ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಜರ್ನಿಗೆ ಆಸ್ಟ್ರೇಲಿಯಾದ (Australia) ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ (Matthew Wade) ಮಂಗಳವಾರ (ಅ.29ರಂದು) ನಿವೃತ್ತಿ ಘೋಷಿಸಿದ್ದಾರೆ.
13 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣಕ್ಕೆ ಅವರು ವಿದಾಯ ಹೇಳಿದ್ದಾರೆ. ಟಿ20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡವನ್ನು ಪ್ರತಿನಿಧಿಸಿದ್ದ ಅವರು, 2021ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
2011ರ ಅಕ್ಟೋಬರ್ ತಿಂಗಳಿನಲ್ಲಿ ದಕ್ಷಿಣ ವಿರುದ್ಧದ ಟಿ20 ಪಂದ್ಯದೊಂದಿಗೆ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣ ಶುರುವಾಗಿತ್ತು. 36 ಟೆಸ್ಟ್, 97 ಏಕದಿನ ಮತ್ತು 92 ಟಿ-20 ಗಳನ್ನು ವೇಡ್ ಆಡಿದ್ದಾರೆ. ಜೂನ್ 2024ರಲ್ಲಿ T20 ವಿಶ್ವಕಪ್ ಅವರು ಕೊನೆಯ ಬಾರಿ ಆಟಗಾರನಾಗಿ ತಂಡದಲ್ಲಿ ಕಾಣಿಸಿಕೊಂಡಿದ್ದರು.
ಟಿ20ಯಲ್ಲಿ ಅವರು 1202 ರನ್ ಗಳಿಸಿದ್ದು, ಏಕದಿನದಲ್ಲಿ 1867 ರನ್ ಕಲೆಹಾಕಿದ್ದಾರೆ. ಇನ್ನು 36 ಟೆಸ್ಟ್ ಪಂದ್ಯಗಳಲ್ಲಿ ಮೂರು ಅರ್ಧಶತಕಗಳೊಂದಿಗೆ ಒಟ್ಟು 1202 ರನ್ ಕಲೆಹಾಕಿದ್ದಾರೆ.
2021ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಸೆಮಿಫೈನಲ್‌ನಲ್ಲಿ 17 ಎಸೆತದಲ್ಲಿ ಸ್ಫೋಟಕ 41ರನ್ ಗಳಿಸಿ ಫಿನಿಷರ್ ರೋಲ್‌ನ್ನು ನಿಭಾಯಿಸಿ ತಂಡದ ಗೆಲುವಿಗೆ ಮಹತ್ತರ ಪಾತ್ರವಹಿಸಿದ್ದರು. ಇದಾದ ಬಳಿಕ 2022, 2024ರ ಟಿ20 ವಿಶ್ವಕಪ್‌ನಲ್ಲಿ ಅವರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು.
ಕಳೆದ ಟಿ 20 ವಿಶ್ವಕಪ್‌ನ ಕೊನೆಯಲ್ಲಿ ನನ್ನ ಅಂತಾರಾಷ್ಟ್ರೀಯ ದಿನಗಳು ಬಹುತೇಕ ಮುಗಿದಿವೆ ಎಂದು ನನಗೆ ಸಂಪೂರ್ಣವಾಗಿ ತಿಳಿದಿತ್ತು. ನಿವೃತ್ತಿ ಬಗ್ಗೆ ಆರು ತಿಂಗಳಿನಿಂದ ಜಾರ್ಜ್ ಬೈಲಿ ಮತ್ತು ಆಂಡ್ರ್ಯೂ (ಮೆಕ್‌ಡೊನಾಲ್ಡ್) ಅವರೊಂದಿಗೆ ನಿರಂತರವಾಗಿ ಚರ್ಚಿಸಿದ್ದೆ. ನಾನು ಬಿಬಿಎಲ್ ಮತ್ತು ಇತರೆ ಲೀಗ್ ನಲ್ಲಿ ಆಡುವುದನ್ನು ಮುಂದುವರಿಸಲಿದ್ದೇನೆ ಎಂದು ವೇಡ್ ಹೇಳಿದ್ದಾರೆ.
ಆಂಡ್ರೆ ಬೊರೊವೆಕ್ ನೇತೃತ್ವದಲ್ಲಿ ಮುಂಬರುವ ಪಾಕಿಸ್ತಾನ ವಿರುದ್ಧದ T20I ಸರಣಿಗಾಗಿ ಆಸ್ಟ್ರೇಲಿಯಾ ತಂಡದ ಕೋಚಿಂಗ್ ಸಿಬ್ಬಂದಿಯಾಗಿ ನಾನು ಸೇರಿಕೊಳ್ಳಲಿದ್ದೇನೆ ಎಂದಿದ್ದಾರೆ.