Advertisement

ನೇವಲ್‌ ಅಧಿಕಾರಿಯೀಗ ಜೋಕರ್‌ !

07:37 PM Jun 20, 2020 | Sriram |

ಅಸಹಾಯಕರಿಗೆ ತಮ್ಮ ಕೈಲಾದ ಸೇವೆ ಮಾಡಬೇಕೆಂಬುದು ಹಲವರ ಕನಸು. ಇದೇ ಕಾರಣಕ್ಕೆ ಅನೇಕ ಎನ್‌ಜಿಒಗಳು, ಸಂಘಸಂಸ್ಥೆಗಳೂ ಹುಟ್ಟಿಕೊಂಡಿವೆ. ಆದರೆ ಇಲ್ಲೊಬ್ಬರು ನೇವಿಯಲ್ಲಿದ್ದ ಉನ್ನತ ಹುದ್ದೆಯನ್ನೇ ತೊರೆದು ಕ್ಯಾನ್ಸರ್‌ ಪೀಡಿತ ಮಕ್ಕಳನ್ನು ನಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರೇ ಪ್ರವೀಣ್‌ ತುಲ್ಪುಲೆ.

Advertisement

ಅದೊಂದು ದಿನ ಬೆಳಗ್ಗೆ ಎದ್ದು ಪೇಪರ್‌ ಓದುವಾಗ ತನ್ನೊಡನೆ ಬಾಲಕನೋರ್ವ ಇರುವ ಚಿತ್ರ ಪ್ರಕಟಗೊಂಡಿರುವುದನ್ನು ನೋಡಿದ ಪ್ರವೀಣ್‌ ಅವರಿಗೆ ಎಲ್ಲಿಲ್ಲದ ಸಂತೋಷ. ಆದರೆ ಸುದ್ದಿಯನ್ನು ಆಳವಾಗಿ ಓದಿದಾಗ ತಿಳಿದಿದ್ದು ಆ ಬಾಲಕ ಇನ್ನಿಲ್ಲ ಎಂಬುದು. ಒಮ್ಮೆ ಪ್ರವೀಣ್‌ ಸ್ನೇಹಿತರೋರ್ವರು ಮುಂಬಯಿಯ ಆಸ್ಪತ್ರೆಯೊಂದರಲ್ಲಿರುವ ಕ್ಯಾನ್ಸರ್‌ ಪೀಡಿತ ಮಕ್ಕಳನ್ನು ರಂಜಿಸಲು ಮ್ಯಾಜಿಕ್‌ ಶೋ ಒಂದನ್ನು ನಡೆಸಿಕೊಡುವಂತೆ ವಿನಂತಿಸಿದ್ದರು. ಆ ವೇಳೆಗೆ ಬಾಲಕನೋರ್ವ ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೂ ಪ್ರವೀಣ್‌ರ ಬೆನ್ನು ಬಿಟ್ಟಿರಲಿಲ್ಲ. ಅದೇ ಬಾಲಕ ಇನ್ನಿಲ್ಲ ಎಂಬ ಸುದ್ದಿಯನ್ನು ಓದುವುದು ತನ್ನ ದುರಾದೃಷ್ಟ ಎಂದುಕೊಂಡರು ಪ್ರವೀಣ್‌. ಜೋಕರ್‌ ಓರ್ವ ಜಾದು ಮಾಡುವುದನ್ನು ನೋಡಬೇಕೆಂಬುದೇ ಆ ಬಾಲಕನ ಕೊನೆಯ ಇಚ್ಛೆಯಾಗಿತ್ತು ಎಂಬ ಅಂಶವನ್ನು ಪತ್ರಿಕೆಯಲ್ಲಿ ಓದಿದ್ದೇ ತಡ ಪ್ರವೀಣ್‌ರ ಕಣ್ಣುಗಳು ತೇವವಾದವು.

ಅನಾರೋಗ್ಯ ಪೀಡಿತ ಮಕ್ಕಳನ್ನು ನಗಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ತಾನು ಮಾಡಬೇಕು ಎಂದು ಪ್ರವೀಣ್‌ ಆ ಕ್ಷಣದಲ್ಲೇ ನಿರ್ಧರಿಸಿಬಿಟ್ಟರು. ಅಲ್ಲಿಂದ ಇವರ ಜೀವನವೇ ಬದಲಾಯಿತು. ಆಸ್ಪತ್ರೆಗಳು, ಓಲ್ಡ್‌ ಏಜ್‌ ಹೋಮ್‌ಗಳು, ಶಾಲೆಗಳಲ್ಲಿ ಜೋಕರ್‌ ವೇಷ ದರಿಸಿ ತಮ್ಮ ಜಾದೂ ಪ್ರದರ್ಶನ ಆರಂಭಿಸಿದರು. ಕೆಲವು ಎನ್‌ಜಿಒಗಳೂ ಇವರ ಕಾರ್ಯಕ್ಕೆ ಸಾಥ್‌ ನೀಡಿದವು. ಸುಮಾರು 10 ಲಕ್ಷ ರೂ.ಗಳಷ್ಟು ಹಣವನ್ನು ಜನರಿಂದ ಸಂಗ್ರಹಿಸಿ ಕ್ಯಾನ್ಸರ್‌ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ನೀಡಿದರು.

ತಮ್ಮ 14ನೇ ವರ್ಷದಲ್ಲೇ ಜಾದೂಗೆ ಆಕರ್ಷಿತರಾಗಿದ್ದ ಪ್ರವಿಣ್‌ ಅದನ್ನು ಕರಗತವೂ ಮಾಡಿಕೊಂಡಿದ್ದರು. ಮುಂದೆ ಇದನ್ನೇ ತನ್ನ ವೃತ್ತಿ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದ ಇವರು ತಮ್ಮ ಸಹೋದರನ ಮಾತಿನಂತೆ ಪದವಿ ಶಿಕ್ಷಣದ ಬಳಿಕ ನೇವಿ ಸೇರಿದರು. ಅತೀ ಶೀಘ್ರದಲ್ಲೇ ಲೆಫ್ಟಿನೆಂಟ್‌ ಕೂಡ ಆದ ಇವರು ರಾಷ್ಟ್ರಪತಿಗಳಿಂದ ಬಂಗಾರದ ಪದಕವನ್ನೂ ಪಡೆದಿದ್ದಾರೆ. ತಮ್ಮ ನಿವೃತ್ತಿಗೆ ಇನ್ನೂ 3 ವರ್ಷಗಳು ಇರುವಾಗಲೇ ಕೆಲಸ ಒರೆದ ಇವರು ಅನಾರೋಗ್ಯ ಪೀಡಿತ ಮಕ್ಕಳನ್ನು ನಗಿಸುವ ಸಂಕಲ್ಪ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next