Advertisement

ಮಾಯಾವತಿ ಹೇಳಿದ್ದು ಗೊತ್ತೇ ಆಗಿಲ್ಲ: ಮಹೇಶ್‌

12:00 AM Jul 25, 2019 | Lakshmi GovindaRaj |

ಬೆಂಗಳೂರು: “ಯಾವುದೇ ಪಕ್ಷಕ್ಕೂ ಬೆಂಬಲ ಸೂಚಿಸದೇ ಇಂದಿಗೂ ತಟಸ್ಥ ನಿಲುವನ್ನೇ ಹೊಂದಿದ್ದು, ಸಂವಹನ ಕೊರತೆಯಿಂದ ಮೈತ್ರಿ ಸರ್ಕಾರದ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ’ ಎಂದು ಕೊಳ್ಳೇಗಾಲದ ಬಿಎಸ್‌ಪಿ ಶಾಸಕ ಎನ್‌.ಮಹೇಶ್‌ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 23ರಂದು ನಡೆದ ಬಿಎಸ್‌ಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿಯವರು ರಾಜ್ಯದಲ್ಲಿ ಯಾರಿಗೂ ಬೆಂಬಲಿಸದೇ ಸ್ವತಂತ್ರವಾಗಿರಲು ಸೂಚನೆ ನೀಡಿದ್ದರು. ಹೀಗಾಗಿ, ನಂತರ ರಾಜ್ಯ ರಾಜಕಾರಣದ ಬೆಳವಣಿಗೆಗಳಲ್ಲಿ ಯಾರಿಗೂ ಬೆಂಬಲ ಸೂಚಿಸದೇ ತಟಸ್ಥ ನೀತಿ ಅನುಸರಿಸಿದ್ದೆ.

ಇನ್ನು ರಾಜ್ಯದಲ್ಲಿ ಕಲಾಪ ಆರಂಭವಾಗಿ ವಿಶ್ವಾಸ ಮತಯಾಚನೆ ವಿಚಾರ ಬಂದಾಗ ಬಿಎಸ್‌ಪಿ ಕರ್ನಾಟಕ ಉಸ್ತುವಾರಿಯಾದ ರಾಜ್ಯಸಭಾ ಸದಸ್ಯ ಡಾ.ಅಶೋಕ್‌ ಸಿದ್ಧಾರ್ಥ ಅವರ ಬಳಿ ಬೆಂಬಲ ಸೂಚಿಸುವ ಕುರಿತು ಮಾತನಾಡಿದ್ದೆ. ಆಗ ಅವರು ಮಾಯಾವತಿ ಅವರ ಜತೆ ಮಾತನಾಡಿದ್ದು, ತಟಸ್ಥವಾಗಿರಲು ಹೇಳಿದ್ದಾರೆ ಎಂದು ತಿಳಿಸಿದ್ದರು.

ಹೀಗಾಗಿ, ವಿಶ್ವಾಸ ಮತ ಪ್ರಕ್ರಿಯೆಗೆ ಭಾಗವಹಿಸಲಿಲ್ಲ, ಕಲಾಪಕ್ಕೆ ಗೈರಾಗುತ್ತೇನೆ ಎಂದು ಕೂಡಾ ಹೇಳಿದ್ದೆ, ಒಪ್ಪಿದ್ದರು. ಬಳಿಕ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮೈತ್ರಿ ಬೆಂಬಲ ಸೂಚಿಸುವಂತೆ ಮಾಯಾವತಿ ಟ್ವಿಟ್ಟರ್‌ ಮೂಲಕ ಹೇಳಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ನಾನು ಟ್ವಿಟ್ಟರ್‌ ಬಳಸುವುದಿಲ್ಲ. ಹೀಗಾಗಿ, ವಿಶ್ವಾಸಮತ ಪ್ರಕ್ರಿಯೆಯಿಂದ ದೂರ ಉಳಿದಿದ್ದೆ ಎಂದು ಹೇಳಿದರು.

