Advertisement
ಜಿಲ್ಲೆಯಲ್ಲಿ ಕಳೆದ 47 ದಿನಗಳಿಂದ ನಿಷೇಧಾಜ್ಞೆ ಜಾರಿಯಲ್ಲಿದೆ. ಜಿಲ್ಲೆಗೆ ಮುಖ್ಯಮಂತ್ರಿ ಬಂದಾಕ್ಷಣ ನಿಷೇಧಾಜ್ಞೆಯನ್ನು ತೆಗೆಯಲಾಗುತ್ತಿದ್ದು, ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರತಿಭಟನೆ ಮಾಡುವ ಬಿಜೆಪಿಯವರನ್ನು ಮಾತ್ರ ಬಂಧಿಸಲಾಗುತ್ತಿದೆ. ಮುಖ್ಯಮಂತ್ರಿಯವರಿಗೆ ನಿಷೇಧಾಜ್ಞೆ ಅನ್ವಯಿಸುವುದಿಲ್ಲವೆ? ಅವರು ಹೇಗೆ ಸಮಾವೇಶ ನಡೆಸುತ್ತಾರೆ ಎಂದು ಪ್ರಶ್ನಿಸಿದರು. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಹಿಂದೂಗಳ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದು, ರಕ್ಷಣೆ ಸಿಗದೇ ಇದ್ದಲ್ಲಿ ಮತ್ತಷ್ಟು ಉಗ್ರ ಪ್ರತಿಭಟನೆ ಎದುರಿಸಬೇಕಾದೀತು. ಜಿಲ್ಲೆಯಲ್ಲಿ ಸಮಾಜಘಾತಕ ಮತ್ತು ಭೀತಿಕಾರಕ ಶಕ್ತಿಗಳಿಗೆ ಸರಕಾರವೇ ಕುಮ್ಮಕ್ಕು ನೀಡುತ್ತಿದೆ ಎಂದರು.
ಇದೇ ಸಂದರ್ಭ ಅಡಿಷನಲ್ ಎಸ್‌ಪಿ ವಿಷ್ಣುವರ್ಧನ್ ಅವರು ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಶಾಸಕ ಸುನಿಲ್ ಕುಮಾರ್ ಅವರಲ್ಲಿ ನಿಷೇಧಾಜ್ಞೆ ಇರುವುದರಿಂದ ಸ್ಥಳದಿಂದ ಪ್ರತಿಭಟನಕಾರರನ್ನು ತೆರಳಲು ಸೂಚಿಸುವಂತೆ ಮನವಿ ಮಾಡಿದರು. ಆದರೆ ಸಂಸದರು, ‘ನಾವು ಜೈಲ್ ಭರೋಗೂ ಸಿದ್ಧ’ ಎಂದು ತಿಳಿಸಿದರು. ಮೈಕ್ ಮೂಲಕ ಮತ್ತೂಮ್ಮೆ ಎಚ್ಚರಿಕೆ ಸಂದೇಶ ನೀಡಿದ ಐಜಿಪಿ ಹರಿಶೇಖರನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ಪ್ರತಿಭಟನಕಾರರನ್ನು ಬಂಧಿಸುವಂತೆ ಪೊಲೀಸ್ ಸಿಬಂದಿಗೆ ಸೂಚಿಸಿದರು. ಇದಕ್ಕೂ ಮುನ್ನ ಸಂದರ್ಭ ಎದುರಾದರೆ ಲಾಠೀಚಾರ್ಜ್ ನಡೆಸುವಂತೆಯೂ ಕ್ಷಿಪ್ರ ಕಾರ್ಯಾಚರಣೆ ಪಡೆಗೆ ಮೌಖೀಕ ಸೂಚನೆಯನ್ನು ನೀಡಲಾಗಿತ್ತು.
Related Articles
ವಶಕ್ಕೆ ಪಡೆದ ಕಾರ್ಯಕರ್ತರನ್ನು ಸುಮಾರು 20ಕ್ಕೂ ಅಧಿಕ ಸರಕಾರಿ ಬಸ್‌ಗಳಲ್ಲಿ ಪುತ್ತೂರು ನಗರ, ಗ್ರಾಮಾಂತರ, ಬೆಳ್ತಂಗಡಿ ಸ್ಟೇಶನ್‌ಗೆ ಕರೆದುಕೊಂಡು ಹೋಗಿ ಬಂಧನ ನಡೆಸಿ ಜಾಮೀನಿನಲ್ಲಿ ಬಿಡುಗಡೆ ಮಾಡಿದರು. ಕೆಲವರನ್ನು ಅರ್ಧ ದಾರಿಯಲ್ಲಿಯೇ ಬಿಡುವ ಮೂಲಕ ದೊಡ್ಡ ಸಂಖ್ಯೆಯಲ್ಲಿ ಬಂಧನ ನಡೆದಿಲ್ಲ ಎಂದು ಅಂಕಿ – ಅಂಶ ದಾಖಲೆಯಲ್ಲಿ ತೋರಿಸುವ ಯತ್ನವೂ ಪೊಲೀಸರಿಂದ ನಡೆಯಿತು.
