“ಸಿನಿಮಾ ಅನೌನ್ಸ್ ಮಾಡಿರುವ ಡೇಟ್‌ಗೆ ರಿಲೀಸ್ ಮಾಡೇ ಮಾಡ್ತೀನಿ. ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ಡೇಟ್ ಮುಂದೆ ಹೋಗಲ್ಲ. ಆಗಸ್ಟ್ 11 ರಂದು ಚಿತ್ರ ಬಿಡುಗಡೆಯಾಗೋದು ಕನ್ಫರ್ಮ್ …’ ಹೀಗೆ ಹೇಳಿದ್ದು ನಿರ್ಮಾಪಕ ತರುಣ್ ಶಿವಪ್ಪ. ಅವರು ಹೇಳಿಕೊಂಡಿದ್ದು, ತಮ್ಮ ನಿರ್ಮಾಣದ “ಮಾಸ್ ಲೀಡರ್’ ಕುರಿತು. ಕಳೆದ ಮೂರು ದಿನಗಳ ಹಿಂದೆ ನಿರ್ದೇಶಕ-ನಿರ್ಮಾಪಕ ಎ.ಎಂ.ಆರ್. ರಮೇಶ್ ಅವರು, “ಮಾಸ್ ಲೀಡರ್’ ಚಿತ್ರ ಬಿಡುಗಡೆಗೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.
ಶಿವರಾಜಕುಮಾರ್ ಅಭಿನಯದ ಚಿತ್ರವೊಂದಕ್ಕೆ ಬಿಡುಗಡೆಯ ದಿನಾಂಕ ಗೊತ್ತಾಗಿ, ನಿಗದಿತ ದಿನದಂದು ಬಿಡುಗಡೆಯಾಗದೇ ಇರುವ ಉದಾಹರಣೆಯೇ ಇದುವರೆಗೂ ಇಲ್ಲ. ಈಗ “ಮಾಸ್ ಲೀಡರ್’ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಇರುವುದರಿಂದ, ಚಿತ್ರ ಆ ದಿನ ಬಿಡುಗಡೆಯಾಗುವುದು ಅನುಮಾನ ಎಂಬ ಸುದ್ದಿ ಹರಡಿತ್ತು. ಈ ಕುರಿತು ಆ ಚಿತ್ರದ ನಿರ್ಮಾಪಕ ತರುಣ್ ಶಿವಪ್ಪ ಅವರ ಪ್ರತಿಕ್ರಿಯೆ ಕೇಳಿದಾಗ, ತಮಗೆ ನ್ಯಾಯಾಲಯದಿಂದ ಯಾವುದೇ ನೋಟೀಸ್ ಬಂದಿಲ್ಲ ಎಂದು ಹೇಳಿದ್ದರು.
ಶುಕ್ರವಾರ ಬೆಳಿಗ್ಗೆ ಅವರಿಗೆ ನೋಟೀಸ್ ಸಿಕ್ಕಿದೆ. ಆದಷ್ಟು ಬೇಗ ಇದಕ್ಕೊಂದು ಪರಿಹಾರ ಕಂಡುಕೊಂಡು, ಚಿತ್ರವನ್ನು ಆಗಸ್ಟ್ 11ರಂದೇ ಬಿಡುಗಡೆ ಮಾಡುವುದಕ್ಕೆ ಅವರು ತೀರ್ಮಾನಿಸಿದ್ದಾರೆ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅವರು, “ನನಗೆ ಶುಕ್ರವಾರ ನ್ಯಾಯಾಲಯದ ತಡೆಯಾಜ್ಞೆ ಪ್ರತಿ ಸಿಕ್ಕಿದೆ. ನಾನು ನಮ್ಮ ವಕೀಲರ ಜೊತೆ ಚರ್ಚಿಸಿ, ಕಾನೂನು ಬದ್ಧವಾಗಿಯೇ ಹೋರಾಡುತ್ತೇನೆ. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆ ಮುಂದಕ್ಕೆ ಹೋಗುವುದಿಲ್ಲ.
