ಚನ್ನಮ್ಮ ಕಿತ್ತೂರು: ರಾಜ್ಯ ಸರ್ಕಾರ ಕಿತ್ತೂರು ಚನ್ನಮ್ಮಗೆ ಸೂಕ್ತ ಗೌರವ ನೀಡಬೇಕಾದರೆ ಚನ್ನಮ್ಮ ಜಯಂತಿಯನ್ನು ಕಿತ್ತೂರಿನಲ್ಲಿ ವಿಜಯೋತ್ಸವನ್ನಾಗಿ ಆಚರಣೆ ಮಾಡುವ ಮೂಲಕ ಸೂಕ್ತ ಗೌರವ ನೀಡಬೇಕು ಎಂದು ಶಾಸಕ ಮಹಾಂತೇಶ ದೊಡಗೌಡರ ಸರ್ಕಾರಕ್ಕೆ ಆಗ್ರಹಿಸಿದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸಭೆ ಮತ್ತು ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿಗೆ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಚನ್ನಮ್ಮ ಜಯಂತಿಯನ್ನು ಬೆಂಗಳೂರಿನಲ್ಲಿ ಆಚರಣೆ ಮಾಡಿತ್ತು. ಆದರೆ ಈ ಜಯಂತಿಯನ್ನು ವಿಜಯೋತ್ಸವವಾಗಿ ಕಿತ್ತೂರಿನಲ್ಲಿ ಆಚರಣೆ ಮಾಡಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಮಾಡಲಾಗುವುದು. ಕಿತ್ತೂರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.ಪ್ರಾಧಿಕಾರದ ಸಭೆ ಕರೆಯಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು ಎಂದರು.
ಕಿತ್ತೂರು ಪಟ್ಟಣವನ್ನು ಉತ್ತಮ ಪ್ರವಾಸಿ ತಾಣವಾಗಿಸಲು ಪಟ್ಟಣದ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಮಾಸ್ಟರ ಪ್ಲಾನ್ ಮಾಡಲಾಗುವುದು. ಚನ್ನಮ್ಮಾಜಿ ಇತಿಹಾಸ ಸಾರಲು ರಾಕ್ ಗಾರ್ಡನ್ ನಿರ್ಮಾಣ, ಕೋಟೆಯ ಸುತ್ತಲು ಇರುವ ಕಂದಕವನ್ನು ಪ್ರವಾಸಿಗರನ್ನು ಆಕರ್ಷಿಸಲು ಅಭಿವೃದ್ಧಿ ಪಡಿಸಲಾಗುವುದು. ಈ ಬಾರಿ ನಡೆಯಲಿರುವ ಉತ್ಸವವನ್ನು ಅದ್ಧೂರಿಯಿಂದ ಆಚರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮಾತನಾಡಿ, ಪಟ್ಟಣದ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಳದ ಮಹಾದ್ವಾರದ ಬಳಿ ಇರುವ ಅಮಟೂರು ಬಾಳಪ್ಪ ಹಾಗೂ ಸಂಗೊಳ್ಳಿ ರಾಯಣ್ಣನ ಪ್ರತಿಮೆಗಳನ್ನು ಎತ್ತರಿಸಿ ಶೀಘ್ರದಲ್ಲಿ ಉದ್ಘಾಟಿಸಲು ಕ್ರಮ ಕೈಗೊಳ್ಳಲಾಗುವುದು. ಐತಿಹಾಸಿಕ ಕೇಂದ್ರವಾದ ಕಿತ್ತೂರನ್ನು ಅಭಿವೃದ್ಧಿ ಪಡೆಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ನಮ್ಮ ಕನಸಿನ ಕಿತ್ತೂರನ್ನು ಸಾಕಾರಗೊಳಿಸುವಲ್ಲಿ ಶಾಸಕರು ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಕ್ ಗಾರ್ಡನ ನಿರ್ಮಾಣಕ್ಕೆ ಮಠದ ಒಡೆತನದಲ್ಲಿರುವ ಗಡಾದ ಮರಡಿಯನ್ನು ಸರ್ಕಾರಕ್ಕೆ ನೀಡಲು ಸಿದ್ಧ ಎಂದರು. ತಾಪಂ ಅಧ್ಯಕ್ಷೆ ಶೈಲಾ ಸಿದ್ರಾಮನಿ, ಕಿತ್ತೂರು ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ, ಬಸನಗೌಡ ಸಿದ್ರಾಮನಿ, ಮಹೇಶ ಚನ್ನಂಗಿ, ಸಂದೀಪ ದೇಶಪಾಂಡೆ, ಅಪ್ಪಣ್ಣ ಪಾಗಾದ ಇತರರು ಇದ್ದರು.