ಬೆಂಗಳೂರು: ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚು ಸ್ಕ್ರೀನ್ ಸಿಗದಿದ್ದರಿಂದ ಮತ್ತು ಸಿಕ್ಕಿರುವ ಶೋಗಳು ಪ್ರೈಮ್ ಟೈಮ್ ಅಲ್ಲದ್ದರ ಹಿನ್ನೆಲೆಯಲ್ಲಿ “ಮಾಸ್ತಿಗುಡಿ’ ಚಿತ್ರತಂಡ ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ದುನಿಯಾ ವಿಜಯ್ ಅಭಿನಯದ “ಮಾಸ್ತಿಗುಡಿ’ ಚಿತ್ರ ಶುಕ್ರವಾರ ಬಿಡುಗಡೆಯಾಗುತ್ತಿದ್ದು, ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರಕ್ಕೆ ಕೆಲವೇ ಕೆಲವು ಸ್ಕ್ರೀನ್‌ಗಳು ಸಿಕ್ಕಿವೆ.
ಅವುಗಳು ಕೂಡ ಹೆಚ್ಚು ಮಂದಿ ಕೂರದ ಚಿಕ್ಕ ಸ್ಕ್ರೀನ್‌ಗಳು ಎಂದು “ಮಾಸ್ತಿಗುಡಿ’ ತಂಡ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ಚಿತ್ರದ ನಾಯಕ ವಿಜಯ್, ನಿರ್ದೇಶಕ ನಾಗಶೇಖರ್ ಮಂಡಳಿಗೆ ತೆರಳಿ, ತಮಗೆ ಹೆಚ್ಚು ಸ್ಕ್ರೀನ್ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ನಿರ್ದೇಶಕ ನಾಗಶೇಖರ್, “ಕರ್ನಾಟಕದಲ್ಲಿ ಕನ್ನಡಿಗರಿಗೇ ಆದ್ಯತೆ ಇಲ್ಲ.
ಸಿನಿಮಾ ಮಾಡಿ ಮಲ್ಟಿಪ್ಲೆಕ್ಸ್ ಗಳ ಮುಂದೆ ಕೈ ಕಟ್ಟಿ ನಿಂತುಕೊಳ್ಳುವ ಪರಿಸ್ಥಿತಿಯಿದೆ. ಕನ್ನಡ ಸಿನಿಮಾಗಳು ಬಿಡುಗಡೆಯಾದಾಗ ಅವುಗಳಿಗೆ ಕೊಡಬೇಕಾದ ಕನಿಷ್ಠ ಆದ್ಯತೆಯನ್ನೂ ಮಲ್ಟಿಪ್ಲೆಕ್ಸ್‌ಗಳು ಕೊಡುತ್ತಿಲ್ಲ. ಹಾಗಾಗಿ, ಮಂಡಳಿಗೆ ದೂರು ನೀಡಿದ್ದೇವೆ. ಹೆಚ್ಚು ಸ್ಕ್ರೀನ್ ದೊರಕಿಸಿಕೊಡುವ ವಿಶ್ವಾಸ ನಮಗಿದೆ’ ಎಂದು ಹೇಳಿದರು.
ಉದಯ್-ಅನಿಲ್ ಕುಟುಂಬಕ್ಕೆ ಮಾಸ್ತಿಗುಡಿ ಚಿತ್ರತಂಡ ನೆರವು: ಚಿತ್ರೀಕರಣದ ವೇಳೆ ದುರ್ಮರಣವನ್ನಪ್ಪಿದ ಸಹನಟ ಉದಯ್ ಕುಟುಂಬಕ್ಕೆ “ಮಾಸ್ತಿಗುಡಿ’ ಚಿತ್ರತಂಡ 20 ಲಕ್ಷ ರೂ.ಮೊತ್ತದ ಬಾಂಡ್ ನೀಡಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಉಪಸ್ಥಿತಿಯಲ್ಲಿ ಗುರುವಾರ ಉದಯ್ ಕುಟುಂಬಕ್ಕೆ ಬಾಂಡ್ ವಿತರಿಸಿದ್ದು, ಮಾಸಿಕ 20 ಸಾವಿರ ರೂ.ಬಡ್ಡಿ ಬರಲಿದೆ.
ಇದೇ ವೇಳೆ “ಉದಯವಾಣಿ’ಜತೆ ಮಾತನಾಡಿದ ನಟ ದುನಿಯಾ ವಿಜಯ್, ದುರಂತದಲ್ಲಿ ಸಾವನ್ನಪ್ಪಿದ ಅನಿಲ್ ಮತ್ತು ಉದಯ್ ಜೀವವನ್ನು ಮತ್ತೆ ತರಲು ಸಾಧ್ಯವಿಲ್ಲ. ಈ ಹಿಂದೆ ಎರಡೂ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಲಾಗಿತ್ತು.ಅಂತೆಯೇ, ಈಗ ಉದಯ್ ಕುಟುಂಬಕ್ಕೆ ನೀಡಲಾಗಿದೆ. ಅನಿಲ್ ಕುಟುಂಬಕ್ಕೂ 20 ಲಕ್ಷ ರೂ.ಮೌಲ್ಯದ ಬಾಂಡ್ ನೀಡಲಾಗುವುದು ಎಂದರು. ಇದೇ ವೇಳೆ ಸಾಹಸ ನಿರ್ದೇಶಕ ರವಿವರ್ಮಾ ಅವರು ಎರಡೂ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ 5 ಲಕ್ಷ ರೂ. ನೆರವು ನೀಡಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಕೆಲವು ಸಿನಿಮಾಗಳು ಮಲ್ಟಿಪ್ಲೆಕ್ಸ್ ಗಳಲ್ಲಿ ಚೆನ್ನಾಗಿ ಹೋಗುತ್ತಿದೆ. ಚೆನ್ನಾಗಿ ಹೋಗುತ್ತಿರುವ ಸಿನಿಮಾಗಳಿಗೆ ತೊಂದರೆ ಕೊಡಬಾರದು ಎಂಬ ನಿಯಮವಿರುವುದರಿಂದ ಹೆಚ್ಚು ಸ್ಕ್ರೀನ್‌ಗಳು ಸಿಗುತ್ತಿಲ್ಲ. ಈಗಾಗಲೇ ಮಲ್ಟಿಪ್ಲೆಕ್ಸ್‌ನವರ ಜತೆ ಮಾತುಕತೆ ನಡೆಸಿದ್ದೇವೆ. ಒಂದಷ್ಟು ಸ್ಕ್ರೀನ್‌ಗಳು ಸಿಗಲಿವೆ
-ಸಾ ರಾ ಗೋವಿಂದು, ವಾಣಿಜ್ಯ ಮಂಡಳಿ ಅಧ್ಯಕ್ಷ