ಬೆಂಗಳೂರು: ನಗರದ ಮಾರುಕಟ್ಟೆಗಳಲ್ಲಿ ಭಾನುವಾರವೂ ದೀಪಾವಳಿ ಹಬ್ಬದ ಖರೀದಿ ಕಳೆ ಕಂಡು ಬಂತು. ಬನಶಂಕರಿ, ಜಯನಗರ, ಮಲ್ಲೇಶ್ವರ, ಯಶವಂತಪುರ, ಕೆ.ಆರ್.ಪುರ, ಕಲಾಸಿಪಾಳ್ಯ, ಗಾಂಧೀ ಬಜಾರ್ ಸೇರಿದಂತೆ ಇನ್ನಿತರ ಮಾರುಕಟ್ಟೆ ಗಳಲ್ಲಿ ಜನರು ಖರೀದಿ ಪ್ರಕ್ರಿಯೆಲ್ಲಿ ತೊಡಗಿದ್ದರು.
ಕೆ.ಆರ್.ಮಾರುಕಟ್ಟೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಮರೆತು ಗ್ರಾಹಕರು ಖರೀದಿಯಲ್ಲಿ ತೊಡಗಿದ್ದುಕಂಡು ಬಂತು. ಹಬ್ಬದ ಹಿನ್ನೆಲೆಯಲ್ಲಿ ಕೆಲವು ಹೂವುಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಬೇಡಿಕೆ ಕಂಡು ಬಂದಿದೆ. ಕನಕಾಂಬರ ಹೂವು ಕೆ.ಜಿ ಗೆ 1600 ರೂ. ದಿಂದ 1800 ರೂ. ವರೆಗೂ ಮಾರಾಟವಾಯಿತು. ಹಾಗೆಯೇ ಉತ್ತಮ ಗುಣಮಟ್ಟದ ಮಲ್ಲಿಗೆ ಹೂವು 1500 ರಿಂದ1600 ರೂ. ವರೆಗೆಖರೀದಿ ಆಯಿತು.
ಸುಗಂಧರಾಜ ಬಿಡಿ ಹೂವು ಕೆ.ಜಿ. 40 ರಿಂದ 80 ರೂ. ಸೇವಂತಿಗೆ ಬಿಡಿ ಹೂವು 80 ರೂ. ಕೆಂಪು ಗುಲಾಬಿ 80 ರೂ.ಗೆ ಗ್ರಾಹಕರು ಖರೀದಿಸಿದರು. ಹಾಗೆಯೇ ಬಿಡಿ ಚಂಡು ಹೂವು ಕೆ.ಜಿ.50 ರೂ. ಮಲ್ಲಿಗೆ ದಿಂಡು 50 ರೂ.ಕನಕಾಂಬರ ಹೂವು ಮಾರಿಗೆ 120 ರೂ.ಗೆ ಮಾರಾಟವಾಯಿತು. ಸೇವಂತಿಗೆ ಹೂವು ಮಾರಿಗೆ 60 ರೂ. ಸೇವಂತಿಗೆ ಹಾರ 50ರೂ. ಸುಗಂಧರಾಜ ಹಾರ 60-70ರೂ.ಗೆ ಖರೀದಿಯಾಯಿತು. ಜೋಡಿ ಕಬ್ಬು 120 ರೂ.ಬಾಳೆ80ರೂ.ಗೆ ಮಾರಾಟವಾಯಿತು.
ಕಳೆದ ಬಾರಿಗೆ ಹೋಲಿಕೆ ಮಾಡಿ ನೋಡಿದಾಗ ಈ ಸಲ ಅಷ್ಟೊಂದು ಪ್ರಮಾಣದ ವ್ಯಾಪಾರ ಇಲ್ಲ. ಆದರೆ ಅನ್‌ಲಾಕ್ ನಂತರ ದಿನಗಳಿಗೆ ಹೋಲಿಕೆಮಾಡಿ ನೋಡಿದರೆ ಕಳೆದೆರಡು ದಿನಗಳಿಂದ ಉತ್ತಮವಾಗಿ ಹೂವಿನ ವ್ಯಾಪಾರ ನಡೆದಿದೆ ಎಂದು ಹೂವಿನ ವ್ಯಾಪಾರಿ ಪೆರುಮಾಳ್ ಹೇಳಿದರು.
ಹಾಗೆಯೇ ಸೇಬು ಹಣ್ಣು ಕೆ.ಜಿ ಗೆ 80-100 ರೂ.ಕಿತ್ತಳೆ 60 ರೂ. ಮೊಸಂಬಿ 100 ರೂ. ಏಲಕ್ಕಿ ಬಾಳೆ ಹಣ್ಣು 40ರೂ.ಗೆ ಖರೀದಿ ಆಯಿತು. ಹಾಗೆ ಬೀನ್ಸ್ , ಬೆಂಡೆ ಕಾಯಿ ಕೆ.ಜಿ. 20 ರೂ, ಈರುಳ್ಳಿ ಕೆ.ಜಿ. 60 ರೂ ಗೆ ಮಾರಾಟವಾಯಿತು. ದಸರಾಕ್ಕೆ ಹೋಲಿಕೆ ಮಾಡಿದಾಗ ಈಗ ತರಕಾರಿ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಕಲಾಸಿಪಾಳ್ಯ ಹಣ್ಣು – ತರಕಾರಿ ಸಗಟು ಮಾರಾಟಗಾರರ ಸಂಘದ ಅಧ್ಯಕ್ಷ ಆರ್.ವಿ.ಗೋಪಿ ಹೇಳಿದರು.
ಭಿನ್ನ ಶೈಲಿಯ ಹಣತೆ ಖರೀದಿ: ಈಗಾಗಲೇ ಮಾರುಕಟ್ಟೆಯಲ್ಲಿ ಭಿನ್ನಶೈಲಿಯ ವಿವಿಧ ರೀತಿಯ ಹಣತೆಗಳು ಲಭ್ಯವಿವೆ. ಕುಬೇರ ದೀಪ,ಲಕ್ಷ್ಮೀ ದೀಪ, ಗೌರಿ-ಗಣೇಶ ದೀಪ, ಪಂಚಮುಖ ದೀಪ ಸೇರಿದಂತೆ ಹಲವು ಶೈಲಿಯ ದೇಶಿಯ ಹಣತೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ದೀಪಾವಳಿ ಮತ್ತು ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಮಹಿಳೆಯರು ಹಣತೆ ಖರೀದಿಸಿದರು.
ಕಳೆದ ಎರಡ್ಮೂರು ದಿನಗಳಲ್ಲಿ ಹೂವಿನ ವ್ಯಾಪಾರ ಉತ್ತಮವಾಗಿ ನಡೆಯಿತು. ಗ್ರಾಹಕರು ಕೂಡ ಹಬ್ಬದ ಹಿನ್ನೆಲೆಯಲ್ಲಿ ಹಲವು ರೀತಿಯ ಹೂವುಗಳನ್ನುಖರೀದಿಸಿದರು. ಅನ್ ಲಾಕ್ ನಂತರಹೂವಿನ ವ್ಯಾಪಾರದಲ್ಲಿ ಚೇತರಿಕೆಕಂಡುಬಂದಿದೆ.
– ಮಂಜುನಾಥ್ , ಹೂವಿನ ವ್ಯಾಪಾರಿ ಕೆ.ಆರ್.ಮಾರುಕಟ್ಟೆ