ಶಿವರಾಜಕುಮಾರ್ ಅಭಿನಯದ “ಮಾಸ್ ಲೀಡರ್’ ಚಿತ್ರವು ಆಗಸ್ಟ್ 11ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರದ ಬಿಡುಗಡೆ ಆಗದಂತೆ ನಿರ್ದೇಶಕ ಎ.ಎಂ.ಆರ್. ರಮೇಶ್ ಅವರು ತಡೆಯಾಜ್ಞೆ ತಂದಿದ್ದಾರೆ. ಈ ಹಿಂದೆ, “ಲೀಡರ್’ ಚಿತ್ರದ ಶೀರ್ಷಿಕೆ ವಿಷಯವಾಗಿ ಚಿತ್ರತಂಡದವರು ಮತ್ತು ರಮೇಶ್ ಮಧ್ಯೆ ಸಾಕಷ್ಟು ಜಟಾಪಟಿಯಾಗಿತ್ತು.
ಎ.ಎಂ.ಆರ್. ರಮೇಶ್ ಅವರು ತಮ್ಮ ತಂಡದವರೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿದ್ದರು. ಆ ನಂತರ ಪ್ರಕರಣ ತಣ್ಣಗಾಯಿತು ಎನ್ನುವಷ್ಟರಲ್ಲಿ, ಮತ್ತೆ ಭುಗಿಲೆದ್ದಿದೆ. ಇಷ್ಟಕ್ಕೂ ರಮೇಶ್ ಅವರು ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ತಂದಿದ್ದೇಕೆ ಎಂದರೆ, ತಮ್ಮನ್ನು ಕೆಣಕಿದರು ಎನ್ನುತ್ತಾರೆ ಅವರು. “ನಾನು “ಲೀಡರ್’ ಎಂಬ ಹೆಸರನ್ನು 2011ರಲ್ಲೇ ಮಂಡಳಿಯಲ್ಲಿ ದಾಖಲಿಸಿದ್ದೆ.
ಆ ನಂತರ ಪ್ರತಿ ವರ್ಷ ನವೀಕರಣ ಮಾಡುತ್ತಿದ್ದೆ. ಆದರೂ ಅದೇ ಹೆಸರನ್ನು ಇಟ್ಟು ಚಿತ್ರ ಶುರು ಮಾಡಿದರು. ಈಗ ಯಾರದೋ ಜಾಗದಲ್ಲಿ ಮನೆ ಕಟ್ಟುವುದಕ್ಕೆ ಸಾಧ್ಯವಾ? ಇಲ್ಲ ತಾನೆ. ಹಾಗೆಯೇ ಟೈಟಲ್ ನನ್ನ ಹೆಸರಿನಲ್ಲಿದೆ. ಹಾಗಿರುವಾಗ ಆ ಹೆಸರಿನಲ್ಲಿ ಬೇರೆಯವರು ಚಿತ್ರ ಮಾಡೋದಕ್ಕೆ ಹೇಗೆ ಸಾಧ್ಯ? ಈ ಕುರಿತು ಮಂಡಳಿಗೆ ಪತ್ರ ಬರೆದೆ. ಯಾವುದೇ ಉತ್ತರ ಬರಲಿಲ್ಲ.
ಈ ಕುರಿತು ಕೇಳಿದರೆ, ಲಿಖೀತ ದೂರು ಕೊಡಿ ಎಂದರು. ಲಿಖೀತ ದೂರು ಕೊಟ್ಟೆ. ಆಗ ಆ ಚಿತ್ರದ ನಿರ್ಮಾಪಕ ತರುಣ್ ಅವರನ್ನು ಮಂಡಳಿಗೆ ಕರೆಯಲಾಯಿತು. ಆದರೆ, ತರುಣ್ ಬರಲೇ ಇಲ್ಲ. ಆ ನಂತರ ಸಮಸ್ಯೆ ಬಗೆಹರಿಸುವಂತೆ ಆರು ಪತ್ರಗಳನ್ನು ಬರೆದೆ. ಪ್ರತಿಭಟನೆಯನ್ನೂ ಮಾಡಿದೆ. ಯಾರೂ ಸರಿಯಾಗಿ ಸ್ಪಂದಿಸಲಿಲ್ಲ. ಏನು ಬೇಕೋ ಅದನ್ನು ಮಾಡಿಕೋ ಅಂತ ಎಲ್ಲರೂ ಸುಮ್ಮನಾದರು.
ನನ್ನನ್ನು ಸಾಕಷ್ಟು ಕೆಣಗಿದರು. ನಿಜ ಹೇಳಬೇಕೆಂದರೆ, ನ್ಯಾಯಾಲಯಕ್ಕೆ ಹೋಗಿರುವುದು ನನ್ನ ಪತ್ನಿ ಇಂದುಮತಿ. ಒಂದು ಹಂತದಲ್ಲಿ ನಾನು ಸುಮ್ಮನಾದೆ. ಆಕೆ ಸುಮ್ಮನಾಗಲಿಲ್ಲ. ಚಿತ್ರದ ನಿರ್ಮಾಪಕರಾಗಿ ಹಣ ಖರ್ಚು ಮಾಡಿದ್ದು ಆಕೆ. 30 ಲಕ್ಷವನ್ನ ನೀವು ಕೊಡ್ತೀರಾ ಎಂದು ಕೇಳಿದರು. ಕೊನೆಗೆ ನ್ಯಾಯಾಲಯಕ್ಕೆ ಹೋದರು. ಈಗ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೊಟ್ಟಿದೆ.
ಅದರ ಪ್ರಕಾರ, ಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ’ ಎನ್ನುತ್ತಾರೆ ರಮೇಶ್. ಈ ಕುರಿತು “ಮಾಸ್ ಲೀಡರ್’ ಚಿತ್ರದ ನಿರ್ಮಾಪಕ ತರುಣ್ ಶಿವಪ್ಪ ಅವರನ್ನು ಸಂಪರ್ಕಿಸಿದರೆ, ಈ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎನ್ನುತ್ತಾರೆ. “ನ್ಯಾಯಾಲಯದಿಂದ ಬಿಡುಗಡೆ ನಿಲ್ಲಿಸುವಂತೆ ಯಾವುದೇ ಪತ್ರ ಬಂದಿಲ್ಲ. ಹಾಗಾಗಿ ಮಾತನಾಡುವುದು ಸಮಂಜಸವಲ್ಲ. ಪತ್ರ ಬಂದ ನಂತರ ಮಾತನಾಡುತ್ತೇನೆ’ ಎನ್ನುತ್ತಾರೆ ತರುಣ್.