Advertisement

ಮಸೂದ್‌ ಪ್ರಕರಣಕ್ಕೆ ಶೀಘ್ರ ತೆರೆ : ಚೀನಾ ಭರವಸೆ

09:44 AM Mar 17, 2019 | Karthik A |

ನವದೆಹಲಿ: ಉಗ್ರ ಅಜ್ಹರ್‌ ಮಸೂದ್‌ ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಪ್ರಯತ್ನಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಡ್ಡಗಾಲು ಹಾಕಿದ ಚೀನಾ ಇದೀಗ ತನ್ನ ರಾಗ ಬದಲಿಸಿದ್ದು ಈ ವಿಚಾರ ಶೀಘ್ರದಲ್ಲಿಯೇ ಬಗೆಹರಿಯಲಿದೆ ಎಂಬ ವಿಶ್ವಾಸವನ್ನು ಭಾರತದಲ್ಲಿ ಚೀನಾ ರಾಯಭಾರಿಯಾಗಿರುವ ಲೂ ಝಹೋಯ್‌ ಅವರು ವ್ಯಕ್ತಪಡಿಸಿದ್ದಾರೆ.

Advertisement

‘ಜೈಶ್‌ ಮುಖ್ಯಸ್ಥ ಮಸೂದ್‌ ವಿಚಾರವಾಗಿ ಭಾರತ ಹೊಂದಿರುವ ಅಭಿಪ್ರಾಯವನ್ನು ಚೀನಾವು ಅರ್ಥಮಾಡಿಕೊಳ್ಳುತ್ತದೆ ಮತ್ತು ಈ ವಿಚಾರ ಶೀಘ್ರದಲ್ಲಿಯೇ ಬಗೆಹರಿಯುತ್ತೆ ಎಂಬ ವಿಶ್ವಾಸವೂ ನಮಗಿದೆ ಮಾತ್ರವಲ್ಲದೆ ಈ ವಿಚಾರವಾಗಿ ಭಾರತ ಪ್ರತಿಪಾದಿಸುವ ಅಂಶವನ್ನು ಚೀನಾ ಸಂಪೂರ್ಣವಾಗಿ ನಂಬುತ್ತದೆ’ ಎಂದವರು ಹೇಳಿದ್ದಾರೆ. ವಿಶ್ವಸಂಸ್ಥೆಯಲ್ಲಿ ಇದೀಗ ಆಗಿರುವುದು ಕೇವಲ ಒಂದು ತಾಂತ್ರಿಕ ಅಡ್ಡಿಯಷ್ಟೇ, ಈ ವಿಚಾರದಲ್ಲಿ ಇನ್ನಷ್ಟು ಮಾತುಕತೆಗಳು ನಡೆಯಲಿದೆ ಮತ್ತು ನನ್ನನ್ನು ನಂಬಿ ಈ ವಿಚಾರ ಖಂಡಿತವಾಗಿಯೂ ಬಗೆಹರಿಯುತ್ತದೆ ಎಂದು ಝೂಹೋಯ್‌ ಅವರು ತಿಳಿಸಿದ್ದಾರೆ. ಚೀನಾ ರಾಯಭಾರಿಯ ಈ ಹೇಳಿಕೆ ರಾಜಕೀಯ ವಲಯದಲ್ಲಿ ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಮಸೂದ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಭಾರತದ ನಿರ್ಧಾರಕ್ಕೆ ಅಮೆರಿಕಾ, ಫ್ರಾನ್ಸ್‌, ಇಂಗ್ಲಂಡ್‌ ಬೆಂಬಲ ಸೂಚಿಸಿದರೂ ಪಾಕಿಸ್ಥಾನದ ಮಿತ್ರರಾಷ್ಟ್ರ ಚೀನಾ ಮಾತ್ರ ಇದನ್ನು ವಿರೋಧಿಸುವ ಮೂಲಕ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿತ್ತು. ಇದು ಚೀನಾ ವಿರುದ್ಧ ಭಾರತದಾದ್ಯಂತ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು. ಮಾತ್ರವಲ್ಲದೇ ಚೀನಾ ವಸ್ತುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಹಿಷ್ಕರಿಸಬೇಕೆಂಬ ಕೂಗೂ ಸಹ ಸಾಮಾಜಿಕ ವಲಯದಲ್ಲಿ ಬಲವಾಗಿ ಎದ್ದಿತ್ತು. ಈ ಎಲ್ಲಾ ವಿಚಾರಗಳಿಂದ ಜಾಗೃತಗೊಂಡಿರುವ ಚತುರ ಚೀನಾ ಇದೀಗ ಭಾರತದ ಪರ ಬ್ಯಾಟಿಂಗ್‌ ಮಾಡುವ ಮೂಲಕ ತನ್ನ ವ್ಯಾಪಾರ ಬುದ್ಧಿಯನ್ನು ಪ್ರದರ್ಶಿಸುತ್ತಿದೆಯೇ ಎಂಬ ಅನುಮಾನವೂ ಕೂಡ ಕಾಡಲಾರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next