ಹೊಸದಿಲ್ಲಿ: ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ಭಾರಿ ಗೆಲುವು ಸಾಧಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಸದಾ ಗೆಲುವು ಸಾಧಿಸುತ್ತದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್ಡಿಎ ಗೆದ್ದ ಬಳಿಕ ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಮೋದಿ ಪಕ್ಷದ ಕಾರ್ಯ ಕ ರ್ತ ರನ್ನು ಉದ್ದೇ ಶಿಸಿ ಭಾಷಣ ಮಾಡಿದರು. ಈ ವೇಳೆ ಮಹಾರಾಷ್ಟ್ರದಲ್ಲಿ ಎನ್ಡಿಎ ಮೈತ್ರಿಕೂಟ ಗೆಲ್ಲಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. “ಅಭಿವೃದ್ಧಿ ಗೆಲ್ಲುತ್ತದೆ! ಉತ್ತಮ ಆಡಳಿತ ಗೆಲ್ಲುತ್ತದೆ! ಒಟ್ಟಾಗಿ ನಾವು ಇನ್ನೂ ಎತ್ತರಕ್ಕೆ ತಲುಪಿದ್ದೇವೆ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ನಾವು ಮತ್ತಷ್ಟು ದುಡಿಯುತ್ತೇವೆ ಎಂದು ಜನರಿಗೆ ಭರವಸೆ ಕೊಡುತ್ತೇನೆ’ ಎಂದು ಹೇಳಿದ್ದಾರೆ.
50 ವರ್ಷಗಳಲ್ಲೇ ಚುನಾವಣಾ ಪೂರ್ವ ಮೈತ್ರಿಯೊಂದಕ್ಕೆ ಮಹಾರಾಷ್ಟ್ರದಲ್ಲಿ ಅತಿದೊಡ್ಡ ಗೆಲುವು ಸಿಕ್ಕಿದೆ. ಬಿಜೆಪಿಗೆ ಸತತ 3ನೇ ಬಾರಿ ಅಧಿಕಾರ ನೀಡಿದ ರಾಜ್ಯಗಳಲ್ಲಿ ಮಹಾರಾಷ್ಟ 6ನೇ ರಾಜ್ಯ ಎನಿಸಿಕೊಂಡಿದೆ. ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಗೆಲ್ಲುವ ಮೂಲಕ “ಒಗ್ಗಟ್ಟಾಗಿದ್ದರೆ ಸುರಕ್ಷಿತ’ ಎಂಬ ಹೇಳಿಕೆಯ ಅರ್ಥವನ್ನು ತಿಳಿಸಿದ್ದೇವೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ಧಾಳಿ
ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಕಾಂಗ್ರೆಸ್ ಕುಟುಂಬದ ವೋಟ್ಬ್ಯಾಂಕ್ ಹೆಚ್ಚಿಸಿಕೊಳ್ಳಲು ಯತ್ನಿಸುತ್ತದೆ. ಮಹಾ ರಾಷ್ಟ್ರದಲ್ಲೂ ಜನರಿಗೆ ದ್ರೋಹ ಬಗೆಯಲು ಕಾಂಗ್ರೆಸ್ ಯೋಚಿಸಿತ್ತು. ಆದರೆ ಜನ ಪಾಠ ಕಲಿಸಿದ್ದಾರೆ. ಜನರು ಈಗ ದೇಶ ಮೊದಲು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಕುರ್ಚಿ ಮೊದಲು ಎಂದು ಕೊಂಡಿದೆ. ಹೀಗಾಗಿಯೇ ಚುನಾವಣೆಯಲ್ಲಿ ಸೋಲು ಅನುಭವಿಸಿದೆ. ದೆಹಲಿ ಸುತ್ತಮುತ್ತ ಇರುವ ಆಸ್ತಿಯನ್ನು ಕಾಂಗ್ರೆಸ್ ಕಬಳಿಸಿ ಕೊಂಡಿದೆ .ಕಾಂಗ್ರೆಸ್ ನಡೆಸುತ್ತಿರುವ ವೋಟ್ಬ್ಯಾಂಕ್ ರಾಜಕಾರಣಕ್ಕೆ ಉದಾಹರಣೆಯಾಗಿದೆ. ಸಂವಿಧಾನ ಇದಕ್ಕೆ ಅವಕಾಶ ನೀಡಿಲ್ಲ. ಅದೇ ರೀತಿ 370ನೇ ವಿಧಿಯನ್ನು ಮತ್ತೆ ಜಾರಿ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.