Advertisement

ಆಸ್ಟ್ರೇಲಿಯ ಆರನೇ ವಿಜಯ; ಲ್ಯಾನಿಂಗ್‌ 15ನೇ ಶತಕ ,ದಕ್ಷಿಣ ಆಫ್ರಿಕಾಕ್ಕೆ ಮೊದಲ ಸೋಲು

10:30 PM Mar 22, 2022 | Team Udayavani |

ವೆಲ್ಲಿಂಗ್ಟನ್‌: ಆಸ್ಟ್ರೇಲಿಯದ ಗೆಲುವಿನ ಓಟ ಸತತ 6ನೇ ಪಂದ್ಯಕ್ಕೆ ವಿಸ್ತರಿಸಲ್ಪಟ್ಟಿದೆ. ಎರಡು ಅಜೇಯ ತಂಡಗಳ ನಡುವಿನ ಮಂಗಳವಾರದ ಮೇಲಾಟದಲ್ಲಿ ಕಾಂಗರೂ ಪಡೆ ದಕ್ಷಿಣ ಆಫ್ರಿಕಾವನ್ನು 5 ವಿಕೆಟ್‌ಗಳಿಂದ ಮಣಿಸಿತು. ಆಸ್ಟ್ರೇಲಿಯವನ್ನು ಮಣಿಸಿದವರಿಗೆ ವಿಶ್ವಕಪ್‌ ಎಂಬುದು ಸದ್ಯದ ಸ್ಥಿತಿ!

Advertisement

ಇದೊ ದೊಡ್ಡ ಮೊತ್ತದ ಮೇಲಾಟವಾಗಿತ್ತು. ಬ್ಯಾಟಿಂಗಿಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 5 ವಿಕೆಟಿಗೆ 271 ರನ್‌ ಪೇರಿಸಿತು. ಆಸ್ಟ್ರೇಲಿಯ 45.2 ಓವರ್‌ಗಳಲ್ಲಿ ಐದೇ ವಿಕೆಟಿಗೆ 272 ರನ್‌ ಬಾರಿಸಿತು.

ಲ್ಯಾನಿಂಗ್‌ ಅಜೇಯ 135
ನಾಯಕಿ ಮೆಗ್‌ ಲ್ಯಾನಿಂಗ್‌ ಅವರ ಅಜೇಯ ಶತಕ ಆಸೀಸ್‌ ಜಯಭೇರಿಯಲ್ಲಿ ಪ್ರಮುಖ ಪಾತ್ರ ವಹಿಸಿತು. ಲ್ಯಾನಿಂಗ್‌ ಕೊಡುಗೆ 130 ಎಸೆತಗಳಿಂದ 135 ರನ್‌. ಅರ್ಧದಷ್ಟು ಮೊತ್ತವನ್ನು ಅವರೊಬ್ಬರೇ ಬಾರಿಸಿದರು. ಒಂದು ಸಿಕ್ಸರ್‌ ಹಾಗೂ 15 ಬೌಂಡರಿಗಳನ್ನು ಇದು ಒಳಗೊಂಡಿತ್ತು. ಇದು ಅವರ 15ನೇ ಏಕದಿನ ಶತಕ.

ಉಳಿದಂತೆ ಆಸ್ಟ್ರೇಲಿಯದ ಬ್ಯಾಟರ್‌ಗಳದ್ದು ಸಾಮಾನ್ಯ ಗಳಿಕೆ. 32 ರನ್‌ ಮಾಡಿದ ಟಹ್ಲಿಯಾ ಮೆಗ್ರಾತ್‌ ಅವರದೇ ಅನಂತರದ ಹೆಚ್ಚಿನ ಸ್ಕೋರ್‌ ಎಂಬುದನ್ನು ಗಮನಿಸಿದಾಗ ಲ್ಯಾನಿಂಗ್‌ ಅವರ ಬ್ಯಾಟಿಂಗ್‌ ಸಾಮರ್ಥ್ಯದ ನಿಜವಾದ ಮೌಲ್ಯ ತಿಳಿಯುತ್ತದೆ.