ಆಗಸ್ಟ್ 11 ರಂದು ಬಿಡುಗಡೆ ಮಾಡುವುದಾಗಿ ಹೇಳಿದ್ದೇವೆ. ಅದೇ ದಿನಾಂಕದಂದೇ ಚಿತ್ರ ರಿಲೀಸ್ ಮಾಡೋದು ಹಂಡ್ರೆಡ್ ಪರ್ಸೆಂಟ್ ನಿಜ’ ಎನ್ನುತ್ತಾರೆ ತರುಣ್ ಶಿವಪ್ಪ. “ಇಷ್ಟಕ್ಕೂ ಎ.ಎಂ.ಆರ್.ರಮೇಶ್ ತಡೆಯಾಜ್ಞೆ ತಂದಿರೋದು ಯಾವ ಉದ್ದೇಶಕ್ಕೆ ಅಂತಾನೇ ಗೊತ್ತಿಲ್ಲ. ಅವರು ನಮ್ಮ ಸಿನಿಮಾದ ಪಾಟ್ನìರ್ ಅಲ್ಲ, ವಿತರಕರೂ ಅಲ್ಲ. ಅವರಿಗೆ ನಾವು ಯಾವ ಮೋಸವನ್ನೂ ಮಾಡಿಲ್ಲ. ಅಷ್ಟಕ್ಕೂ ಶೀರ್ಷಿಕೆ ನಮ್ಮದು ಅಂತ ಹೇಳಿಕೊಂಡು ತಡೆಯಾಜ್ಞೆ ತಂದಿದ್ದಾರೆ. ನಮಗೆ ಕರ್ನಾಟಕ ವಾಣಿಜ್ಯ ಮಂಡಳಿಯಿಂದಲೇ ಆ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ಮಾಡಲು ಅನುಮತಿ ಸಿಕ್ಕಿದೆ.
ಅದರಲ್ಲೂ ನಾವು “ಲೀಡರ್’ ಅಂತ ಇಟ್ಟುಕೊಂಡು ಸಿನಿಮಾ ಮಾಡ್ತೀವಿ ಅಂದಾಗ, “ಲೀಡರ್’ ನಮ್ಮ ಶೀರ್ಷಿಕೆ ಎಂಬ ತಕರಾರು ತೆಗೆದಿದ್ದರು. ಕೊನೆಗೆ ಬರಹಗಾರ ಅಜಯ್‌ಕುಮಾರ್ ಅವರ ಬಳಿ “ಮಾಸ್ ಲೀಡರ್’ ಶೀರ್ಷಿಕೆ ಇತ್ತು. ಅವರೇ ಶಿವರಾಜ್‌ಕುಮಾರ್ ನಟಿಸುತ್ತಿದ್ದಾರೆ ಅಂತ ತಿಳಿದು, ನಮ್ಮ “ಮಾಸ್ ಲೀಡರ್’ ಶೀರ್ಷಿಕೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿ ಅಂತ ಬಿಟ್ಟುಕೊಟ್ಟಿದ್ದರು. ಆ ವಿಷಯ ಎಲ್ಲರಗೂ ಗೊತ್ತು. ರಮೇಶ್ ಅವರಿಗೆ ಗೊತ್ತಿದ್ದರೂ, ಈಗ ಚಿತ್ರ ಬಿಡುಗಡೆಗೆ ರೆಡಿಯಾದಾಗ, ಹೀಗೆ ಮಾಡಿದ್ದಾರೆ.
ಆ ಶೀರ್ಷಿಕೆ ಇಟ್ಟುಕೊಂಡು ನಾವು ಮೂರು ವರ್ಷದಿಂದಲೂ ನವೀಕರಿಸುತ್ತಲೇ ಬಂದಿದ್ದೇವೆ. ಆದರೆ, ಇಷ್ಟು ದಿನ ಸುಮ್ಮನಿದ್ದು, ರಿಲೀಸ್ ಬಂದಾಗ ಈ ರೀತಿ ಮಾಡಿರುವ ಉದ್ದೇಶವಾದರೂ ಏನು? ಈ ಹಿಂದೆ “ಲೀಡರ್’ ಚಿತ್ರಕ್ಕಾಗಿ 15 ಲಕ್ಷ ರೂ. ಖರ್ಚು ಮಾಡಿದ್ದೇವೆ ಎಂದಿದ್ದರು. ಮೊನ್ನೆ, 30 ಲಕ್ಷ ಖರ್ಚು ಮಾಡಿದ್ದೇವೆ ಎಂದಿದ್ದಾರೆ. ಇನ್ನು ಸ್ವಲ್ಪ ದಿನ ಬಿಟ್ಟರೆ, ಎಷ್ಟು ಹೇಳ್ತಾರೋ ಗೊತ್ತಿಲ್ಲ ಎಂದು ಹೇಳುವ ತರುಣ್ ಶಿವಪ್ಪ, ಚಿತ್ರ ಆಗಸ್ಟ್ 11 ಕ್ಕೆ ರಿಲೀಸ್ ಆಗೋದು ಕನ್‌ಫರ್ಮ್ ಎಂದು ಸ್ಪಷ್ಟಪಡಿಸುತ್ತಾರೆ.