ಮುಂಬಯಿ: ಮೀರಾರೋಡ್ ಪೂರ್ವ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯ ಆರನೇ ಪ್ರತಿಷ್ಠಾ ವರ್ಧಂತಿ ಉತ್ಸವವು ಫೆ. 1ರಂದು ಮಠದ ಆವರಣದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೈಂಕರ್ಯಗಳೊಂದಿಗೆ ಜರಗಿತು. ಪಲಿಮಾರು ಮಠದ ಟ್ರಸ್ಟಿ ಹಾಗೂ ಪ್ರಬಂಧಕ ವಿದ್ವಾನ್ ರಾಧಾಕೃಷ್ಣ ಭಟ್ ಅವರು ರಥೋತ್ಸವ ಮತ್ತು ಬಲಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಊರ, ಪರವೂರ ಬಂಧು-ಮಿತ್ರರನ್ನು ಊರಿನ ಉತ್ಸವಗಳು ಒಂದುಗೂಡಿಸುತ್ತದೆ. ಸಮಾನ ಮನಸ್ಕರಾಗಿ ಎಳೆಯುವ ತೇರು ಭಕ್ತಿಯೊಂದಿಗೆ ಒಗ್ಗಟ್ಟಿನ ಶಕ್ತಿಯನ್ನು ಸೂಚಿಸುತ್ತವೆ. ತುಳುನಾಡಿನಾದ್ಯಂತ ಪ್ರತಿಯೊಂದು ಊರಿನ ಜಾತ್ರೆಗಳು ಸಾಮರಸ್ಯದ ಪ್ರತಿಬಿಂಬಿವಾಗಿದೆ ಎಂದು ಶುಭಹಾರೈಸಿದರು.
ಮೀರಾರೋಡ್ ಪಲಿಮಾರು ಮಠದ ಬಲಿ ಉತ್ಸವ ಮೂರ್ತಿಯೊಂದಿಗೆ ರಥವು ನಗರ ಪ್ರದಕ್ಷಿಣೆಗೈದು ಶ್ರೀ ಬಾಲಾಜಿ ಸನ್ನಿಧಿಯನ್ನು ತಲುಪಿತು. ಬಳಿ ಉತ್ಸವ ಮೂರ್ತಿಯೊಂದಿಗೆ ಸುರೇಶ್ ಭಟ್ ಕುಂಟಾಡಿ ಅವರು ಪ್ರದಕ್ಷಿಣೆಗೈದರು.
ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯ ಪ್ರಧಾನ ಅರ್ಚಕ ಜಯರಾಮ ಭಟ್, ಗೋಪಾಲ್ ಭಟ್, ಉದಯ ಶಂಕರ್ ಭಟ್, ದೇವಿಪ್ರಸಾದ್ ಭಟ್, ಶ್ರೀಶ ಭಟ್, ವಿಷ್ಣು ಭಟ್, ವೆಂಕಟರಮಣ ಭಟ್, ಪುಂಡರಿಕಾಕ್ಷ ಉಡುಪ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ ಶುದ್ಧ ಪುಣ್ಯಾಹ ಬ್ರಹ್ಮಕಲಶ, ಪ್ರತಿಷ್ಠಾ ಪ್ರಧಾನ ಹವನ, ಶ್ರೀ ಮಹಾನಾರಾಯಣ ಅಷ್ಟಾಕ್ಷರ ಮಂಗಳ ಹವನ, ಮಹಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಅಪರಾಹ್ನ ಮತ್ತು ರಾತ್ರಿ ಮಹಾಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನೆರವೇರಿತು.
ಸಂಜೆ ಬಲಿ ಉತ್ಸವ ಪ್ರಾರಂಭಗೊಂಡು ಮಹಾತೋಭಾರ, ಶ್ರೀ ಬಾಲಾಜಿ ಸನ್ನಿಧಿಯ ಪರಿವಾರ ದೇವರಿಗೆ ವಿಶೇಷ ಪೂಜೆ, ರಂಗಪೂಜೆ ಜರಗಿತು. ಬಾಲಾಜಿ ಭಜನ ಮಂಡಳಿಯ ಸದಸ್ಯರು, ಬಂಟ್ಸ್ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ, ಮೀರಾರೋಡ್ ಶ್ರೀ ಶನೀಶ್ವರ ಚಾರಿಟೆಬಲ್ ಟ್ರಸ್ಟಿನ ಕಾರ್ಯದರ್ಶಿ ಗುಣಗಾಂತ್ ಶೆಟ್ಟಿ ಕರ್ಜೆ, ಸದ್ಗುರು ಭಜನ ಮಂಡಳಿಯ ರೂವಾರಿ ವಿಜಯ ಶೆಟ್ಟಿ, ರಾಜೇಶ್ ಶೆಟ್ಟಿ ಕಾಪು ಮೊದಲಾದವರು ಸಹಕರಿಸಿದರು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ : ರಮೇಶ್ ಅಮೀನ್