ಅಲಿಸ್ಸಾ ಹೀಲಿ (5) 3ನೇ ಓವರ್‌ನಲ್ಲೇ ಪೆವಿಲಿಯನ್‌ ಸೇರಿಕೊಂಡ ಬಳಿಕ ಕ್ರೀಸಿಗೆ ಆಗಮಿಸಿದ ಮೆಗ್‌ ಲ್ಯಾನಿಂಗ್‌, ದಕ್ಷಿಣ ಆಫ್ರಿಕಾ ಬೌಲಿಂಗ್‌ ದಾಳಿಯನ್ನು ಆಮೋಘ ರೀತಿಯಲ್ಲಿ ನಿಭಾಯಿಸಿ ನಿಂತರು. ಉಳಿದವರ ಅಮೋಘ ಬೆಂಬಲ ಪಡೆದು ಗೆಲುವಿನ ಇನ್ನಿಂಗ್ಸ್‌ ಕಟ್ಟಿದರು. ಭಾರತದೆದುರಿನ ಹಿಂದಿನ ಪಂದ್ಯದಲ್ಲಿ ಲ್ಯಾನಿಂಗ್‌ 97 ರನ್‌ ಬಾರಿಸಿದ್ದರು.

Advertisement

ಇದನ್ನೂ ಓದಿ:ಆರ್‌ಎಸ್‌ಎಸ್‌ ಕಾರ್ಯಕರ್ತನ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಕಳಪೆ ಕ್ಷೇತ್ರರಕ್ಷಣೆ
ದಕ್ಷಿಣ ಆಫ್ರಿಕಾದ ದೊಡ್ಡ ಮೊತ್ತಕ್ಕೆ ಕಾರಣರಾದವರು ಓಪನರ್‌ ಲಾರಾ ವೋಲ್ವಾರ್ಟ್‌. 42ನೇ ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿದ ವೋಲ್ಟಾರ್ಟ್‌ 134 ಎಸೆತಗಳಿಂದ 90 ರನ್‌ ಬಾರಿಸಿದರು (6 ಬೌಂಡರಿ). ನಾಯಕಿ ಸುನೆ ಲುಸ್‌ 52 ರನ್‌ ಹೊಡೆದರು. ಆದರೆ ಹರಿಣಗಳ ಬೌಲಿಂಗ್‌ ಕೈಕೊಟ್ಟಿತು. ಇದಕ್ಕೂ ಮಿಗಿಲಾಗಿ ಕಳಪೆ ಫೀಲ್ಡಿಂಗಿಗೆ ಆದು ಬೆಲೆ ತೆತ್ತಿತು. ಕನಿಷ್ಠ 7 ಕ್ಯಾಚ್‌ಗಳನ್ನು ಆಫ್ರಿಕನ್‌ ಫೀಲ್ಡರ್ ನೆಲಕ್ಕೆ ಚೆಲ್ಲಿದ್ದರು!

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ-5 ವಿಕೆಟಿಗೆ 271 (ವೋಲ್ವಾರ್ಟ್‌ 90, ಲುಸ್‌ 52, ಲೀ 36, ಸದರ್‌ಲ್ಯಾಂಡ್‌ 26ಕ್ಕೆ 1). ಆಸ್ಟ್ರೇಲಿಯ-45.2 ಓವರ್‌ಗಳಲ್ಲಿ 5 ವಿಕೆಟಿಗೆ 272 (ಲ್ಯಾನಿಂಗ್‌ ಔಟಾಗದೆ 135, ಮೆಗ್ರಾತ್‌ 32, ಸದರ್‌ಲ್ಯಾಂಡ್‌ ಔಟಾಗದೆ 22, ಶಬಿ°ಮ್‌ 33ಕ್ಕೆ 2, ಟ್ರಯಾನ್‌ 44ಕ್ಕೆ 2).

ಪಂದ್ಯಶ್ರೇಷ್ಠ: ಮೆಗ್‌ ಲ್ಯಾನಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next