ಈ ಬಾರಿ ಕಲಾಪದಲ್ಲಿ ಭಾಗವಹಿಸುವುದಿಲ್ಲ ಎಂದು ನಿರ್ಧರಿಸಿದ ಬಳಿಕ ಕ್ಷೇತ್ರದ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೆ. ಜು.15ರಂದು ಕ್ಷೇತ್ರದ ಗ್ರಾಪಂ ಸದಸ್ಯರೊಬ್ಬರು ನಿಧನರಾಗಿದ್ದು, ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಎರಡು ದಿನ ಅವರ ಜತೆ ಇದ್ದೆ. ಆನಂತರ ವೈಯಕ್ತಿಕ ಕಾರಣಗಳಿಗೆ ವಾರದ ಮಟ್ಟಿಗೆ ಧ್ಯಾನ ಶಿಬಿರದಲ್ಲಿ ಭಾಗವಹಿಸಿದ್ದೆ. ಮಾಧ್ಯಮ ಸೇರಿದಂತೆ ಯಾರ ಸಂಪರ್ಕವೂ ನನಗೆ ಇರಲಿಲ್ಲ.

Advertisement

ಇಂದು ಬೆಳಗ್ಗೆ ಪತ್ರಿಕೆ ಓದುವಾಗ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ ಎಂದು ತಿಳಿಯಿತು. ಈ ಕುರಿತು ಸ್ಪಷ್ಟನೆ ನೀಡಲು ಪತ್ರಿಕಾಗೋಷ್ಠಿ ನಡೆಸುತ್ತಿದೇನೆ. ಈ ವರೆಗೆ ಪಕ್ಷದಿಂದ ಯಾವುದೇ ಕರೆ, ಪತ್ರ ಬಂದಿಲ್ಲ ಎಂದರು. 2019ರ ಲೋಕಸಭಾ ಚುನಾವಣೆಯಲ್ಲಿ ಮಾಯಾವತಿ ಅವರ ಚುನಾವಣಾ ಪೂರ್ವ ಯಾವುದೇ ಒಪ್ಪಂದ ಇಲ್ಲ ಎಂಬ ನಿರ್ಧಾರ ಮಾಡಿ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೂ ಬಿಎಸ್‌ಪಿ ಅಭ್ಯರ್ಥಿ ನಿಲ್ಲಿಸಲು ಹೇಳಿದ್ದರು.

ಒಟ್ಟಾರೆ ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಮತ ಬಿಎಸ್‌ಪಿ ಅಭ್ಯರ್ಥಿಗಳು ಪಡೆದರು. ಆ ಚುನಾವಣೆ ಬಳಿಕ ವಿಧಾನಸಭೆಯ ಆಡಳಿತ ಅಥವಾ ವಿರೋಧ ಪಕ್ಷ ಎರಡೂ ಕಡೆ ಕೂರುವುದು ಬೇಡ ಎಂದಿದ್ದರು. ಹೀಗಾಗಿ, ಸ್ಪಿಕರ್‌ಗೆ ಮನವಿ ಮಾಡಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದೆ. ಅಂದಿನಿಂದಲೂ ತಟಸ್ಥವಾಗಿದ್ದೇನೆ ಮುಂದೆಯೂ ತಟಸ್ಥವಾಗಿರುತ್ತೇನೆ ಎಂದರು.

ಉಚ್ಚಾಟನೆ ವಾಪಸ್‌ ಸಾಧ್ಯತೆ: ನಾನು ಯಾವುದೇ ಆದೇಶ ಉಲ್ಲಂ ಸಿಲ್ಲ. ಪಕ್ಷದ ವಿರುದ್ಧ ಅಶಿಸ್ತು ತೋರಿಲ್ಲ. ನನಗೆ ಟ್ವಿಟ್ಟರ್‌ ಮಾಹಿತಿ ತಲುಪಿಲ್ಲ. ಜತೆಗೆ ಒಂದು ವಾರಗಳ ನಾನು ಯಾವ ರೀತಿಯ ಸಂಪರ್ಕ ಇಲ್ಲದೇ ಧ್ಯಾನ ಶಿಬಿರದಲ್ಲಿ ಭಾಗವಹಿಸಿದ್ದೆ. ಹೀಗಾಗಿ, ವಿಶ್ವಾಸ ಮತಯಾಚನೆ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ ಎಂದು ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಗಮನಕ್ಕೆ ತರುತ್ತೇನೆ. ಬಳಿಕ ಅವರು ಉಚ್ಚಾಟನೆ ವಾಪಸ್‌ ಪಡೆಯಬಹದು. ಮುಂದೆ ಬಿಎಸ್‌ಪಿ ಶಾಸಕನಾಗಿಯೇ ಮುಂದುವರೆಯುತ್ತೇನೆ ಎಂದು ಶಾಸಕ ಮಹೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next