Advertisement

Mangaluru: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಸುರಕ್ಷೆ ಆದ್ಯತೆಯಾಗಿರಲಿ: ಶುಕ್ಲಾ

12:32 AM Nov 30, 2024 | Team Udayavani |

ಮಂಗಳೂರು: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ರೇಡಿಯೇಶನ್‌ ಉಪಕರಣಗಳನ್ನು ಹೊಂದುವಷ್ಟೇ ಅವುಗಳ ಬಳಕೆ ಮತ್ತು ನಿರ್ವಹಣೆಯೂ ಮುಖ್ಯ. ಹಾಗಾಗಿ ಕ್ಯಾನ್ಸರ್‌ ಚಿಕಿತ್ಸಾ ತಜ್ಞರು ಮತ್ತು ಆಸ್ಪತ್ರೆಗಳು ಸುರಕ್ಷೆಯನ್ನು ಕಾಯ್ದುಕೊಳ್ಳಬೇಕು ಎಂದು ಅಟೋಮಿಕ್‌ ಎನರ್ಜಿ ರೆಗ್ಯುಲೇಟರಿ ಬೋರ್ಡ್‌ (ಎಇಆರ್‌ಬಿ) ಚೇರ್ಮನ್‌ ದಿನೇಶ್‌ ಕುಮಾರ್‌ ಶುಕ್ಲಾ ಹೇಳಿದರು.

Advertisement

ನಗರದ ಡಾ| ಟಿಎಂಎ ಪೈ ಇಂಟರ್‌ನ್ಯಾಷನಲ್‌ ಕನ್‌ವೆನÒನ್‌ ಸೆಂಟರ್‌ನಲ್ಲಿ ಮಂಗಳೂರಿನ ಕೆಎಂಸಿಯ ಎಆರ್‌ಒಐಯು ಮತ್ತು ಎಆರ್‌ಒಐ ಕರ್ನಾಟಕ ವಿಭಾಗದ ವತಿಯಿಂದ ಶುಕ್ರವಾರ ಅಸೋಸಿಯೇಶನ್‌ ಆಫ್ ರೇಡಿಯೇಷನ್‌ ಆಂಕಾಲಜಿಸ್ಟ್‌ ಆಫ್ ಇಂಡಿಯಾದ 44ನೇ ವಾರ್ಷಿಕ ಸಮ್ಮೇಳನ “ಆ್ಯರೋಕಾನ್‌-2024′ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಯಾನ್ಸರ್‌ ಚಿಕಿತ್ಸೆ ವೇಳೆ ಅತ್ಯಾಧುನಿಕ ಉಪಕರಣಗಳ ಬಳಕೆ ಅತಿ ಮಹತ್ವದ್ದಾಗಿದೆ, ಜತೆಗೆ ಇತರ ಹಲವು ವಿಭಾಗಗಳ ಸಹಭಾಗಿತ್ವವೂ ಮುಖ್ಯ, ಈ ವೇಳೆ ಯಾವುದೇ ನೈತಿಕತೆಗೆ ವಿರುದ್ಧವಾದಂತಹ ಅಭ್ಯಾಸಗಳು ಉಂಟಾಗುವಾಗ ಎಚ್ಚರಿಸುವ ಕೆಲಸವನ್ನು ಎಇಆರ್‌ಬಿ ಮಾಡುತ್ತದೆ ಎಂದರು.

ಇಂದು ಕ್ಯಾನ್ಸರ್‌ ಚಿಕಿತ್ಸೆ ಸಾಕಷ್ಟು ಮುಂದುವರಿದಿದೆ. ಎಷ್ಟು ಬೇಗ ಅದನ್ನು ಪತ್ತೆ ಮಾಡಬಹುದೋ ಅಷ್ಟು ಪರಿಣಾಮಕಾರಿಯಾಗಿ ವಾಸಿ ಮಾಡುವ ತಂತ್ರಜ್ಞಾನ ನಮ್ಮಲ್ಲಿದೆ. ಅದಕ್ಕಾಗಿ ತಂತ್ರಜ್ಞಾನ ಬಳಸುವುದಕ್ಕೆ ಬೇಕಾದ ಪರಿಣತಿಯನ್ನೂ, ಸುರಕ್ಷಿತ ವಿಧಾನಗಳನ್ನೂ ಇಂತಹ ವಿಚಾರಗೋಷ್ಠಿಗಳಲ್ಲಿ ವೈದ್ಯರು ಪಡೆದುಕೊಳ್ಳುವಂತಾಗಲಿ ಎಂದರು.

