ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿ ಮಿಂಚಿದ್ದಾರೆ. ವೈ ಎಸ್ ರಾಜಶೇಖರ ರೆಡ್ಡಿ ಮೈದಾನದಲ್ಲಿ ಕನ್ನಡಿಗ ಮಯಾಂಕ್ ತನ್ನ ಟೆಸ್ಟ್ ಬಾಳ್ವೆಯ ಚೊಚ್ಚಲ ಶತಕ ಬಾರಿಸಿದರು.
ಮೊದಲ ದಿನದಾಟದಲ್ಲಿ 84 ರನ್ ಗಳಿಸಿ ಅಜೇಯರಾಗುಳಿದಿದ್ದ ಮಯಾಂಕ್ ಇಂದು ಸ್ಪಿನ್ನರ್ ಕೇಶವ್ ಮಹರಾಜ್ ಎಸೆತದಲ್ಲಿ ಒಂಟಿ ರನ್ ತೆಗೆಯುವ ಮೂಲಕ ತನ್ನ ಶತಕ ಪೂರೈಸಿದರು.
ಜೊತೆಗಾರ ರೋಹಿತ್ ಶರ್ಮಾರೊಂದಿಗೆ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಅಗರ್ವಾಲ್ 204 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಇನ್ನಿಂಗ್ಸ್ ನಲ್ಲಿ 13 ಬೌಂಡರಿ ಮತ್ತು ಎರಡು ಭರ್ಜರಿ ಸಿಕ್ಸರ್ ಗಳು ಮಯಾಂಕ್ ಬ್ಯಾಟ್ ನಿಂದ ಬಂದಿವೆ.
ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನ ಎಂಟನೇ ಇನ್ನಿಂಗ್ಸ್ ಆಡುತ್ತಿರುವ ಮಯಾಂಕ್ ಈಗಾಗಲೇ ಮೂರು ಅರ್ಧಶತಕ ಬಾರಿಸಿದ್ದಾರೆ.
72 ಓವರ್ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದೆ. ರೋಹಿತ್ 140 ಮತ್ತು ಮಯಾಂಕ್ 105 ರನ್ ಗಳಿಸಿ ಆಡುತ್ತಿದ್ದಾರೆ.