ದಿನ ಬೆಳಗಾದರೆ ಚಿತ್ರರಂಗಕ್ಕೆ ಕನಸು ಕಟ್ಟಿಕೊಂಡು ಬರುವ ನವ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಕೆಲವರು ನಟರಾಗಬೇಕು ಎಂದುಕೊಂಡರೆ ಇನ್ನು ಅನೇಕರು ನಿರ್ದೇಶಕನಾಗಬೇಕು ಅಂದುಕೊಳ್ಳುತ್ತಾರೆ. ಅಂತಿಮವಾಗಿ ಅವರ ಅದೃಷ್ಟದ ಮೇಲೆ ಅವರ ಹಾದಿ ನಿರ್ಧರಿತವಾಗಿರುತ್ತದೆ. ಈ ವಾರ ತೆರೆಕಂಡಿರುವ “ಮಾಯಾನಗರಿ’ ಚಿತ್ರದಲ್ಲೂ ಇಂತಹುದೇ ಒಂದು ಕಥೆ ಇದೆ.
ಚಿತ್ರದಲ್ಲಿ ನಾಯಕ ಶಂಕರ್ ನಾಗ್ ಅಭಿಮಾನಿ, ಚಿತ್ರರಂಗದಲ್ಲಿ ದೊಡ್ಡ ನಿರ್ದೇಶಕನಾಗಬೇಕೆಂದು ಹೋರಾಟ ನಡೆಸುವ ಆತನಿಗೆ ಕೊನೆಗೂ ಒಂದು ಅವಕಾಶ ಸಿಕ್ಕಿ, ಮಾಯಾನಗರಿ ಎಂಬ ಸ್ಥಳಕ್ಕೆ ಹೋಗಬೆಕಾಗುತ್ತದೆ. ಆ ಊರಿಗೆ ಬರುವ ಆತ ಅಲ್ಲಿ ತಾನೇ ಪಾತ್ರವಾಗಬೇಕಾಗುತ್ತದೆ. ಹೀಗೆ ಕುತೂಹಲಕಾರಿಯಾಗಿ ಸಾಗುವ ಸಿನಿಮಾದಲ್ಲಿ ನಿರ್ದೇಶಕರು ಒಂದಷ್ಟು ಟ್ವಿಸ್ಟ್ ಟರ್ನ್ಗಳ ಮೂಲಕ ಕಥೆಯನ್ನು ಹೇಳಿದ್ದಾರೆ.
ಕಥೆಯ ಬಗ್ಗೆ ಒನ್‌ಲೈನ್‌ನಲ್ಲಿ ಹೇಳಬೇಕಾದರೆ ಇಲ್ಲಿ ಆಸೆ-ದುರಾಸೆಯ ಕಥೆ ಇದೆ. ಅದನ್ನು ನಿರ್ದೇಶಕರು ತಮ್ಮದೇ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ರೆಗ್ಯುಲರ್ ಅಂಶಗಳನ್ನು ಬಿಟ್ಟು ಒಂದೊಳ್ಳೆಯ ಸಿನಿಮಾ ಮಾಡಬೇಕೆಂಬ ನಿರ್ದೇಶಕರ ತುಡಿತ ಎದ್ದು ಕಾಣುತ್ತದೆ. ಮುಖ್ಯವಾಗಿ ನಿರ್ದೇಶಕರಿಗೆ ತಾನು ಹೇಳಬೇಕಾದ ಕಥೆಯ ಬಗ್ಗೆ ಒಂದು ಸ್ಪಷ್ಟ ಚಿತ್ರಣವಿದೆ. ಅದೇ ಕಾರಣದಿಂದ ಚಿತ್ರ ಸುಗಮ ಹಾದಿಯಲ್ಲಿ ಸಾಗಿದೆ. ಹಾರರ್ ಅಂಶಗಳು ಸಿನಿಮಾಕ್ಕೆ ಹೊಸ ಆಯಾಮ ನೀಡಿವೆ.
ಚಿತ್ರದಲ್ಲಿ ನಾಯಕ ಅನೀಶ್ ಹಲವು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುವ ಜೊತೆಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಶ್ರಾವ್ಯಾ, ತೇಜು, ಚಿಕ್ಕಣ್ಣ ಸೇರಿದಂತೆ ಇತರರು ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ.
ರವಿ ರೈ