ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿನ ಮಹಿಳೆಯರ ಸುರಕ್ಷತೆ ಕುರಿತಂತೆ ಸಮಿತಿ ರಚಿಸುವ ಕುರಿತು ಚರ್ಚಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದ್ದು, ಸೆ.16ರಂದು ಚಿತ್ರರಂಗದ ಪ್ರಮುಖರ ಸಭೆ ಕರೆಯುವ ಸಾಧ್ಯತೆ ಇದೆ.
ಚಿತ್ರರಂಗದ ನಟಿಯರನ್ನು ಕರೆದು ಮಹಿಳೆಯರ ಸುರಕ್ಷತೆ ಕುರಿತಾಗಿ ಚರ್ಚಿಸಬೇಕೆಂದು ಮಹಿಳಾ ಆಯೋಗ ಮಂಡಳಿಗೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಮಂಡಳಿ ಸದಸ್ಯರು ಚರ್ಚಿಸಿ, ಸೆ.16ರಂದು ಸಭೆ ಕರೆಯಲು ನಿರ್ಧರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿ ಸಿರುವ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, “ಮಂಡಳಿ ಕೂಡಾ ಚಿತ್ರರಂಗದ ಮಹಿಳೆಯರ ಕುರಿತಾಗಿ ಚರ್ಚೆ ನಡೆಸಲಿದ್ದು, ಈ ನಿಟ್ಟಿನಲ್ಲಿ ಸೆ.16ರಂದು ಸಭೆ ಕರೆಯಲಿದ್ದೇವೆ’ ಎಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ವರದಿ ಮಾಡುವಂತೆ ಹಾಗೂ ಅವರ ಸುರಕ್ಷತೆಗೆ ಯೋಜನೆ ರೂಪಿಸುವಂತೆ ಕೋರಿ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಇಕ್ವಾಲಿಟಿ ಸಂಸ್ಥೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಇದರೊಂದಿಗೆ ಚಿತ್ರರಂಗದಲ್ಲಿ ಮತ್ತೆ ಮೀ ಟೂ ಕಾವು ಪಡೆದಿದೆ.
ಸದ್ಯ ಚಿತ್ರರಂಗದಲ್ಲಿ ಕಿರುಕುಳಕ್ಕೆ ಒಳಗಾದ ಸಾಕಷ್ಟು ಸಂತ್ರಸ್ತೆಯರಿದ್ದಾರೆ. ಆದರೆ, ಅವರ್ಯಾರೂ ಮುಂದೆ ಬರಲು ಧೈರ್ಯ ಮಾಡುತ್ತಿಲ್ಲ. ಸದ್ಯ ಸರ್ಕಾರದಿಂದ ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಹಾಗೂ ಅದಕ್ಕೆ ಬೆಂಬಲವಾಗಿ ನಿಲ್ಲಬಲ್ಲ ಸಮಿತಿ ರಚಿಸುವುದನ್ನು ನಾವು ಅಪೇಕ್ಷಿಸುತ್ತೇವೆ. ಸಿಎಂ ಈ ಕುರಿತು ಭರವಸೆ ನೀಡಿದ್ದಾರೆ. ಸೆ.10ರಂದು ಕವಿತಾ ಲಂಕೇಶ್ ನೇತೃತ್ವದಲ್ಲಿ ಮತ್ತೂಮ್ಮೆ ಸಿಎಂ ಭೇಟಿಯಾಗುವ ನಿರೀಕ್ಷೆಯಿದೆ.
–ನೀತು ಶೆಟ್ಟಿ, ನಟಿ