ಕ್ಯಾನ್ಸರ್‌ ಚಿಕಿತ್ಸೆಗೆ ಎಐ ಬಲ: ಆರ್ತಿ ಸರೀನ್‌
ಸಶಸ್ತ್ರಬಲದ ವೈದ್ಯಕೀಯ ಸೇವಾ ವಿಭಾಗದ ಮಹಾನಿರ್ದೇಶಕಿ ವೈಸ್‌ ಆಡ್ಮಿರಲ್‌ ಡಾ| ಆರ್ತಿ ಸರೀನ್‌ ಮಾತನಾಡಿ, ಕ್ಯಾನ್ಸರ್‌ ಚಿಕಿತ್ಸೆ ಹಾಗೂ ಸಂಶೋಧನೆಯಿಂದ ರೋಗ ಪತ್ತೆ ಬೇಗ ಆಗುವುದರಲ್ಲಿ ಕೃತಕ ಬುದ್ಧಿ ಮತ್ತೆಯೂ ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಆ ಮೂಲಕ ಚಿಕಿತ್ಸೆ ಹಾಗೂ ಶುಶ್ರೂಷೆಯಲ್ಲಿ ವೈದ್ಯರು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ರೋಗಿಗಳಿಗೆ ಸಲಹೆ ನೀಡುವ ಹಾಗೂ ಅವರ ಹತ್ತಿರವಾಗುವ ಮಾನವೀಯ ಉಪಕ್ರಮಗಳಲ್ಲಿ ಪರಿಣತಿ ಪಡೆಯಬೇಕು ಎಂದರು.

Advertisement

ಸಂಘಟನಾ ಅಧ್ಯಕ್ಷ ಡಾ| ಎಂ.ಎಸ್‌.ಅತಿಮಾಯನ್‌ ಸ್ವಾಗತಿಸಿದರು. ಎಆರ್‌ಒಐ ನೂತನ ಅಧ್ಯಕ್ಷ ಡಾ|ಎಸ್‌.ಎನ್‌.ಸೇನಾಪತಿ, ಎಆರ್‌ಒಐ ಚೇರ್ಮನ್‌ ಡಾ|ರಾಜೇಶ್‌ ವಶಿಷ್ಠ, ಮಾಹೆ ಸಹ ಕುಲಪತಿ ಡಾ| ಎಚ್‌.ಎಸ್‌.ಬಲ್ಲಾಳ್‌, ಎಆರ್‌ಒಐ ಹಾಲಿ ಅಧ್ಯಕ್ಷ ಡಾ|ಮನೋಜ್‌ ಗುಪ್ತ, ಕಾರ್ಯದರ್ಶಿ ಡಾ| ವಿ.ಶ್ರೀನಿವಾಸನ್‌, ಐಸಿಆರ್‌ಒ ಚೇರ್ಮನ್‌ ಡಾ|ರಾಕೇಶ್‌ ಕಪೂರ್‌, ಕೆಎಂಸಿ ಮಂಗಳೂರಿನ ಡೀನ್‌ ಡಾ| ಬಿ.ಉಣ್ಣಿಕೃಷ್ಣನ್‌ ಉಪಸ್ಥಿತರಿದ್ದರು.

ಮಣಿಪಾಲದಲ್ಲಿ ನೋವು ನಿವಾರಕ ಆಸ್ಪತ್ರೆ
ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್‌ ಮಾತನಾಡಿ, ಕ್ಯಾನ್ಸರ್‌ ಚಿಕಿತ್ಸೆ ಹಾಗೂ ಆರೈಕೆಯಲ್ಲಿ ನೋವು ನಿವಾರಣೆಯೂ ಒಂದು ಅವಿಭಾಜ್ಯ ಅಂಗವಾಗಿದೆ. ಅದನ್ನು ಪರಿಗಣಿಸಿ ಮಣಿಪಾಲದಲ್ಲಿ ಮಾಹೆ ವತಿಯಿಂದ ರೋಗಿಗಳಿಗಾಗಿ ಉಚಿತ 100 ಹಾಸಿಗೆಯ ನೋವು ನಿವಾರಕ ಘಟಕ ಆಸ್ಪತ್ರೆಯನ್ನು ಆರಂಭಿಸಲಾಗುವುದು ಎಂದರು.

2025ರ ಎಪ್ರಿಲ್‌ಗೆ ಈ ಆಸ್ಪತ್ರೆ ಸಿದ್ಧಗೊಳ್ಳಲಿದೆ. ಇಲ್ಲಿ ಕ್ಯಾನ್ಸರ್‌ ರೋಗಿಗಳಿಗೆ ಹಾಗೂ ಇತರ ರೋಗಿಗಳಿಗೂ ನೋವು ನಿವಾರಣೆ ಆರೈಕೆ ನೀಡಲಾಗುವುದು. ಇದು ಉಚಿತವಾಗಿ ಸೇವಾರೂಪದಲ್ಲಿ ರೋಗಿಗಳನ್ನು ನೆರವಾಗಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next