲ್ಲಿ 4,040 ಪ್ರಕರಣಗಳನ್ನು ರಾಜಿಯಾಗಬಹುದಾದ ಪ್ರಕರಣ ಗಳು ಎಂದು ಇದುವರೆಗೂ ಗುರುತಿಸಲಾಗಿದೆ, ಜೂನ್‌ 24ರ ವರೆಗೆ ಇನ್ನಷ್ಟು ಪ್ರಕರಣಗಳು ಸೇರ್ಪಡೆಯಾಗಲಿವೆ ಎಂದರು.

ರಾಜಿಯಾಗದ ಕ್ರಿಮಿನಲ್‌ ಪ್ರಕರಣಗಳು, ಬ್ಯಾಂಕ್‌ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್‌ ಸ್ಥಾಪಿಸಲು ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ಕರ್ನಾಟಕ ರಿಯಲ್‌ ಎಸ್ಟೇಟ್‌ ಪ್ರಾಧಿಕಾರಕ್ಕೆ ಸಂಬಂಧಿಸಿದ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧಿಕರಣದ ಪ್ರಕರಣಗಳು, ಖಾಯಂ ಜನತಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು, ಚೆಕ್‌ ಅಮಾನ್ಯ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್‌ ಹಾಗೂ ಶುಲ್ಕಗಳು, ಭೂ ಸ್ವಾಧೀನ ಪ್ರಕರಣಗಳು, ವೇತನ ಹಾಗೂ ಭತ್ತೆಗಳಿಗೆ ಸಂಬಂಧಿಸಿದ ಸೇವಾ ಹಾಗೂ ಪಿಂಚಣಿ ಪ್ರಕರಣಗಳು, ಸಾರ್ವಜನಿಕ ಉಪಯುಕ್ತತೆ ಸೇವೆಗಳ ಸಂಬಂಧಿಸಿದ ಪ್ರಕರಣಗಳು, ರಾಜಿಯಾಗಬಲ್ಲ ಸಿವಿಲ್‌ ಹಾಗೂ ಇತರ ಪ್ರಕರಣಗಳು, ವಿಚ್ಛೇದನ ಹೊರತುಪಡಿಸಿದಂತೆ ಕೌಟುಂಬಿಕ ಹಾಗೂ ವೈವಾಹಿಕ ನ್ಯಾಯಾಲಯದ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದರು.

ಪೋಕ್ಸೋ-1ರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಪೃಥ್ವಿರಾಜ್‌ ವರ್ಣೇಕರ್‌, ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಮಧುಕರ್‌ ಭಾಗವತ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next