ಬೆಂಗಳೂರು: ಸಂಪಿಗೆ ಚಿತ್ರಮಂದಿರ ಮಾಲಿಕ ನಾಗೇಶ್ಗೆ ಮದ್ಯದಲ್ಲಿ ಅಮ ಲು ಬರುವ ಔಷಧ ಬೆರೆಸಿ ಪ್ರಜ್ಞೆ ತಪ್ಪಿಸಿ ನಗದು, ಚಿನ್ನಾಭರಣ ದೋಚಿದ್ದ ಮೂವರು ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೇಪಾಳ ಮೂಲದ ಪ್ರಕಾಶ್ ಶಾಹಿ (46), ಅಪೀಲ್ ಶಾಹಿ (41) ಹಾಗೂ ಜಗದೀಶ್ ಶಾಹಿ (30) ಬಂಧಿತರು. ಆರೋಪಿಗಳಿಂದ 1.12 ಕೋಟಿ ರೂ. ಮೌಲ್ಯದ 1.6 ಕೆ.ಜಿ ಚಿನ್ನಾಭರಣ ಹಾಗೂ 450 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ನೇಪಾಳ ಮೂಲದ ಗಣೇಶ್ ಮತ್ತು ಆತನ ಪತ್ನಿ ಗೀತಾ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಕಮಿಷನರ್ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಕರಣದ ಹಿನ್ನೆಲೆ: ಸಂಪಿಗೆ ಚಿತ್ರಮಂದಿರ ಮಾಲಿಕ ನಾಗೇಶ್ ಜಯನಗರ 3ನೇ ಬ್ಲಾಕ್ನ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಅವರ ಮನೆಯಲ್ಲಿ ಕಳೆದ 2 ವರ್ಷಗಳಿಂದ ನೇಪಾಳ ಮೂಲದ ಗಣೇಶ್ ಮತ್ತು ಗೀತಾ ದಂಪತಿ ಮನೆಗೆಲಸ ಮಾಡಿಕೊಂಡಿದ್ದರು. ಅ.21ರಂದು ಸಂಜೆ ಕಾರ್ಯಕ್ರಮ ನಿಮಿತ್ತ ನಾಗೇಶ್ ಪುತ್ರ ವೆಂಕಟೇಶ್ ಸೇರಿ ಕುಟುಂಬದ ಸದಸ್ಯರು ಹೊರಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ನಾಗೇಶ್ ಒಬ್ಬರೇ ಮದ್ಯ ಸೇವಿಸುತ್ತಿದ್ದರು. ಆಗ ಆರೋಪಿತ ದಂಪತಿ, ನಾಗೇಶ್ ಗಮನ ಬೇರೆಡೆ ಸೆಳೆದು ಮದ್ಯಕ್ಕೆ ಅಮ ಲು ಬರುವ ಔಷಧ ಬೆರೆಸಿದ್ದಾರೆ. ಈ ಮದ್ಯ ಸೇವಿಸಿದ ನಾಗೇಶ್ ಪ್ರಜ್ಞೆ ತಪ್ಪಿದ್ದಾರೆ. ಈ ವೇಳೆ ತಮ್ಮ ಸಹಚರರಾದ ಪ್ರಕಾಶ್ ಶಾಹಿ, ಅಪೀಲ್ ಶಾಹಿ ಹಾಗೂ ಜಗದೀಶ್ ಶಾಹಿಯನ್ನು ಮನೆಗೆ ಕರೆಸಿಕೊಂಡು ಮನೆಯ ಕೊಠಡಿಯ ಬೀರುವಿನ ಲಾಕ್ ಮುರಿದು 2.50 ಲಕ್ಷ ರೂ. ನಗದು, 2 ಕೆ.ಜಿ.510 ಗ್ರಾಂ ಚಿನ್ನಾಭರಣಗಳು ಹಾಗೂ ಬೆಳ್ಳಿ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು.
ಗುಜರಾತ್ನಲ್ಲಿ ಕದ್ದ ಮಾಲು ಹಂಚಿಕೆ: ಕೃತ್ಯ ಎಸಗಿದ ಬಳಿಕ ದಂಪತಿ ಸೇರಿ ಐವರು ಆರೋಪಿಗಳು ರೈಲಿನ ಮೂಲಕ ಹೈದರಾಬಾದ್ಗೆ ತೆರಳಿದ್ದರು. ಬಳಿಕ ಮುಂಬೈಗೆ ಹೋಗಿ ಅಲ್ಲಿಂದ ಗುಜರಾತ್ಗೆ ತೆರಳಿ ಕದ್ದ ಮಾಲುಗಳನ್ನು ಹಂಚಿಕೊಂಡಿದ್ದರು. ಆರೋಪಿಗಳಾದ ಗಣೇಶ್ ಮತ್ತು ಗೀತಾ ದಂಪತಿ ಗುಜರಾತ್ನ ವಾಪಿ ರೈಲು ನಿಲ್ದಾಣದಿಂದ ಬೇರೆಡೆಗೆ ಪರಾರಿಯಾಗಿದ್ದಾರೆ. ಉಳಿದ ಮೂವರು ಆರೋಪಿಗಳು ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದರು. ಮತ್ತೂಂದೆಡೆ ಪೊಲೀಸರ ತಂಡ ಗುಜರಾತ್ವರೆಗೂ ದಂಪತಿಯ ಬೆನ್ನತ್ತಿತ್ತು. ಇನ್ನೇನು ಬಂಧಿಸಬೇಕು ಎನ್ನುವಷ್ಟರಲ್ಲಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಇತ್ತ ಬೆಂಗಳೂರಿಗೆ ವಾಪಸ್ ಆಗಿರುವ ಮೂವರ ಬಗ್ಗೆ ಮಾಹಿತಿ ಪಡೆದುಕೊಂಡು ನಗರದಲ್ಲೇ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.