Advertisement

ಆರು ತಿಂಗಳವರೆಗೆ ಲಿಂಗಾಯತ ಪ್ರತ್ಯೇಕ ಧರ್ಮ ವಿರಾಮ?

06:00 AM Jan 07, 2018 | Team Udayavani |

ಬೆಂಗಳೂರು: ವೀರಶೈವ -ಲಿಂಗಾಯತ ಪ್ರತ್ಯೇಕ ಧರ್ಮ ಕುರಿತ ತಜ್ಞರ ಸಮಿತಿ ವರದಿ ನೀಡಲು ಆರು ತಿಂಗಳು ಕಾಲಾವಕಾಶ ಕೇಳಿದ್ದು ಈ ಬೆಳವಣಿಗೆಯಿಂದ ಸಧ್ಯಕ್ಕೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಗೆ ವಿಧಾನಸಭೆ ಚುನಾವಣೆ ಮುಗಿಯುವರೆಗೂ ಬ್ರೇಕ್‌ ಬಿದ್ದಂತಾಗಿದೆ.

Advertisement

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರ ನೇತೃತ್ವದ ಸಮಿತಿ ಶನಿವಾರ ಮೊದಲ ಸಭೆ ನಡೆಸಿದ್ದು, ಸರ್ಕಾರ ನೀಡಿದ ಒಂದು ತಿಂಗಳ ಅವಧಿಯಲ್ಲಿ ಒಂದು ಸಮುದಾಯಕ್ಕೆ ಧರ್ಮ ಅಥವಾ ಅಲ್ಪ ಸಂಖ್ಯಾತ ಮಾನತ್ಯೆ ನೀಡುವುದು ಕ‌ಷ್ಟ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಪ್ರತ್ಯೇಕ ಲಿಂಗಾಯತ ಹೋರಾಟದ ಮೂಲಕ ರಾಜಕೀಯ ಲಾಭದ ಲೆಕ್ಕಾಚಾರ ಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಯತ್ನಕ್ಕೆ ತಣ್ಣೀರೆರಚಿದಂತಾಗಿದ್ದು, ಸಮಿತಿಯ ವರದಿ ಬರುವವರೆಗೂ ಯಾವುದೇ ತೀರ್ಮಾನ ಕೈಗೊಳ್ಳದ ಪರಿಸ್ಥಿತಿ ನಿರ್ಮಾಣವಾದಂತಾಗಿದೆ.

ಧರ್ಮದ ಮಾನ್ಯತೆ ನೀಡುವ ವಿಚಾರ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಎಲ್ಲ ಹಂತಗಳಲ್ಲಿಯೂ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ  ಹೀàಗಾಗಿ ಆರು ತಿಂಗಳು ಕಾಲಾವಕಾಶ ಕೇಳಲು ಸಮಿತಿ ಮೊದಲ ಸಭೆಯಲ್ಲಿ ನಿರ್ಧರಿಸಿ, ಮುಂದಿನ ಸಭೆಯನ್ನು ಜನವರಿ 27 ಕ್ಕೆ ಸೇರಲು ತೀರ್ಮಾನಿಸಿದೆ.  

ಸರ್ಕಾರ ನೇಮಿಸಿರುವ ಸಮಿತಿಗೆ ಈಗಾಗಲೇ 36 ಅರ್ಜಿಗಳು ಬಂದಿವೆ. ಅಲ್ಲದೇ ಕೆಲವರು ಪ್ರತ್ಯೇಕವಾಗಿ ದಾಖಲೆಗಳನ್ನು ನೀಡಿದ್ದಾರೆ. ಅಲ್ಲದೇ ಇನ್ನೂ ಯಾರಾದರೂ ಅಹವಾಲು ಅಥವಾ ಆಕ್ಷೇಪಣೆ ಸಲ್ಲಿಸಲು ಜನವರಿ 25ರ ವರೆಗೆ ಸಮಿತಿ ಕಾಲಾವಕಾಶ ನೀಡಿದೆ.  

