Advertisement

Badge No.15: ಈಕೆ ವಾಯುವ್ಯ ರೈಲ್ವೇ ವಲಯದ ಪ್ರಪ್ರಥಮ ಮಹಿಳಾ ಕೂಲಿ!

09:07 PM Jun 27, 2018 | Karthik A |

ಆಕೆಯ ಹೆಸರು ಮಂಜು ದೇವಿ, ಸದ್ಯ ಆಕೆ ವಾಯುಯ್ಯ ರೈಲ್ವೇ ವ್ಯಾಪ್ತಿಯಡಿಗೆ ಬರುವ ಜೈಪುರ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜುಗಳನ್ನು ಹೊರುವ ‘ಕೂಲಿ’. ಕಳೆದ 5 ವರ್ಷಗಳಿಂದ ಮಂಜುದೇವಿ ಈ ಕೆಲಸವನ್ನು ಮಾಡುತ್ತಾ ಬರುತ್ತಿದ್ದಾರೆ. ಕೇವಲ ಪುರುಷರಿಗೆ ಮಾತ್ರವೇ ಸೀಮಿತವೆಂಬಂತಿದ್ದ ರೈಲ್ವೇ ಕೂಲಿ ಕೆಲಸದಲ್ಲಿ ಹೆಣ್ಣೊಬ್ಬಳು ಆ ಕೆಲಸವನ್ನು ಮಾಡುತ್ತಿರುವುದು ವಿಶೇಷವೇ ಸರಿ. ಇದೀಗ ಈಕೆಯ ಈ ಛಲ ದೇಶದ ಗಮನವನ್ನು ಸೆಳೆದಿದ್ದು ಇವತ್ತು ಮಂಜುದೇವಿ ಮತ್ತು ಆಕೆಯ ಛಲದ ಬದುಕಿನ ಕಥೆ ಹಲವಾರು ಪತ್ರಿಕೆಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದು, ಜೀವನದಲ್ಲಿ ನಿರಾಶೆಯನ್ನನುಭವಿಸಿ ತಮ್ಮ ಬದುಕನ್ನು ದುರಂತಕ್ಕೊಡ್ಡಿಕೊಳ್ಳುತ್ತಿರುವ ಹಲವಾರು ಮಹಿಳೆಯರಿಗೆ ಸ್ಪೂರ್ತಿಯ ಪಾಠವಾಗಿದೆ ಮಂಜು ದೇವಿಯ ಬದುಕು.

Advertisement

ಯಾರೀಕೆ ಮಂಜುದೇವಿ?
ಮನೆಯ ಯಜಮಾನನ ದುಡಿಮೆಯನ್ನೇ ನಂಬಿಕೊಂಡು ಬದುಕುತ್ತಿದ್ದ ಪುಟ್ಟ ಕುಟುಂಬ ಅದಾಗಿತ್ತು. ಗಂಡ, ಹೆಂಡತಿ ಮತ್ತು ಮೂರು ಮಕ್ಕಳಿದ್ದ ಆ ಸಂಸಾರಕ್ಕೆ ಮನೆ ಯಜಮಾನನ ರೈಲ್ವೇ ಕೂಲಿ ದುಡಿಮೆಯೇ ಆಧಾರವಾಗಿತ್ತು. ಆದರೆ ಇದ್ದಕ್ಕಿದ್ದಂತೆಯೇ ಯಜಮಾನ ಹಾಸಿಗೆ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆಗ ಅಕ್ಷರಶಃ ಕಂಗಾಲಾದ ಗೃಹಿಣಿ ಮಂಜುದೇವಿ ಮುಂದೇನು ಎಂಬ ಚಿಂತೆಯಲ್ಲಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿತ್ತು. ಆದರೆ ಯೋಚಿಸುತ್ತಾ ಕೂತರೆ ಮನೆಯಲ್ಲಿ ಒಲೆ ಉರಿಯುವಂತಿರಲಿಲ್ಲ, ಹಾಗಾಗಿ ಮಂಜುದೇವಿ ಒಂದು ದೃಢನಿರ್ಧಾರಕ್ಕೆ ಬಂದಾಗಿತ್ತು. ಮತ್ತು ಆಕೆ ಆ ಕ್ಷಣದಲ್ಲಿ ಕೈಗೊಂಡ ನಿರ್ಧಾರ ಆಕೆಯ ಬದುಕಿನಲ್ಲಿ ಅತೀ ದೊಡ್ಡ ತಿರುವಾಗಿ ಪರಿಣಮಿಸಿತು.

ಪತಿಯ ಬ್ಯಾಡ್ಜ್ ನನಗೇ ಕೊಡಿ ಅಂದಳು!