Advertisement
ವಾಹನ ಸಂಚಾರಕ್ಕೆ ತಡೆಪ್ರತಿಭಟನೆಯ ಕಾವೇರುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಲುಗಡೆ ಮಾಡಿದ ಪೊಲೀಸರು ವಾಹನಗಳನ್ನು ಬದಲಿ ಮಾರ್ಗದಲ್ಲಿ ಕಳುಹಿಸಿದರು. ಸುಮಾರು 2 ತಾಸು ಕಾಲ ಹೆದ್ದಾರಿಯಲ್ಲಿ ವಾಹನ ನಿಲುಗಡೆ ಆಗಿತ್ತು. ಬಿ.ಸಿ. ರೋಡಿನಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಂಧಿತ ಪ್ರಮುಖರು
ಸಂಸದರಾದ ನಳಿನ್ ಕುಮಾರ್, ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಕಲ್ಲಡ್ಕ ಪ್ರಭಾಕರ ಭಟ್, ಜಿಲ್ಲಾ ಬಿಜೆಪಿ ಕೋಶಾಧ್ಯಕ್ಷ ಸಂಜಯ ಪ್ರಭು, ಪ್ರ. ಕಾರ್ಯದರ್ಶಿ ಬೃಜೇಶ್ ಚೌಟ, ರಾಜ್ಯ ಹಿಂದುಳಿದ ವರ್ಗಗಳ ಕಾರ್ಯದರ್ಶಿ ರವಿಚಂದ್ರ, ಮಂಗಳೂರು ನಗರ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್, ಜಿಲ್ಲಾ ಕಾರ್ಯ ಕಾರಿಣಿ ಸದಸ್ಯ ವಸಂತ ಪೂಜಾರಿ ಮತ್ತಿತರರು ಬಂಧನಕ್ಕೊಳಗಾದರು. ಜಿಲ್ಲೆಯಲ್ಲಿ ಹಿಂದೂ ಸಮಾಜದ ವ್ಯಕ್ತಿಗಳನ್ನೇ ಗುರಿಯಾಗಿಸಿಕೊಂಡು ಮತಾಂಧ ಶಕ್ತಿಗಳು ನಿರಂತರ ದಾಳಿ ನಡೆಸುತ್ತಿವೆ. ಕಾನೂನಿನ ಮೇಲಿನ ಗೌರವದಿಂದ ನಾವು ಈ ಹಿಂದೆ ನಡೆಸಬೇಕಿದ್ದ ಪ್ರತಿಭಟನೆ ಮುಂದೂಡಿದ್ದೇವೆ. ಆದರೆ ಇದೀಗ ಹಿಂದೂ ಸಮಾಜದ ತಾಳ್ಮೆಯ ಕಟ್ಟೆ ಒಡೆದಿದೆ. ಈ ನೋವು ತೋರ್ಪಡಿಸಲು ಪ್ರತಿಭಟನೆ ಅನಿವಾರ್ಯವಾಗಿದೆ. ರಾಜ್ಯದಲ್ಲಿ ಗೋಹತ್ಯೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಸರಕಾರವೇ ಪುಷ್ಟಿ ನೀಡುತ್ತಿದ್ದು, ಇದರ ವಿರುದ್ಧ ಹೋರಾಟ ನಿರಂತರವಾಗಿ ಮುನ್ನಡೆಯಬೇಕು.
– ಡಾ| ಪ್ರಭಾಕರ ಭಟ್ ಸುಮಾರು 20 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರತಿಭಟನಕಾರರನ್ನು ಇಲ್ಲಿಂದ ತೆರವು ಮಾಡಿದ್ದೇವೆ. ನೂರಾರು ಮಂದಿಯನ್ನು ಬಂಧಿಸಿ ದ್ದೇವೆ. ಸಿಬಂದಿ, ಕ್ಷಿಪ್ರ ಕಾರ್ಯಾಚರಣೆ ಪಡೆ ಮಾದರಿ ವಿಶೇಷ ತರಬೇತು ಹೊಂದಿದ ಪೊಲೀಸರ ಸಹಿತ 1 ಸಹಸ್ರ ಪೊಲೀಸರನ್ನು ಶಾಂತಿ ಸುವ್ಯವಸ್ಥೆಗೆ ತೊಡಗಿಸಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ನಿಭಾಯಿಸಿದ್ದೇವೆ.
– ಹರಿಶೇಖರನ್, ಪಶ್ಚಿಮ ವಲಯ ಐಜಿಪಿ ಸುಮಾರು ಎರಡು ಸಾವಿರ ಸಂಖ್ಯೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿದ್ದ ಕಾರ್ಯಕರ್ತರನ್ನು ಬಂಧಿಸಲು ಪೊಲೀಸರಲ್ಲಿ ಸಾಕಷ್ಟು ವಾಹನ ಇಲ್ಲದ ಕಾರಣಕ್ಕೆ ಬಂಧನವಾಗಿಲ್ಲ. ಬಂಧಿಸಿ ಬಸ್ಸಿನಲ್ಲಿ ಕೊಂಡುಹೋದ ಹಲವರನ್ನು ಅರ್ಧದಲ್ಲಿ ಇಳಿಸಿ ಹೋಗಿರುವ ಘಟನೆ ನಡೆದಿದೆ.
– ಬಿ. ದೇವದಾಸ ಶೆಟ್ಟಿ , ಕ್ಷೇತ್ರ ಬಿಜೆಪಿ ಅಧ್ಯಕ್ಷ