ಮೆಲ್ಬೋರ್ನ್: 2017 ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಭುಜದ ಗಾಯಕ್ಕೀಡಾದ ಬಳಿಕ ಅವರನ್ನು ಅಪಹಾಸ್ಯ ಮಾಡಿದ ನಂತರ ತನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಿರ್ಬಂಧಿಸಿದ್ದರು ಎಂದು ಆಸ್ಟ್ರೇಲಿಯದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಬಹಿರಂಗಪಡಿಸಿದ್ದಾರೆ.
LiSTNR ಸ್ಪೋರ್ಟ್‌ನಲ್ಲಿನ ವಿಲೋ ಟಾಕ್ ಪಾಡ್‌ಕ್ಯಾಸ್ಟ್‌ನಲ್ಲಿ ಮ್ಯಾಕ್ಸ್‌ವೆಲ್ ”ನಾನು ಕೊಹ್ಲಿಯವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನುಸರಿಸಲು ಪ್ರಯತ್ನಿಸಿದೆ, ಆದರೆ ನನ್ನನ್ನು ನಿರ್ಬಂಧಿಸಿದ್ದಾರೆ ಎಂದು ಕಂಡುಕೊಡೆ. ಏಕೆ ಎಂದು ನಿಜವಾಗಿಯೂ ಅರ್ಥವಾಗಲಿಲ್ಲ. ನಂತರ, 2017 ರಲ್ಲಿ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯ ಸಂದರ್ಭದಲ್ಲಿ, ರಾಂಚಿ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಕೊಹ್ಲಿ ಭುಜದ ಗಾಯಕ್ಕೆ ಒಳಗಾಗಿದ್ದರು. ಆಗ ಅಪಹಾಸ್ಯ ಮಾಡಿದ್ದು ಕಾರಣ ಎಂದು ತಿಳಿಯಿತು’ ಎಂದರು.
“ನಾನು ಹೋಗಿ ಕೊಹ್ಲಿ ಅವರನ್ನು ಕೇಳಿದೆ ‘ನೀವು ನನ್ನನ್ನು Instagram ನಲ್ಲಿ ನಿರ್ಬಂಧಿಸಿದ್ದೀರಾ ಎಂದು, ಅವರು ‘ಹೌದು, ಬಹುಶಃ’ ಎಂದರು. ಟೆಸ್ಟ್ ಪಂದ್ಯದ ವೇಳೆ ಅಪಹಾಸ್ಯ ಮಾಡಿದ್ದಕ್ಕೆ ನನ್ನನ್ನು ನಿರ್ಬಂಧಿಸಲು ನಿರ್ಧರಿಸಿದ್ದಾರೆ ಎಂದುಕೊಂಡೆ. ಆ ನಂತರ ನನ್ನ ನಿರ್ಬಂಧ ಕೊನೆಗೊಳಿಸಿದರು, ಈಗ ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದೇವೆ’ ಎಂದರು.
ನಾವು ಸಾಕಷ್ಟು ಫನ್ನಿ
ಐಪಿಎಲ್ ಒಟ್ಟಿಗೆ ಆಡುವ ವೇಳೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಮತ್ತು ಅನುಭವಗಳನ್ನು ಹಂಚಿಕೊಳ್ಳುವುದು ಸೇರಿ ನಾವು ಸಾಕಷ್ಟು ತಮಾಷೆಯ ಸಂಬಂಧವನ್ನು ಹೊಂದಿದ್ದೇವೆ. ನಾವಿಬ್ಬರೂ ಚಿಕ್ಕ ವಯಸ್ಸಿನಿಂದಲೂ ಧೈರ್ಯಶಾಲಿಗಳಾಗಿದ್ದೇವೆ ಮತ್ತು ಮೈದಾನದಲ್ಲಿ ಪರಸ್ಪರ ಕಠಿನವಾಗಿ ನಡೆದುಕೊಳ್ಳುತ್ತೇವೆ. ನಾವು ಎಲ್ಲದರ ಮುಂದೆ ಮತ್ತು ಮಧ್ಯದಲ್ಲಿ ಇದ್ದೆವು’ ಎಂದು ಹೇಳಿದ್ದಾರೆ.
2021 ರಲ್ಲಿ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರುವವರೆಗೂ ಕೊಹ್ಲಿ ಮತ್ತು ಮ್ಯಾಕ್ಸ್‌ವೆಲ್ ಉತ್ತಮ ಸ್ನೇಹಿತರಾಗಿರಲಿಲ್ಲ.