Advertisement

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗಣಿತ ಪೂರಕ ಪರೀಕೆ

10:19 AM Feb 19, 2018 | |

ವಾಡಿ: ಗಣಿತ ವಿಷಯ ಎಂದರೆ ಕೆಲ ವಿದ್ಯಾರ್ಥಿಗಳಿಗೆ ನೀರು ಕುಡಿದಷ್ಟೇ ಸರಳ. ಆದರೆ ಹಲವು ವಿದ್ಯಾರ್ಥಿಗಳಿಗೆ ಇದು
ಕಬ್ಬಿಣದ ಕಡಲೆ ಎಂಬ ಮಾತು ಜನಜನೀತ. ಶಿಕ್ಷಣ ಇಲಾಖೆ ನಡೆಸುವ 2018ನೇ ಸಾಲಿನ ಎಸ್‌ಎಸ್‌ ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಇನ್ನೂ ಎರಡು ತಿಂಗಳು ದೂರ ಇರುವಾಗಲೇ ವಿದ್ಯಾರ್ಥಿಗಳು ಗಣಿತ ವಿಷಯದ ಪೂರಕ ಪರೀಕ್ಷೆ ಬರೆದರು.

Advertisement

ಅಖೀಲ ಭಾರತ ಶಿಕ್ಷಣ ಉಳಿಸಿ
ಸಮಿತಿ (ಎಐಎಸ್‌ಇಸಿ) ಸ್ಥಳೀಯ ಘಟಕದ ವತಿಯಿಂದ ರವಿವಾರ ಪಟ್ಟಣದ ಸೇಂಟ್‌ ಅಂಬ್ರೂಸ್‌ ಕಾನ್ವೆಂಟ್‌ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ಗಣಿತ ವಿಷಯದ ಪೂರಕ ಪರೀಕ್ಷೆಯಲ್ಲಿ ಪಟ್ಟಣದ ಒಟ್ಟು 13 ಪ್ರೌಢಶಾಲೆಗಳ 607 ವಿದ್ಯಾರ್ಥಿಗಳು ತಮ್ಮ ಗಣಿತ ಜ್ಞಾನವನ್ನು ಓರೆಗೆ ಹಚ್ಚಿದರು. ಶಿಕ್ಷಣ ಇಲಾಖೆ ಪರವಾನಿಗೆಯೊಂದಿಗೆ ಪೊಲೀಸ್‌ ಭದ್ರತೆ ಹಾಗೂ ಸಿಸಿ ಕ್ಯಾಮೆರಾಗಳ ಮಧ್ಯೆ ನಡೆದ ಪೂರಕ ಪರೀಕ್ಷೆ, ಅತ್ಯಂತ ಪಾರದರ್ಶಕತೆಯಿಂದ ಕೂಡಿತ್ತು. 22 ಕೊಠಡಿಗಳು ಪರೀಕ್ಷೆಗೆ ಬಳಕೆಯಾದರೆ, ಇಬ್ಬರು ಪರೀಕ್ಷಾ ಮೇಲ್ವಿಚಾರಕರು, ಮತ್ತಿಬ್ಬರು ಜಾಗೃತ ದಳವಾಗಿ ಒಟ್ಟು 30 ಜನ ಶಿಕ್ಷಕರು ಸೇವೆ ಸಲ್ಲಿಸಿದರು. ಸೇಂಟ್‌ ಅಂಬ್ರೂಸ್‌ ಕಾನ್ವೆಂಟ್‌ ಶಾಲೆ ಮುಖ್ಯಶಿಕ್ಷಕಿ ಸಿಸ್ಟರ್‌ ತೆಕಲಾ ಮೇರಿ, ಸಿಸ್ಟರ್‌ ಸೆಲಿನ್‌ ಪರೀಕ್ಷೆಗಾಗಿ ಒಂದು ದಿನ ಇಡೀ ಶಾಲೆಯನ್ನೆ ಬಿಟ್ಟುಕೊಟ್ಟಿದ್ದರು. ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಸಂಚಾಲಕ, ಗಣಿತ ಶಿಕ್ಷಕ ಆರ್‌.ಕೆ. ವೀರಭದ್ರಪ್ಪ, ಎಸ್‌ ಎಸ್‌ಎಲ್‌ಸಿ ಪರೀಕ್ಷೆ ಎಂದರೆ ಬಹುತೇಕ ಮಕ್ಕಳು ಹೆದರುತ್ತಾರೆ.

ಅವರಲ್ಲಿ ಮಾನಸಿಕ ದೈರ್ಯ ತುಂಬಲು, ಪರೀಕ್ಷೆ ಭಯ ನಿವಾರಣೆ ಮಾಡಲು ಮತ್ತು ಪರೀಕ್ಷೆ ನಿಯಮಗಳ ತಿಳಿವಳಿಕೆ
ಮೂಡಿಸಲು ಪೂರಕ ಪರೀಕ್ಷೆ ನಡೆಸಲಾಗುತ್ತಿದೆ. ಭಯ ಮುಕ್ತವಾಗಿ ನಕಲು ರಹಿತ ಪರೀಕ್ಷೆ ಬರೆಸುವ ಉದ್ದೇಶ ಇದರ
ಹಿಂದಿದೆ. ಸರಕಾರ ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಒತ್ತಾಸೆಯೊಂದಿಗೆ ಶಿಕ್ಷಣ ಉಳಿಸಿ ಸಮಿತಿ ಇಂತಹ ಕಾರ್ಯಕ್ರಮ ರೂಪಿಸುತ್ತಿದೆ. ಅನೇಕ ಶಿಕ್ಷಕರು ಸಮಿತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ವಿವರಿಸಿದರು.

ಶಿಕ್ಷಣ ಉಳಿಸಿ ಸಮಿತಿ ಸ್ಥಳೀಯ ಸಂಚಾಲಕ ರಮೇಶ ಮಾಶಾಳಕರ, ಸಿಆರ್‌ಪಿ ಹೇಮಂತಕುಮಾರ ಬಿ.ಕೆ., ಶಿಕ್ಷಕರಾದ ಚಂದ್ರು, ರಾಘವೇಂದ್ರ, ಶರಣಬಸಪ್ಪ, ಶರಣು ದೋಶೆಟ್ಟಿ, ಸಾಯಬಣ್ಣ ನಾಟೀಕಾರ, ಶ್ರೀಶರಣ ಹೊಸಮನಿ,
ಮಲ್ಲಣ್ಣ ದಂಡಬಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next