ಮಂಜುದೇವಿ ಅವರ ಪತಿ ಮಹಾದೇವ್ ಜೈಪುರ ರೈಲ್ವೇ ನಿಲ್ದಾಣದಲ್ಲಿ ಸರಂಜಾಮುಗಳನ್ನು ಹೊರುವ ಕೂಲಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ದಿಢೀರ್ ಅನಾರೋಗ್ಯದಿಂದಾಗಿ ಪತಿ ಹಾಸಿಗೆ ಹಿಡಿಯುವ ಪರಿಸ್ಥಿತಿ ಉದ್ಭವಿಸಿದ ಮೇಲೆ, ಕ್ಷಣಕಾಲ ದಿಕ್ಕು ತೋಚದಂತೆ ಕಂಗಾಲಾಗಿದ್ದ ಮಂಜುದೇವಿ ಬಳಿಕ ತನ್ನ ಮೂವರು ಮಕ್ಕಳನ್ನು ಸಲಹುವ ಜವಾಬ್ದಾರಿ ತನ್ನ ಮೇಲಿರುವ ವಾಸ್ತವವನ್ನು ಅರಿತುಕೊಂಡಳು. ಕಾಯಿಲೆ ಪೀಡಿತ ಪತಿ ಮತ್ತು ಶಾಲೆಗೆ ಹೋಗುತ್ತಿರುವ ಮಕ್ಕಳನ್ನು ಸಾಕಬೇಕೆಂದರೆ ಮಂಜುದೇವಿ ಹೊರಗೆ ಹೋಗಿ ದುಡಿಯುವುದು ಅನಿವಾರ್ಯವಾಗಿತ್ತು. ಆದರೆ, ಇಷ್ಟುವರ್ಷ ಮನೆವಾರ್ತೆಯನ್ನು ಮಾತ್ರವೇ ನೋಡಿಕೊಳ್ಳುತ್ತಿದ್ದ ಈಕೆಗೆ ಹೊರಹೋಗಿ ಯಾವ ಕೆಲಸವನ್ನು ತಾನು ಮಾಡುವುದು ಎಂಬ ಪ್ರಶ್ನೆ ಭೂತಾಕಾರವಾಗಿ ಎದ್ದುನಿಂತಿತು. ತಾನೇನು ಅಕ್ಷರಸ್ಥೆಯೂ ಅಲ್ಲ, ಏನಾದರೂ ವ್ಯವಹಾರ ಮಾಡೋಣವೆಂದರೆ ಸೂಕ್ತ ಬಂಡವಾಳವೂ ಇಲ್ಲ. ಈಗ ಮಂಜುದೇವಿ ಒಂದು ನಿರ್ಧಾರಕ್ಕೆ ಬಂದಳು, ತನ್ನ ಪತಿ ಮಾಡುತ್ತಿದ್ದ ಕೆಲಸವನ್ನೇ ತಾನು ಮುಂದುವರೆಸುವುದು ಎಂದು…!


ಈ ಯೋಚನೆ ಬಂದದ್ದೇ ತಡ ಮಂಜುದೇವಿ ನೇರವಾಗಿ ಸಂಬಂಧಪಟ್ಟ ವಾಯುವ್ಯ ರೈಲ್ವೇ ಅಧಿಕಾರಿಗಳನ್ನು ಭೇಟಿಯಾಗಿ ತನ್ನ ಪತಿಯ ಹೆಸರಿನಲ್ಲಿದ್ದ ಬ್ಯಾಡ್ಜ್ ಲೈಸನ್ಸ್ ಅನ್ನು ತನಗೇ ನೀಡುವಂತೆ ಮನವಿ ಮಾಡುತ್ತಾಳೆ. ಈಕೆಯ ವಿಚಾರವನ್ನು ತಿಳಿದ ರೈಲ್ವೇ ಅದೀಕಾರಿಗಳು ಮಾನವೀಯ ನೆಲೆಯಲ್ಲಿ ಈಕೆಗೆ ಕೂಲಿ ಪರವಾನಿಗೆಯನ್ನು ನೀಡುತ್ತಾರೆ. ಈ ಮೂಲಕ ವಾಯುವ್ಯ ರೈಲ್ವೇ ವಲಯದಲ್ಲಿಯೇ ಮಂಜು ದೇವಿ ಪ್ರಪ್ರಥಮ ಮಹಿಳಾ ಕೂಲಿಯೆಂಬ ದಾಖಲೆಗೆ ಕಾರಣವಾಗುತ್ತಾಳೆ.


