Advertisement
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ ಅಚಾಪುರ ಗ್ರಾಮದ 68 ವರ್ಷದ ಮಹಿಳೆ ಫೆಬ್ರವರಿ ಕೊನೆಯಲ್ಲಿ ಮೆಕ್ಕಾ ಮದೀನಕ್ಕೆ ತೆರಳಿದ್ದರು. ಆಗ ಉಸಿರಾಟದ ಸಮಸ್ಯೆ ಎದುರಾಗಿದ್ದು, ಸೌದಿ ಆಸ್ಪತ್ರೆಯಲ್ಲಿ ಜ್ವರ-ಕಫ ಮತ್ತು ಶೀತಕ್ಕೆ ಚಿಕಿತ್ಸೆ ಪಡೆದುಕೊಂಡು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿ ತಪಾಸಣೆಯ ಬಳಿಕ ಶಿವಮೊಗ್ಗಕ್ಕೆ ತೆರಳಿದ್ದರು. ಅಲ್ಲಿ ಮತ್ತೆ ಉಸಿರಾಟ ಸಮಸ್ಯೆ ಕಾಡಿದ್ದು, ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು. ಸಮಸ್ಯೆ ಉಲ್ಬಣಿಸಿದ ಹಿನ್ನೆಲೆಯಲ್ಲಿ ಬುಧವಾರ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಸಹಾಯಕನಾಗಿ ಬಂದಿರುವ ವ್ಯಕ್ತಿಯನ್ನು ಜನರ ಗುಂಪಿನಿಂದ ದೂರ ಇರಿಸಲಾಗಿದೆ.
ಮಹಿಳೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಕಲೆ ಹಾಕಲು ಉಡುಪಿ ಜಿಲ್ಲಾ ಸರ್ವೇಕ್ಷಣ ವಿಭಾಗದ ತಂಡ ಅಚಾಪುರ ಗ್ರಾಮಕ್ಕೆ ತೆರಳಲಿದೆ. ಶಂಕಿತ ಮಹಿಳೆಯ ಗಂಟಲ ದ್ರವವನ್ನು ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಎರಡು ದಿನಗಳಲ್ಲಿ ವರದಿ ಕೈಸೇರಲಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ.
– ಡಾ| ಸುಧೀರ್‌ಚಂದ್ರ ಸೂಡ,
ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