Advertisement

ವೀರಶೈವರ ದಾಖಲೆ ಕೊರತೆ: ಸಮಿತಿಗೆ ಇದುವರೆಗೂ 36 ಮನವಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 10 ಮನವಿಗಳು ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂಬ ವಾದಕ್ಕೆ ಮಾನ್ಯತೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಲಿಂಗಾಯತ ಧರ್ಮ ವೇದಿಕೆ ಸೇರಿ ಉಳಿದ ಅರ್ಜಿಗಳೂ ಲಿಂಗಾಯತರು ವೀರಶೈವರಿಗಿಂತ ಭಿನ್ನವೆಂಬ ಬೇಡಿಕೆ ಇಡಲಾಗಿದೆ. ಗದಗ ತೋಂಟದಾರ್ಯ ಮಠದ ಸ್ವಾಮೀಜಿ ಸೇರಿ ಅನೇಕ ಮಠಾಧೀಶರು ಸಹಿ ಮಾಡಿ ಕಳುಹಿಸಿರುವ ಲಿಂಗಾಯತ ಧರ್ಮ ವೇದಿಕೆ ಅನೇಕ ದಾಖಲೆಗಳನ್ನು ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎನ್ನುವುದಕ್ಕೆ ಪೂರಕವಾದ ದಾಖಲೆಗಳನ್ನು ವೀರಶೈವ ಪರ ಮನವಿ ಸಲ್ಲಿಸಿದವರು ನೀಡಿಲ್ಲ ಎನ್ನುವುದು ಮೊದಲ ಸಭೆಯಲ್ಲಿ ಮೇಲ್ನೋಟಕ್ಕೆ ಸಮಿತಿ ಪತ್ತೆ ಹಚ್ಚಿದೆ.

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ನ್ಯಾ.ನಾಗಮೋಹನ ದಾಸ್‌, ಈಗಾಗಲೇ 36 ಅಹವಾಲುಗಳು ಬಂದಿವೆ.ವ್ಯಕ್ತಿಗತ, ಸಂಘ ಸಂಸ್ಥೆಗಳು, ಮಠಾಧೀಶರೂ ಮನವಿ ಸಲ್ಲಿದ್ದಾರೆ. ಎಲ್ಲರ ಮನವಿಗೂ ಪ್ರಾಮುಖ್ಯತೆ ನೀಡಲಾಗುವುದು. ಯಾವುದನ್ನೂ ಕಡೆಗಣಿಸುವುದಿಲ್ಲ. ನಮ್ಮ ಕೆಲಸವನ್ನು ಕಾನೂನಾತ್ಮಕವಾಗಿ
ಮಾಡುತ್ತೇವೆ ಎಂದು ಹೇಳಿದರು.

ಸಭೆ ನಡೆಸದಂತೆ ಮನವಿ
ಸರ್ಕಾರ ನೇಮಿಸಿರುವ ತಜ್ಞರ ಸುತಿಯಲ್ಲಿ ಐದು ಜನ ಸದಸ್ಯರು ಪೂರ್ವಾಗ್ರಹ ಪೀಡಿತರಾಗಿದ್ದಾರೆ ಅವರು ಸಭೆ ನಡೆಸಲು ಅರ್ಹತೆ ಇಲ್ಲ. ತಜ್ಞರ ಸಮಿತಿ ಸದಸ್ಯರಾದ ಸಿ.ಎಸ್‌. ದ್ವಾರಕಾನಾಥ, ಎಸ್‌.ಜಿ. ಸಿದ್ದರಾಮಯ್ಯ, ಪೊ›. ಮುಜಾಫ‌ರ್‌ ಅಸ್ಸಾದಿ, ರಾಮಕೃಷ್ಣ ಮರಾಠೆ, ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ ಹೈಕೋರ್ಟ್‌ ತುರ್ತು ನೋಟಿಸ್‌ ನೀಡಿದೆ. ಹೀಗಾಗಿ ಅವರು ಸಭೆಯಲ್ಲಿ ಪಾಲ್ಗೊಳ್ಳಬಾರದು ಎಂದು ವಾದಿ ಶಶಿಧರ್‌ ಶಾನಭೋಗ್‌ ಅಲ್ಪ ಸಂಖ್ಯಾತ ಆಯೋಗಕ್ಕೆ ಮನವಿ ಸಲ್ಲಿಸಿದರು.  ಅವರ ಪರವಾಗಿ ಮಾತನಾಡಿದ ವಕೀಲ ಗುರುಮಠ, ಸುತಿಯಲ್ಲಿರುವ ಐವರು ಪೂರ್ವಾಗ್ರಹ ಪೀಡಿತರಾಗಿ ಈಗಾಗಲೇ ಲಿಂಗಾಯತರಿಗೆ ಅಲ್ಪ ಸಂಖ್ಯಾತ ಮಾನ್ಯತೆ ನೀಡಬೇಕೆಂದು ಹೇಳಿದ್ದಾರೆ. ಹೀಗಾಗಿ ಈ ಸಭೆ ನಡೆಸಲು ನೈತಿಕ ಹಕ್ಕಿಲ್ಲ ಎಂದು ಹೇಳಿದರು.