ಆದರೆ ಮಂಜುದೇವಿಗೆ ಇದ್ದಿದ್ದು ದಾಖಲೆ ನಿರ್ಮಿಸುವ ಉದ್ದೇಶ ಅಲ್ಲವಲ್ಲಾ! ಆಕೆಯ ಉದ್ದೇಶ ತನ್ನ ಪತಿ ಮತ್ತು ಮಕ್ಕಳನ್ನು ಸಲಹುವುದಾಗಿತ್ತು. ಅದಕ್ಕಾಗಿ ಆಕೆ ಕಷ್ಟಪಟ್ಟು ಈ ಕೆಲಸದ ರೀತಿನೀತಿಗಳನ್ನು ಕಲಿಯುತ್ತಾ ಹೋದಳು, ಈ ವಿಷಯದಲ್ಲಿ ರೈಲ್ವೇ ಅಧಿಕಾರಿಗಳೂ ಸಹ ಆಕೆಗೆ ಸೂಕ್ತ ತರಬೇತಿಯನ್ನೂ ಕೊಡಿಸಿದರು. ಈತನ್ಮಧ್ಯೆ ಅನಾರೋಗ್ಯಪೀಡಿತನಾಗಿದ್ದ ಈಕೆಯ ಪತಿಯ ಮರಣವಾಗುತ್ತದೆ. ಆದರೂ ಎದೆಗುಂದದ ಮಂಜುದೇವಿ ತನ್ನ ಕೆಲಸವನ್ನು ಛಲದಿಂದಲೇ ನಿರ್ವಹಿಸುತ್ತಾಳೆ. ಆಕೆಯ ತಾಯಿ ಮತ್ತು ಮಕ್ಕಳೂ ಸಹ ಈಕೆಗೆ ಸೂಕ್ತ ಮಾನಸಿಕ ಬೆಂಬಲವನ್ನು ಕೊಡುತ್ತಾರೆ.

Advertisement


ಪ್ರಾರಂಭದಲ್ಲಿ ಈ ಕೆಲಸಕ್ಕೆ ಹೊಂದಿಕೊಳ್ಳಲು ಆಕೆಗೆ ತುಂಬಾ ಕಷ್ಟವೆಣಿಸುತ್ತದೆ. ತನ್ನ ಯೂನಿಪಾರ್ಮ್ ಬಟ್ಟೆಗಳನ್ನೂ ಸಹ ತಾನೇ ವಿನ್ಯಾಸ ಮಾಡಿಕೊಳ್ಳಬೇಕಾದ ಪರಿಸ್ಥಿತಿಯೂ ಆಕೆಗೆ ಎದುರಾಗುತ್ತದೆ. ಮಾತ್ರವಲ್ಲದೆ ತನ್ನ ಕುಟುಂಬದ ಪಾಲನೆಗಾಗಿ ಬೇರೆ ಬೇರೆ ಶಿಫ್ಟ್ ಗಳಲ್ಲಿಯೂ ಆಕೆ ಕೆಲಸ ಮಾಡಬೇಕಾಗುತ್ತದೆ. ಈ ರೀತಿಯಾಗಿ ಕಳೆದ 5 ವರ್ಷಗಳಿಂದ ಮಂಜು ದೇವಿ ಜೈಪುರ ರೈಲ್ವೇ ನಿಲ್ದಾಣದಲ್ಲಿ ಕೂಲಿಯಾಗಿ ಕಾರ್ಯನಿರ್ವಹಿಸುತ್ತಾ ತನ್ನ ಕುಟುಂಬವನ್ನು ಸಲಹುತ್ತಿದ್ದಾಳೆ. ಇದೀಗ ಆಕೆಯ ಮೂವರು ಮಕ್ಕಳು ಪ್ರಾಯಪ್ರಬುದ್ಧರಾಗುತ್ತಿದ್ದಾರೆ. ಮಕ್ಕಳ ಮಾನಸಿಕ ಬೆಂಬಲ ಮತ್ತು ತನ್ನ ಸಹ ಕೂಲಿಗಳ ಸಕಾಲಿಕ ಸಹಕಾರ ಹಾಗೂ ರೈಲ್ವೇ ಅಧಿಕಾರಿಗಳ ಸಮಯೋಚಿತ ನೆರವಿನಿಂದ ಮಂಜು ದೇವಿಯ ಬಾಳಿನ ಬಂಡಿ ಹಳಿತಪ್ಪದೇ ಸಾಗುತ್ತಿದೆ.

ಸಾಧಕಿಗೆ ಸಮ್ಮಾನ


ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಯನ್ನು ಮಾಡಿದ್ದ 90 ಜನ ಮಹಿಳೆಯರಿಗಾಗಿ ಜನವರಿ 20ರಂದು ರಾಷ್ಟ್ರಪತಿ ಭವನದಲ್ಲಿ ಅಯೋಜಿಸಲಾಗಿದ್ದ ಔತಣಕೂಟವೊಂದರಲ್ಲಿ ಓರ್ವ ಸಾಧಕಿಯಾಗಿ ಭಾಗವಹಿಸುವ ಅವಕಾಶ ಮಂಜುದೇವಿಗೆ ಒದಗಿ ಬಂತು. ಈ ಸಂದರ್ಭದಲ್ಲಿ ಈಕೆಯ ಕಥೆಯನ್ನು ಕೇಳಿದ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಕ್ಷಣಕಾಲ ಭಾವುಕರಾದರಂತೆ. ಮಾತ್ರವಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದಿಂದ ಪುರಸ್ಕರಿಸಲ್ಪಟ್ಟ 112 ಮಹಿಳಾ ಸಾಧಕರಲ್ಲಿ ಮಂಜುದೇವಿ ಅವರೂ ಕೂಡ ಒಬ್ಬರು.


