ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಸೋಮವಾರ(ಅ28) ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಬರಾಹಿತ್(ಎಸ್ ಟಿ ಮೀಸಲು) ಕ್ಷೇತ್ರದಿಂದ ಗಮ್ಲಿಯೆಲ್ ಹೆಂಬ್ರೋಮ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಹೆಂಬ್ರೋಮ್ 2019 ರ ವಿಧಾನಸಭಾ ಚುನಾವಣೆಯಲ್ಲಿ AJSU(All Jharkhand Students Union) ಪಕ್ಷದ ಟಿಕೆಟ್‌ನಲ್ಲಿ ಬರ್ಹೈತ್‌ನಿಂದ ಸ್ಪರ್ಧಿಸಿದ್ದರು ಮತ್ತು 2,573 ಮತಗಳನ್ನು ಪಡೆದು ನಾಲ್ಕನೇ ಸ್ಥಾನವನ್ನು ಪಡೆದಿದ್ದರು.
ತುಂಡಿ ಕ್ಷೇತ್ರದಿಂದ ವಿಕಾಶ್ ಮಹ್ತೊ ಅವರ ಉಮೇದುವಾರಿಕೆಯನ್ನೂ ಬಿಜೆಪಿ ಘೋಷಿಸಿದೆ. ಸಾಹಿಬ್‌ಗಂಜ್ ಜಿಲ್ಲೆಯ ಬರ್ಹೈತ್ (ಎಸ್‌ಟಿ) ಕ್ಷೇತ್ರದ ಹಾಲಿ ಶಾಸಕ ಹೇಮಂತ್ ಸೊರೇನ್ ಅವರು 2019 ರಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸೈಮನ್ ಮಾಲ್ಟೊ ಅವರ ವಿರುದ್ಧ 25,740 ಮತಗಳ ಅಂತರದಿಂದ ಜೆಎಂಎಂ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟ ಸ್ಥಾನವನ್ನು ಗೆದ್ದಿದ್ದರು. ಹೇಮಂತ್ 73,725 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಸೈಮನ್ ಮಾಲ್ಟೊ 47,985 ಮತ ಪಡೆದಿದ್ದರು.
ಡಿಸೆಂಬರ್ 2019 ರ ವಿಧಾನಸಭಾ ಚುನಾವಣೆಯಲ್ಲಿ ಸೊರೆನ್ ದುಮ್ಕಾ ಮತ್ತು ಬರಾಹಿತ್ ಎರಡನ್ನೂ ಗೆದ್ದಿದ್ದರು, ಬರಾಹಿತ್ ಉಳಿಸಿಕೊಂಡಿದ್ದರು.
ಬಿಜೆಪಿ ಅಕ್ಟೋಬರ್ 19 ರಂದು ವಿಧಾನಸಭಾ ಚುನಾವಣೆಗೆ 66 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ರಾಜ್ಯದ ಒಟ್ಟು 81 ವಿಧಾನಸಭಾ ಸ್ಥಾನಗಳ ಪೈಕಿ 68 ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸುತ್ತಿದ್ದು, ಉಳಿದವುಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದೆ.ಜೆಎಂಎಂ 81 ಸ್ಥಾನಗಳ ಪೈಕಿ 43 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. 2019ರ ಚುನಾವಣೆಯಲ್ಲಿ ಜೆಎಂಎಂ ಸ್ಪರ್ಧಿಸಿದ್ದ 43 ಸ್ಥಾನಗಳಲ್ಲಿ 30ರಲ್ಲಿ ಗೆದ್ದು ಐದು ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆದಿತ್ತು.
81 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.