ಸಮಿತಿ ಮೇಲೆ ಬಹು ದೊಡ್ಡ ಜವಾಬ್ದಾರಿಯಿದೆ. ಸಮಿತಿ ವರದಿ ನೀಡಲು ಅಲ್ಪಸಂಖ್ಯಾತ ಆಯೋಗ ಆರು ತಿಂಗಳು ಸಮಯ ನೀಡಬೇಕು. ಆಸಕ್ತಿ ಇರುವವರು ಜ.25 ರೊಳಗೆ ತಮ್ಮ ಅಹವಾಲು ಸಲ್ಲಿಸಬಹುದು. ಜತೆಗೆ ಮಹಿಳಾ ಸದಸ್ಯರನ್ನು ನೇಮಿಸುವಂತೆ ಅಲ್ಪಸಂಖ್ಯಾತ ಆಯೋಗಕ್ಕೆ ಮನವಿ ಮಾಡಿದ್ದೇವೆ.
– ನ್ಯಾ.ನಾಗಮೋಹನ ದಾಸ್‌,
ತಜ್ಞರ ಸಮಿತಿ ಅಧ್ಯಕ್ಷ

ತಜ್ಞರ ಸಮಿತಿ 6 ತಿಂಗಳು ಸಮಯ ಕೇಳಿರುವುದರಿಂದ ತೊಂದರೆಯಿಲ್ಲ.ಅದು ವರದಿ ಕೊಡುವವರೆಗೂ ಹೋರಾಟ ನಡೆಯುತ್ತದೆ. ವರದಿ ವ್ಯತಿರಿಕ್ತವಾದರೆ, ಕಾನೂನು ಹೋರಾಟ ನಡೆಸುತ್ತೇವೆ.
– ಬಸವರಾಜ ಹೊರಟ್ಟಿ,
ಲಿಂಗಾಯತ ಹೋರಾಟ ವೇದಿಕೆ ಅಧ್ಯಕ್ಷ

ತಜ್ಞರ ಸಮಿತಿ ಒಂದೇ ತಿಂಗಳಲ್ಲಿ ವರದಿ ಕೊಟ್ಟರೂ, ಆರು ತಿಂಗಳು ಸಮಯ ತೆಗೆದುಕೊಂಡರೂ ನಮಗೇನೂ ವ್ಯತ್ಯಾಸ ಆಗುವುದಿಲ್ಲ. ನಾವು ಸೇಫಾಗಿದ್ದೇವೆ. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ.
– ಶಾಮನೂರು ಶಿವಶಂಕರಪ್ಪ,
ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ

ಸಮಿತಿ ನಾಲ್ಕು ಭಾಗ 
ವೀರಶೈವ ಲಿಂಗಾಯತರ ನಡುವಿನ ವ್ಯತ್ಯಾಸ ತಿಳಿಯಲು ಸಮಿತಿ ಸದಸ್ಯರನ್ನು ವಿವಿಧ ಭಾಗಗಳಲ್ಲಿ ಅಧ್ಯಯನ ನಡೆಸಲು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ.

ಪ್ರೊ. ಎಸ್‌.ಜಿ. ಸಿದ್ದರಾಮಯ್ಯ
ವೈದಿಕ ಫಿಲಾಸಫಿ ಹಿನ್ನೆಲೆ ಕುರಿತು ಅಧ್ಯಯನ

ಸಿ.ಎಸ್‌. ದ್ವಾರಕನಾಥ
ಅಲ್ಪ ಸಂಖ್ಯಾತ ಮಾನ್ಯತೆಗೆ ಅಗತ್ಯ ದಾಖಲೆಗಳ ಅಧ್ಯಯನ.

ಪುರುಷೋತ್ತಮ ಬಿಳಿಮಲೆ
ಲಿಂಗಾಯತ ಧರ್ಮ ಚಳವಳಿಯ ಇತಿಹಾಸ

ರಾಮಕೃಷ್ಣ ಮರಾಠೆ
ವಚನ ಚಳವಳಿಯಲ್ಲಿ ಪ್ರತ್ಯೇಕ ಧರ್ಮ ಹಾಗೂ ವೀರಶೈವ ಮತ್ತು ಲಿಂಗಾಯತರ ನಡುವಿನ ವ್ಯತ್ಯಾಸಗಳ ಕುರಿತ ಮಾಹಿತಿ ಸಂಗ್ರಹ

ಡಾ. ಸರಜೂ ಕಾಟ್ಕರ್‌
ವೀರಶೈವ ಪರಂಪರೆ ಕುರಿತ ದಾಖಲೆಗಳ ಅಧ್ಯಯನ

Advertisement

Udayavani is now on Telegram. Click here to join our channel and stay updated with the latest news.

Next