ಬದುಕು ತನಗೆ ಕೊಟ್ಟ ಈ ಅನಿರೀಕ್ಷಿತ ತಿರುವಿನ ಕುರಿತಾಗಿ ಮಂಜುದೇವಿ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳು ಅದೆಷ್ಟು ಅರ್ಥಪೂರ್ಣ ನೋಡಿ: ‘ನನ್ನದೆಂಬ ಸ್ವಂತದ ಜಮೀನಾಗಲಿ, ಜೀವನ ನಿರ್ವಹಣೆಗೆ ಬೇಕಾಗಿರುವಷ್ಟು ಹಣವಾಗಲಿ ನನ್ನ ಬಳಿಯಲ್ಲಿ ಇಲ್ಲ ; ಆದರೆ ನನಗಿರುವ ಎರಡು ಹೆಣ್ಣು ಮತ್ತು ಒಂದು ಗಂಡು ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡುವ ಮಹತ್ತರವಾದ ಜವಾಬ್ದಾರಿ ನನ್ನ ಮೇಲಿದೆ. ಈ ಎಲ್ಲಾ ಕಾರಣಗಳಿಗಾಗಿ ನಾನೊಂದು ದೃಢ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಿತ್ತು, ಮತ್ತು ನಾನದನ್ನು ತೆಗೆದುಕೊಂಡೆ ; ಇದರಿಂದ ನನಗೆ ತೃಪ್ತಿಯೂ ಇದೆ. ಕೆಲವೊಮ್ಮೆ ನನ್ನ ಸಂಪಾದನೆ ಕೇವಲ 50 ರೂಪಾಯಿಗಳಾಗಿರುತ್ತವೆ, ಇನ್ನು ಕೆಲವೊಮ್ಮೆ 100 ರೂಪಾಯಿಗಳು, ಮತ್ತೆ ಕೆಲವು ದಿನಗಳಲ್ಲಿ ಖಾಲಿ ಕೈಯಲ್ಲಿ ಮರಳಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಾನು ಸ್ವಲ್ಪ ವಿಚಳಿತಗೊಳ್ಳುತ್ತೇನೆ…ಆದರೆ ಬದುಕಿನಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲ ; ನನ್ನ ಕೆಲಸದ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ!’


ಇವತ್ತು ವೈದ್ಯಕೀಯ, ಶಿಕ್ಷಣ, ಸೇನೆ, ಬಾಹ್ಯಾಕಾಶ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಮಹಿಳೆಯರು ಮಿಂಚುತ್ತಿದ್ದಾರೆ. ಇವರೆಲ್ಲರ ನಡುವೆ ತನ್ನ ಬದುಕಿನ ಬಂಡಿಯನ್ನು ಸಾಗಿಸುವ ಉದ್ದೇಶದಿಂದ, ತನ್ನ ಮಕ್ಕಳ ಭವಿಷ್ಯವನ್ನು ರೂಪಿಸುವ ಒಂದೇ ಗುರಿಯನ್ನು ಇಟ್ಟುಕೊಂಡು ಪುರುಷ ಪ್ರಾಬಲ್ಯದ ವೃತ್ತಿಯೊಂದನ್ನು ಆರಿಸಿಕೊಂಡು ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬರುತ್ತಿರುವ ಮಂಜು ದೇವಿಯ ಕೃತು ಶಕ್ತಿಗೊಂದು ನಮನವನ್ನು ಸಲ್ಲಿಸಲೇಬೇಕು. ಮತ್ತು ಜೀವನದಲ್ಲಿ ಕುಗ್ಗಿಹೋಗಿರುವ ಅದೆಷ್ಟೋ ಮಹಿಳೆಯರಿಗೆ ಈಕೆಯ ವ್ಯಕ್ತಿತ್ವ ಸ್ಪೂರ್ತಿಯಾಗಲಿ ಎಂಬುದೇ ನಮ್ಮ ಆಶಯ.

– ಹರಿಪ್ರಸಾದ್ ನೆಲ್ಯಾಡಿ

Advertisement

Udayavani is now on Telegram. Click here to join our channel and stay updated with the latest news.

Next