ಮಂಗಳೂರು: ಇಂಟರ್‌ನ್ಯಾಶನಲ್ ಸಂಸ್ಥೆಯ ಬ್ಯಾನರಿನಡಿ ಸಿದ್ಧಗೊಂಡ, ಮಂಗಳೂರು ಮೂಲದ ದುಬಾೖಯ ಉದ್ಯಮಿ ಹರೀಶ್ ಶೇರಿಗಾರ್ -ಶರ್ಮಿಳಾ ದಂಪತಿ ನಿರ್ಮಾಣದ, ಕೂಡ್ಲು ರಾಮಕೃಷ್ಣ ನಿರ್ದೇಶನದ ಬಹುನಿರೀಕ್ಷಿತ ಕನ್ನಡ ಚಿತ್ರ “ಮಾರ್ಚ್ 22′ ಗಣೇಶ ಚತುರ್ಥಿಯ ದಿನವಾದ ಶುಕ್ರವಾರ ರಾಜ್ಯಾದ್ಯಂತ ತೆರೆಕಂಡಿತು.
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಉಡುಪಿ, ಉತ್ತರ ಕನ್ನಡ ಹಾಗೂ ದ.ಕ. ಜಿಲ್ಲೆ ಸೇರಿ ರಾಜ್ಯದೆಲ್ಲೆಡೆ ಚಿತ್ರ ತೆರೆಕಂಡಿದೆ. ಜ್ಯೋತಿ ಚಿತ್ರ ಮಂದಿರದಲ್ಲಿ ಶ್ರೀದೇವಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಸಮಾರಂಭ ಉದ್ಘಾಟಿಸಿ ಚಿತ್ರಕ್ಕೆ ಶುಭ ಹಾರೈಸಿದರು.
ಸಚಿವ ಯು.ಟಿ. ಖಾದರ್, ಶಾಸಕ ಜೆ.ಆರ್. ಲೋಬೋ, ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿ’ಸೋಜಾ, ಡಾ| ದೇವರಾಜ್ ಕೆ, ಡಾ| ಕೆ.ವಿ. ದೇವಾಡಿಗ, ಡಾ| ಬಿ.ಎಸ್. ಶೇರಿಗಾರ್, ಕೆ.ಜೆ. ದೇವಾಡಿಗ, ಕೆ.ಆರ್. ಶ್ರೀಯಾನ್, ಬಾಲಚಂದ್ರ ಕೆ.ಸಿ., ಕರುಣಾಕರ್ ಎಂ.ಎಚ್, ಆನಂದ್ ದುಬಾೖ, ನಂದಕಿಶೋರ್, ಸೌಜನ್ಯಾ ಹೆಗ್ಡೆ, ಅಶೋಕ್ ಡಿ.ಕೆ., ರಾಜೇಶ್ ಕಲ್ಲಡ್ಕ, ಜಗನ್ನಾಥ್ ಶೆಟ್ಟಿ ಬಾಳ ಮುಖ್ಯ ಅತಿಥಿಗಳಾಗಿದ್ದರು.
ನಿರ್ಮಾಪಕ ಹರೀಶ್ ಶೇರಿಗಾರ್ ಅವರ ಸಹೋದರರಾದ ಪ್ರಕಾಶ್ ಶೇರಿಗಾರ್, ಶ್ರೀನಿವಾಸ್ ಶೇರಿಗಾರ್, ಸುಮಿತ್ರಾ ರಮೇಶ್ ಬಿಜೂರ್, ಸುಮನಾ ಸುಕುಮಾರ್ ಅತಿಥಿಗಳನ್ನು ಸತ್ಕರಿಸಿದರು. ಶೇಖರ್ ಮೊಲಿ ಚಿತ್ರದ ಕುರಿತು ಮಾಹಿತಿ ನೀಡಿದರು. ಶಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.ಜಲ ಜಾಗೃತಿ ಸಾರುವ ಚಿತ್ರ “ಮಾರ್ಚ್ 22′ ಚಿತ್ರ ಸಮಾಜಕ್ಕೆ ಹೊಸ ಮತ್ತು ಅರ್ಥಪೂರ್ಣ ಸಂದೇಶ ನೀಡಲಿದೆ. ಸಾಮಾಜಿಕ ಕಳಕಳಿಯ ಜತೆಗೆ ಸಮಾಜದಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬಲ್ಲ ಸದಭಿರುಚಿಯ ಹೊಂದಿದೆ. ಜೀವಜಲದ ಮಹತ್ವ ಮತ್ತು ಜಾಗೃತಿಯ ಸಂದೇಶ ಸಾರಲಿದೆ.
ದುಬಾೖಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಉದ್ಯಮಿ, ಕನ್ನಡಿಗ ಡಾ| ಬಿ.ಆರ್. ಶೆಟ್ಟಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದು, ಅದು ಬಹಳ ಪ್ರಸಿದ್ಧಿ ಪಡೆದಿದೆ. ನಿರ್ಮಾಪಕ ಹರೀಶ್ ಶೇರಿಗಾರ್ ಹಾಗೂ ಅಕ್ಷತಾ ರಾವ್ ಹಾಡಿರುವ “ಪ್ರೀತಿಗೊಂದು ಸಲಾಂ ಅಂತ ಮನ್ಸು ಅಂತೈತೆ’ ಹಾಡು ಬಹಳಷ್ಟು ಸದ್ದು ಮಾಡಿದೆ.
ತಾರಾಗಣದಲ್ಲಿ ಅನಂತ್‌ನಾಗ್, ವಿನಯಾ ಪ್ರಸಾದ್, ಗೀತಾ, ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈ ಜಗದೀಶ್, ರವಿ ಕಾಲೆ, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ ಮೂರ್ತಿ, ರವೀಂದ್ರನಾಥ್ ಇದ್ದಾರೆ. ಆರ್ಯವರ್ಧನ್ ಮತ್ತು ಕಿರಣ್‌ರಾಜ್ ನಾಯಕರಾಗಿ, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ.ಸಂಗೀತ ನಿರ್ದೇನ ಮಣಿಕಾಂತ್ ಕದ್ರಿ – ಎನ್.ಜೆ. ರವಿಶೇಖರ್ ರಾಜಮಗ, ಹಿನ್ನೆಲೆ ಗಾಯಕರಾಗಿ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಕೈಲಾಶ್ ಖೇರ್, ಕಾರ್ತಿಕ್, ಅನುರಾಧಾ ಭಟ್, ಹರೀಶ್ ಶೇರಿಗಾರ್, ರವಿಶೇಕರ್ ರಾಜಮಗ, ಅಕ್ಷತಾ ರಾವ್, ಮೋಹನ್ ಛಾಯಾಚಿತ್ರಗ್ರಹಣ ನಿರ್ವಹಿಸಿದ್ದಾರೆ.